ಬೆಂಗಳೂರಿನಲ್ಲಿ ನಾನಾ ಕಾರಣಗಳಿಗಾಗಿ ನೆಲೆಸಿರುವ ಕರಾವಳಿಯ ಮುಸ್ಲಿಂ ಸಮುದಾಯವಾಗಿರುವ ‘ಬ್ಯಾರಿ’ಗಳನ್ನು ಒಟ್ಟುಗೂಡಿಸುವ ಉದ್ದೇಶದಿಂದ ಬ್ಯಾರೀಸ್ ಸೆಂಟ್ರಲ್ ಕಮಿಟಿ ಬೆಂಗಳೂರು ಎಂಬ ಯುವಕರ ಸಂಘಟನೆಯು ಇದೀಗ ದೊಡ್ಡ ಸಮ್ಮೇಳನವೊಂದಕ್ಕೆ ಕೈ ಹಾಕಿದ್ದು, ಪ್ಯಾಲೇಸ್ ಗ್ರೌಂಡ್‌ನಲ್ಲಿ ಫೆಬ್ರವರಿ 26ರಂದು ‘ಬ್ಯಾರಿ ಕೂಟ’ವನ್ನು ಆಯೋಜಿಸಿದ್ದು, ಒಂದು ದಿನವನ್ನು ಅದಕ್ಕಾಗಿಯೇ ಮೀಸಲಿಟ್ಟು ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ.
“ಇದ್ ಬೆಂಗಳೂರ್ ಬ್ಯಾರಿಙಲೋ ಗಮ್ಮತ್ತ್ …” ಎಂಬ ಧ್ಯೇಯವಾಕ್ಯವನ್ನಿಟ್ಟುಕೊಂಡು ಬ್ಯಾರಿ ಸಮುದಾಯದ ಯುವಕರೇ ಕಟ್ಟಿಕೊಂಡಿರುವ ಬ್ಯಾರೀಸ್ ಸೆಂಟ್ರಲ್ ಕಮಿಟಿಯವರು ಬುಧವಾರದಂದು ರಾಜಧಾನಿಯ ಪ್ಯಾಲೇಸ್ ಗ್ರೌಂಡ್‌ನಲ್ಲಿರುವ ಶೃಂಗಾರ್ ಪ್ಯಾಲೇಸ್ ಮೈದಾನದಲ್ಲಿ ಈ ಕೂಟವನ್ನು ಹಮ್ಮಿಕೊಂಡಿದ್ದಾರೆ.
ಬ್ಯಾರಿ ಕೂಟದ ಭಾಗವಾಗಿ ರಕ್ತದಾನ ಶಿಬಿರ, ಬಿಝ್‌ಟೆಕ್ ಮೀಟ್, ಯಾಸಿರ್ ಕಲ್ಲಡ್ಕರವರು ಸಂಗ್ರಹಿಸಿದ ಹಳೆಯ ವಸ್ತುಗಳ ವಿಶೇಷ ಪ್ರದರ್ಶನ, ಕುಕ್ಕಿಂಗ್ ವಿದೌಟ್ ಫೈರ್, ಮಕ್ಕಳಿಗಾಗಿ ಕಾರ್ಯಕ್ರಮ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದ ಜೊತೆಗೆ ಕವಿಗೋಷ್ಠಿಯನ್ನು ಕೂಡ ಹಮ್ಮಿಕೊಳ್ಳಲಾಗಿದೆ. ಈ ಎಲ್ಲ ಕಾರ್ಯಕ್ರಮದಲ್ಲಿ ಆಯಾ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಬ್ಯಾರಿ ಸಮುದಾಯದ ಸಾಧಕರು ಭಾಗವಹಿಸಲಿದ್ದಾರೆ. ಅಲ್ಲದೇ, ವಿಶೇಷ ಆಕರ್ಷಣೆಯಾಗಿ ಕರಾವಳಿಯ ತಿಂಡಿ ತಿನಿಸುಗಳು ಇರಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಬಾಂಗ್ಲಾದೇಶದ ಖ್ಯಾತ ಚಿತ್ರ ನಿರ್ದೇಶಕ ಝಾಹಿದುರ್ ರಹೀಮ್ ಅಂಜನ್ ಬೆಂಗಳೂರಿನಲ್ಲಿ ನಿಧನ
ಬೆಂಗಳೂರಿನಲ್ಲಿ ನಾನಾ ಕಾರಣಗಳಿಗಾಗಿ ನೆಲೆಸಿರುವ ಎಲ್ಲರನ್ನೂ ಒಂದುಗೂಡಿಸುವ ನಿಟ್ಟಿನಲ್ಲಿ ಆರಂಭಿಸಿದ ಯುವಕರ ಸಂಘಟನೆಯೇ ಬ್ಯಾರೀಸ್ ಸೆಂಟ್ರಲ್ ಕಮಿಟಿ ಬೆಂಗಳೂರು. ಇದು ಬೆಂಗಳೂರಿನಲ್ಲಿ ವಾಸಿಸುವ ಬ್ಯಾರಿಗಳ ಸಮಗ್ರ ಅಭಿವೃದ್ಧಿಯ ದೃಷ್ಟಿಕೋನ ಇಟ್ಟು ಸ್ಥಾಪಿಸಲ್ಪಟ್ಟ ಒಂದು ಚಳುವಳಿಯಾಗಿದೆ. ಇಲ್ಲಿ ಪಕ್ಷ, ಸಂಘಟನಾ, ಮತ್ತು ಆಶಯ ಭೇದಭಾವಗಳಿಲ್ಲ ಎಂದು ಬ್ಯಾರೀಸ್ ಸೆಂಟ್ರಲ್ ಕಮಿಟಿ ಬೆಂಗಳೂರು ಇದರ ಅಧ್ಯಕ್ಷರಾದ ಶಬೀರ್ ಬ್ರಿಗೇಡ್ ತಿಳಿಸಿದ್ದಾರೆ.
ಬ್ಯಾರಿ ಕೂಟಕ್ಕೆ ಸ್ಪೀಕರ್ ಯು ಟಿ ಖಾದರ್ ಸಹಿತ ಹಲವು ಮಂದಿ ಗಣ್ಯರು ಭಾಗವಹಿಸಲಿದ್ದಾರೆ. ಬ್ಯಾರಿ ಕೂಟದಲ್ಲಿ ಸಾಧ್ಯವಿರುವ ಎಲ್ಲ ಬೆಂಗಳೂರಿನ ಬ್ಯಾರಿಗಳು ತಮ್ಮ ಕೆಲಸ ಕಾರ್ಯಗಳನ್ನು ಒಂದು ದಿನ ಬದಿಗಿಟ್ಟು ಭಾಗವಹಿಸಬೇಕು. ಒಂದೇ ಸಮುದಾಯದ ಜನರನ್ನು ಒಟ್ಟು ಸೇರಿಸಲು ನಮ್ಮ ಪ್ರಯತ್ನಕ್ಕೆ ಸಾಥ್ ನೀಡಬೇಕು. ಎಂದು ಶಬೀರ್ ಬ್ರಿಗೇಡ್ ವಿನಂತಿಸಿಕೊಂಡಿದ್ದಾರೆ.


