ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ತಾಲ್ಲೂಕು ವ್ಯಾಪ್ತಿಯಲ್ಲಿ ನಡೆದಿದ್ದ ಬಾಲ್ಯ ವಿವಾಹ ಪ್ರಕರಣ ಒಂದರಲ್ಲಿ ಬಾಲಕಿಯ ಪತಿ, ತಂದೆ-ತಾಯಿ ಮತ್ತು ಅತ್ತೆ-ಮಾವ ಸೇರಿ ಒಟ್ಟು ಐವರಿಗೆ ಒಂದು ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಲಾಗಿದೆ.
ಜಿಲ್ಲೆಯ ಮೊಂಟೆಪದವು ನಿವಾಸಿ ಮೊಹಮ್ಮದ್ ಇಂತಿಯಾಝ್ ಯಾನೆ ಇಮ್ಮಿಯಾಝ್ (29) ಅವರಿಗೆ 17 ವರ್ಷದ ಬಾಲಕಿಯ ಜೊತೆ 2023 ಮೇ 31ರಂದು ವಿವಾಹ ಮಾಡಲಾಗಿತ್ತು. ವಿವಾಹವು ಇಂತಿಯಾಝ್ ಮನೆಯಲ್ಲೇ ನಡೆದಿತ್ತು.
ಇದನ್ನು ಓದಿದ್ದೀರಾ? ಚಿತ್ರದುರ್ಗ | ಬಾಲ್ಯ ವಿವಾಹಕ್ಕೆ ಒಳಗಾಗುತ್ತಿದ್ದ ಬಾಲಕಿಯ ರಕ್ಷಣೆ; ಪೋಷಕರಿಗೆ ಎಚ್ಚರಿಕೆ
ಬಾಲ್ಯ ವಿವಾಹ ನಡೆದಿರುವ ಸುದ್ದಿ ತಿಳಿಯುತ್ತಿದ್ದಂತೆ ಪಾಂಡೇಶ್ವರದಲ್ಲಿರುವ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ವಿಚಾರಣೆ ನಡೆಸಿದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಪೋಕ್ಸೋ ವಿಶೇಷ ನ್ಯಾಯಾಲಯ ಐವರನ್ನು ದೋಷಿಗಳೆಂದು ತೀರ್ಪು ನೀಡಿದೆ. ಜೊತೆಗೆ ಐವರಿಗೂ ಒಂದು ವರ್ಷ ಕಠಿಣ ಜೈಲು ಸಜೆ ಮತ್ತು 35 ಸಾವಿರ ರೂಪಾಯಿ ದಂಡವನ್ನು ವಿಧಿಸಿದೆ.
ಅಪರಾಧಿಗಳನ್ನು ಬಾಲಕಿಯ ಪತಿ ಮೊಹಮ್ಮದ್ ಇಂತಿಯಾಝ್ ಯಾನೆ ಇಮ್ಮಿಯಾಝ್ (29), ಆತನ ತಂದೆ ಮಂಜನಾಡಿಯ ಕೆ.ಐ.ಮೊಹಮ್ಮದ್, ತಾಯಿ ಮೈಮುನಾ, ಬಾಲಕಿಯ ಮಾವ ಬಂಟ್ವಾಳದ ರಾಮಲ್ ಕಟ್ಟೆಯ ಅಬ್ದುಲ್ ಖಾದರ್ ಮತ್ತು ಅತ್ತೆ ರಮ್ಲತ್ ಎಂದು ಗುರುತಿಸಲಾಗಿದೆ.
ಮಂಗಳೂರು ಮಹಿಳಾ ಪೊಲೀಸ್ ಠಾಣೆಯ ನಿರೀಕ್ಷಕ ರಾಜೇಂದ್ರ ಬಿ ಅವರು ತನಿಖೆ ಪೂರ್ಣಗೊಳಿಸಿ ಆರೋಪಿಗಳ ವಿರುದ್ಧ ಪೊಕ್ಸೋ ಕಾಯ್ದೆಯ ಕಲಂ 6 ಮತ್ತು ಬಾಲ್ಯ ವಿವಾಹ ನಿಷೇಧ ಕಾಯ್ದೆಯ ಕಲಂ 9, 10, 11ರಂತೆ ದೋಷಾರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
