ಹೆಣ್ಣುಭ್ರೂಣ ಹತ್ಯೆ ಪ್ರಕರಣ: 9 ಮಂದಿ ಆರೋಪಿಗಳ ಬಂಧನ; ಹಲವರ ಕೈವಾಡವಿರುವ ಶಂಕೆ

Date:

Advertisements

ಭ್ರೂಣ ಲಿಂಗ ಪತ್ತೆ ಹಾಗೂ ಗರ್ಭಪಾತ ಪ್ರಕರಣದ ಆರೋಪಿಗಳು 1,500ಕ್ಕೂ ಅಧಿಕ ಭ್ರೂಣ ಹತ್ಯೆ ಮಾಡಿಸಿರುವ ಸಂಚು ಪೊಲೀಸರ ತನಿಖೆಯಲ್ಲಿ ಗೊತ್ತಾಗಿದೆ. ಆರೋಪಿಗಳ ಪೈಕಿ ಭ್ರೂಣಲಿಂಗ ಪತ್ತೆಗೆ ಒಂದು ತಂಡ, ಹತ್ಯೆಗೆ ಮತ್ತೊಂದು ತಂಡ ಕೆಲಸ ಮಾಡಿದ್ದು, ಆರೋಪಿಗಳ ಕರೆ ವಿವರಗಳನ್ನು ಕಲೆಹಾಕಿದಾಗ ವೈದ್ಯರು ಸೇರಿದಂತೆ ಅನೇಕರ ಸಂಪರ್ಕ ಹೊಂದಿರುವುದು ಪತ್ತೆಯಾಗಿದೆ.

ಆರೋಪಿಗಳೊಂದಿಗೆ ಸಂಪರ್ಕ ಹೊಂದಿದ್ದವರನ್ನು ಸಂಪರ್ಕಿಸಲು ಪೊಲೀಸರು ಪ್ರಯತ್ನಿಸುತ್ತಿದ್ದು, ಪ್ರಕರಣ ಬಯಲಾಗುತ್ತಿದ್ದಂತೆ ಅನೇಕರು ಫೋನ್ ಕರೆ ಸ್ವೀಕರಿಸುತ್ತಿಲ್ಲ ಎಂಬುದು ತಿಳಿದುಬಂದಿದೆ. ಆರೋಪಿಗಳು ವ್ಯವಸ್ಥಿತವಾಗಿ ಜಾಲ ರೂಪಿಸಿಕೊಂಡು ದುಷ್ಕೃತ್ಯ ಎಸಗುತ್ತಿದ್ದು, ಪ್ರಕರಣದಲ್ಲಿ ಈವರೆಗೆ 9 ಆರೋಪಿಗಳನ್ನು ಬಂಧಿಸಲಾಗಿದ್ದು, ಬಂಧಿತರೆಲ್ಲರೂ ಮೂಲತಃ ಮೈಸೂರು ಹಾಗೂ ಮಂಡ್ಯದವರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಭ್ರೂಣಲಿಂಗ ಪತ್ತೆ ಹಾಗೂ ಗರ್ಭಪಾತ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಬೆಂಗಳೂರಿನ ಬೈಯಪ್ಪನಹಳ್ಳಿ ಠಾಣೆ ಪೊಲೀಸರು, ಬಂಧಿತರು ವಿಚಾರಣೆ ವೇಳೆ ನೀಡಿದ ಮಾಹಿತಿ ಆಧರಿಸಿ ತಲೆಮರೆಸಿಕೊಂಡಿರುವ ಚೆನ್ನೈ, ಮೈಸೂರು, ಮಂಡ್ಯ ಮೂಲದ ಆರೋಪಿಗಳ ಬಂಧನಕ್ಕೆ ಪೊಲೀಸರು ಮುಂದಾಗಿದ್ದಾರೆ.

Advertisements

“ಚೆನ್ನೈನ ಡಾ.ತುಳಸಿರಾಮ್, ಮೈಸೂರಿನ‌ ಮಾತಾ ಆಸ್ಪತ್ರೆ ಹಾಗೂ ಅಲ್ಲಿನ ರಾಜ್‌ಕುಮಾರ್ ರಸ್ತೆಯಲ್ಲಿರುವ ಆಯುರ್ವೇದಿಕ್ ಡೇ ಕೇರ್ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದ ಡಾ. ಚಂದನ್ ಬಲ್ಲಾಳ್‌, ಆತನ ಪತ್ನಿ ಮೀನಾ, ಸ್ವಾಗತಗಾರ್ತಿ ರಿಜ್ಮಾ, ಲ್ಯಾಬ್ ಟೆಕ್ನಿಷಿಯನ್‌ ನಿಸ್ಸಾರ್, ಶಿವನಂಜೇಗೌಡ, ವೀರೇಶ್, ನವೀನ್‌ಕುಮಾರ್, ನಯನ್‌ಕುಮಾರ್ ಅವರನ್ನು ಇದುವರೆಗೆ ಬಂಧಿಸಲಾಗಿದೆ. ಈ ಆರೋಪಿಗಳ ಜತೆಗೆ ಇನ್ನೂ ಹಲವರು ಕೈಜೋಡಿಸಿರುವ ಶಂಕೆ ವ್ಯಕ್ತವಾಗಿದೆ” ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

“ಆರೋಪಿಗಳು ಭ್ರೂಣ ಲಿಂಗ ಪತ್ತೆ ಹಾಗೂ ಗರ್ಭಪಾತಕ್ಕೆ ವ್ಯವಸ್ಥಿತ ಜಾಲ ರೂಪಿಸಿಕೊಂಡಿದ್ದರು. ಪ್ರಯೋಗಾಲಯ ಮಾಡಿಕೊಂಡಿದ್ದ ಆಲೆಮನೆಗೂ ಭೇಟಿ ನೀಡಿ ಪರಿಶೀಲಿಸಲಾಗಿದೆ. ಅಲ್ಲಿ ಸ್ಕ್ಯಾನಿಂಗ್‌ ಯಂತ್ರ ಪತ್ತೆಯಾಗಿದೆ. ಆರೋಪಿಗಳು ₹4 ಕೋಟಿಯಿಂದ ₹5 ಕೋಟಿಯಷ್ಟು ವ್ಯವಹಾರ ನಡೆಸಿದ್ದಾರೆ. ಎಲ್ಲ ಆರೋಪಿಗಳ ಬ್ಯಾಂಕ್‌ ಖಾತೆ, ಆನ್‌ಲೈನ್‌ ವಹಿವಾಟು ಪರಿಶೀಲನೆ ನಡೆಸಲಾಗಿದೆ” ಎಂದು ಹೇಳಿದ್ದಾರೆ.

“ಮಂಡ್ಯ ಜಿಲ್ಲೆಯ ಮೇಲುಕೋಟೆ ರಸ್ತೆಯಲ್ಲಿರುವ ಆಲೆಮನೆಯನ್ನೇ ಈ ತಂಡ ಭ್ರೂಣಲಿಂಗ ಪರೀಕ್ಷೆಯ ಪ್ರಯೋಗಾಲಯವನ್ನಾಗಿ ಮಾಡಿಕೊಂಡಿತ್ತು. ಅಲ್ಲಿಗೆ ಮಧ್ಯವರ್ತಿಗಳು, ಭ್ರೂಣಲಿಂಗ ಪತ್ತೆ ಪರೀಕ್ಷೆಗೆ ಗರ್ಭಿಣಿಯರನ್ನು ಕರೆ ತರುತ್ತಿದ್ದರು. ನಕಲಿ ವೈದ್ಯ ವೀರೇಶ್, ಸ್ಕ್ಯಾನಿಂಗ್‌ ಯಂತ್ರದ ಮೂಲಕ ಭ್ರೂಣ ಪತ್ತೆ ಮಾಡುತ್ತಿದ್ದ. ಹೆಣ್ಣುಭ್ರೂಣ ಎಂಬುದು ತಿಳಿದಾಗ ಅಲ್ಲಿಂದ ಮೈಸೂರಿನ ಡೇ ಕೇರ್ ಸೆಂಟರ್‌ಗೆ ಆರೋಪಿಗಳೇ ಕರೆದೊಯ್ಯುತ್ತಿದ್ದರು. ಯಾರಿಗೂ ಅನುಮಾನ ಬಾರದಂತೆ ತಂತ್ರ ರೂಪಿಸಿಕೊಂಡಿದ್ದರು. ಆ ಸೆಂಟರ್‌ನಲ್ಲಿ ಗರ್ಭಿಣಿಯನ್ನು ಎರಡರಿಂದ ಮೂರು ದಿನ ಇರಿಸಿಕೊಂಡು ಗರ್ಭಪಾತ ಮಾತ್ರೆ ನೀಡುತ್ತಿದ್ದರು. ಗರ್ಭಪಾತವಾದ ಮೇಲೆ ಕಳುಹಿಸುತ್ತಿದ್ದರು” ಎಂದು ಪೊಲೀಸರು ಹೇಳಿದರು.

ಈ ಪ್ರಕರಣದಲ್ಲಿ ಮೈಸೂರಿನ ಚಂದನ್ ಬಲ್ಲಾಳ್‌ ಹಾಗೂ ಚೆನ್ನೈನ ಮಕ್ಕಳ ತಜ್ಞ ತುಳಸಿರಾಮ್ ಪ್ರಮಮುಖ ಆರೋ‍ಪಿಗಳು ಎಂಬುದು ಪೊಲೀಸ್ ತನಿಖೆಯಿಂದ ಬಯಲಾಗಿದೆ.

ತುಳಸಿರಾಮ್ ಅವರ ತಾಯಿ ಸ್ತ್ರೀರೋಗ ತಜ್ಞೆಯಾಗಿದ್ದರು. ಅವರು ಮೈಸೂರಿನ ಉದಯಗಿರಿಯಲ್ಲಿ ‘ಲತಾ ಆಸ್ಪತ್ರೆ’ ನಡೆಸುತ್ತಿದ್ದರು. ಈತ ಕೂಡ ಮಕ್ಕಳ ತಜ್ಞನಾಗಿ ಅದೇ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ. ತಾಯಿ ಮೃತಪಟ್ಟ ಬಳಿಕ ಅಕ್ರಮ ದಂಧೆಗೆ ಕೈಹಾಕಿದ್ದ ತುಳಸಿರಾಮ್, ಹೆಣ್ಣು ಭ್ರೂಣ ಪತ್ತೆ ಹಚ್ಚಿ ಗರ್ಭಪಾತ ಮಾಡಿಸುತ್ತಿದ್ದ ಎಂದು ಪೊಲೀಸರು ಹೇಳಿದರು.

ಈ ಸುದ್ದಿ ಓದಿದ್ದೀರಾ? ಮಂಡ್ಯ | ಹೆಣ್ಣುಭ್ರೂಣ ಹತ್ಯೆ ಪ್ರಕರಣ ಹೆಚ್ಚಳ; ಆರೋಗ್ಯಾಧಿಕಾರಿಗಳ ವಿರುದ್ಧ ಆರೋಪ

“ವೈಯಕ್ತಿಕ ಕಾರಣಕ್ಕೆ ಕುಟುಂಬ ಸಮೇತ ಚೆನ್ನೈಗೆ ಸ್ಥಳಾಂತರಗೊಂಡಿದ್ದ ತುಳಸಿರಾಮ್‌, ತನ್ನ ‘ಲತಾ ಆಸ್ಪತ್ರೆ’ಯನ್ನು ಚಂದನ್ ಬಲ್ಲಾಳ್‌ಗೆ ಮಾರಾಟ ಮಾಡಿದ್ದ. ಅದನ್ನು ಚಂದನ್, ಮಾತಾ ಎಂದು ಹೆಸರು ಬದಲಿಸಿಕೊಂಡಿದ್ದ. ಅದಕ್ಕೆ ಪತ್ನಿ ಮೀನಾಳನ್ನು ವ್ಯವಸ್ಥಾಪಕ ನಿರ್ದೇಶಕಿಯಾಗಿ ನೇಮಿಸಿಕೊಂಡಿದ್ದ” ಎಂದು ಹೇಳಿದ್ದಾರೆ.

“ಚಂದನ್ ಬಲ್ಲಾಳ್ ಮಾತಾ ಆಸ್ಪತ್ರೆಯ ಮೇಲ್ಭಾಗದಲ್ಲಿ ಪ್ರತ್ಯೇಕ ಕೊಠಡಿ ಹಾಗೂ ರೋಗಿಗಳ ಕೋಣೆ ನಿರ್ಮಿಸಿಕೊಂಡಿದ್ದ. ತುಳಿಸಿರಾಮ್ ಚೆನ್ನೈನಲ್ಲಿದ್ದುಕೊಂಡೇ ಮಧ್ಯವರ್ತಿಗಳಾದ ವೀರೇಶ್, ಶಿವಲಿಂಗೇಗೌಡ ಎಂಬುವರ ಮೂಲಕ ಗರ್ಭಪಾತ ಮಾಡಿಸಿಕೊಳ್ಳುವವರ ಪತ್ತೆ ಮಾಡಿ ಚಂದನ್ ಬಲ್ಲಾಳ್ ಆಸ್ಪತ್ರೆಗೆ ಕಳುಹಿಸುತ್ತಿದ್ದ” ಎಂದು ತನಿಖಾಧಿಕಾರಿಗಳು ಹೇಳಿದರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ | ಕಡಿಮೆ ದರದಲ್ಲಿ ಊಟ ಉಪಾಹಾರ ಒದಗಿಸುವ ಅಕ್ಕ ಕೆಫೆ ಪ್ರಾರಂಭ

ಉಡುಪಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಉಡುಪಿ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ...

ಸಕಲೇಶಪುರ | ಸಮಾಜ ವ್ಯಸನಮುಕ್ತವಾದಾಗ ಮಾತ್ರ ನೆಮ್ಮದಿಯ ಬದುಕು ಸಾಧ್ಯ: ಅವಿನಾಶ್‌ ಕಾಕಡೆ

ಸಮಾಜ ವ್ಯಸನಮುಕ್ತವಾದಾಗ ಮಾತ್ರ ನೆಮ್ಮದಿಯ ಬದುಕು ಸಾಧಿಸಲು ಸಾಧ್ಯ. ಹಾಗಾಗಿ ಮನೆಯಿಂದಲೇ...

ಯಾದಗಿರಿ | ಅತಿವೃಷ್ಟಿಯಿಂದ ಬೆಳೆ ಹಾನಿ: ರೈತರಿಗೆ ಪರಿಹಾರ ನೀಡುವಂತೆ ಆಗ್ರಹ

ಯಾದಗಿರಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿದ ರೈತರಿಗೆ ಸಮೀಕ್ಷೆ ನಡೆಸಿ ಶೀಘ್ರದಲ್ಲಿ...

ಗುಬ್ಬಿ | ಜನಪದ ಸಾಹಿತ್ಯ ಎಂದೆಂದಿಗೂ ಜೀವಂತ : ಡಾ.ಮೂರ್ತಿ ತಿಮ್ಮನಹಳ್ಳಿ

ಕನ್ನಡ ಸಾಹಿತ್ಯ ಲೋಕದಲ್ಲಿ ಹಲವು ಪ್ರಕಾರಗಳ ಪೈಕಿ ಜನಪದ ಸಾಹಿತ್ಯ...

Download Eedina App Android / iOS

X