ಜಿಎಸ್‌ಎಫ್ ಫೌಂಡೇಶನ್, ಭೂ ಸಿರಿ ರೈತ ಉತ್ಪಾದಕರ ಕಂಪನಿ, ಕಂದಾಯ ಇಲಾಖೆ, ಕೃಷಿ ಇಲಾಖೆ, ಅರಣ್ಯ ಇಲಾಖೆ ಹಾಗೂ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ವತಿಯಿಂದ ಬಿತ್ತನೆ ರಾಗಿ ಹಂಚಿಕೆ ಹಾಗೂ ರೈತರತ್ನ ಪ್ರಶಸ್ತಿ ವಿತರಣಾ ಸಮಾರಂಭ ಮಂಡ್ಯ ಜಿಲ್ಲೆಯ ನಾಗಮಂಗಲ ಪಟ್ಟಣದ ಎಪಿಎಂಸಿ ಅಂಗಳದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎನ್. ಚೆಲುವರಾಯಸ್ವಾಮಿ ಧಾನ್ಯಕ್ಕೆ ಪೂಜೆ ಸಲ್ಲಿಸಿ, ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, “ಪ್ರತಿ ವರ್ಷದಂತೆ ಈ ವರ್ಷವೂ ಸಹ ರೈತರಿಗೆ ಬಿತ್ತನೆ ಬೀಜವನ್ನು ಹಂಚಿಕೆ ಕೆಲಸವನ್ನು ಮಾಡಲಾಗುತ್ತಿದೆ. ಕಡಿಮೆ ಇಳುವರಿ ಹೊಂದಿರುವ ಪ್ರದೇಶದಲ್ಲಿ ಸುಮಾರು 4 ಸಾವಿರ ರೈತರನ್ನು ಆಯ್ಕೆ ಮಾಡಿದ್ದು, ಅವರನ್ನು ಪ್ರೋತ್ಸಾಹಿಸಲು ಪ್ರತಿ ಹೆಕ್ಟೇರ್ ಜಮೀನಿಗೆ 6 ಸಾವಿರ ರೂಪಾಯಿ ಪ್ರೋತ್ಸಾಹ ಹಣವನ್ನು ನೀಡಲಾಗುತ್ತಿದೆ. ಅದರಲ್ಲಿ 4.5 ಸಾವಿರ ಪರಿಕರ ಹಾಗೂ 1.5 ಸಾವಿರ ಹಣ ನೇರವಾಗಿ ರೈತರ ಖಾತೆಗೆ ಹಣ ಹಾಕಲಾಗುತ್ತಿದೆ. ಸರಕಾರದ ಯೋಜನೆಗಳನ್ನು ರೈತರು ಉಪಯೋಗ ಪಡಿಸಿಕೊಂಡು ಆರ್ಥಿಕವಾಗಿ ಸಬಲರಾಗಬೇಕು” ಎಂದು ತಿಳಿಸಿದರು.

ಕೊಂಡ ಬಿತ್ತನೆ ಬೀಜ, ರಾಸಾಯನಿಕ ಗೊಬ್ಬರಗಳಿಗೆ ಮಾರಾಟಗಾರರಿಂದ ರೈತರು ಅಧಿಕೃತ ರಶೀದಿ ಪಡೆದುಕೊಳ್ಳಬೇಕು. ಯಾವುದಾರರೂ ತೊಡಕು ಇದ್ದಲ್ಲಿ ಅಧಿಕಾರಿಗಳ ಗಮನಕ್ಕೆ ತನ್ನಿ ಎಂದರು.
ಇದೇ ಸಂದರ್ಭದಲ್ಲಿ ರೈತರಿಗೆ ರಾಗಿ ಬಿತ್ತನೆ ಬೀಜಗಳನ್ನು ಹಂಚಿಕೆ ಮಾಡಿ ಪ್ರಗತಿಪರ ರೈತರಿಗೆ ಸನ್ಮಾನಿಸಲಾಯಿತು.

ನಂತರ ಮೃತ ರೈತರ ಕುಟುಂಬಕ್ಕೆ ಸರಕಾರದ ವತಿಯಿಂದ 5 ಲಕ್ಷ ಪರಿಹಾರದ ಚೆಕ್ ವಿತರಣೆ ಮಾಡಲಾಯಿತು.
ವೇದಿಕೆಯಲ್ಲಿ ಸ್ಟಾರ್ ಚಂದ್ರು, ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಅಶೋಕ್. ಸೇರಿದಂತೆ ಪ್ರಗತಿಪರ ರೈತರು ಹಾಗೂ ಕೃಷಿ, ಅರಣ್ಯ, ತೋಟಗಾರಿಕೆ ಇಲಾಖೆಯ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.
