ಕೃಷ್ಣರಾಜ ಸಾಗರ ಜಲಾಶಯದಿಂದ 1,70,000 ಕ್ಯುಸೆಕ್ ಹೊರಹರಿವು ನೀರನ್ನು ಬಿಡಲಾಗುತ್ತಿರುವ ಹಿನ್ನೆಲೆಯಲ್ಲಿ ತಗ್ಗಿನಲ್ಲಿರುವ ಪಾಂಡವಪುರ ತಾಲೂಕಿನ ಎಣ್ಣೆಹೊಳೆ ಗ್ರಾಮವು ಮುಳುಗಡೆಯಾಗುವ ಭೀತಿ ಎದುರಾಗಿದೆ.
ಕಾವೇರಿ ಜಲಾನಯನ ಪ್ರದೇಶದಲ್ಲಿ ನಿರಂತರವಾಗಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೃಷ್ಣರಾಜಸಾಗರ ಜಲಾಶಯಕ್ಕೆ ಒಳಹರಿವು ಪ್ರಮಾಣ ಹೆಚ್ಚಾಗುತ್ತಿದೆ. ಹೊರ ಹರಿವು ಇನ್ನೂ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಎಣ್ಣೆಹೊಳೆ ಗ್ರಾಮ ಹೊರ ಜಗತ್ತಿನೊಂದಿಗೆ ಸಂಪರ್ಕ ಕಡಿತವಾಗುವ ಆತಂಕ ಗ್ರಾಮಸ್ಥರಲ್ಲಿ ಮನೆ ಮಾಡಿದೆ.

ಪಾಂಡವಪುರ ತಾಲೂಕಿನಲ್ಲಿ ಪ್ರತಿ ವರ್ಷ ಕಾವೇರಿಯಲ್ಲಿ ಪ್ರವಾಹ ಬಂದಾಗ ಮುಳುಗಡೆಯ ಭೀತಿ ಎದುರಿಸು ತಗ್ಗಿನಲ್ಲಿರುವ ಏಕೈಕ ಗ್ರಾಮ ಎಣ್ಣೆಹೊಳೆ.
ಸಣ್ಣ ನೀರಾವರಿ ಇಲಾಖೆಯಿಂದ ಸುಮಾರು 8 ಕೋಟಿ ವೆಚ್ಚದಲ್ಲಿ ಮೂರು ವರ್ಷಗಳ ಹಿಂದೆ ಯೋಜನಾಬದ್ಧವಾದ ತಡೆಗೋಡೆ ನಿರ್ಮಿಸದೆ, ಅವೈಜ್ಞಾನಿಕವಾಗಿ ನಿರ್ಮಾಣ ಮಾಡಿರುವುದರಿಂದ ಗ್ರಾಮದೊಳಗೆ ಪ್ರವಾಹದ ನೀರು ನುಗ್ಗುವುದನ್ನು ತಡೆಯಲು ವಿಫಲವಾಗಿದೆ.

ಊರಿನ ಒಂದು ಕಡೆಯಿಂದ ಕಾವೇರಿ ನದಿಯ ನೀರು ಬರುತ್ತದೆ ಹಾಗೂ ಇನ್ನೊಂದು ಕಡೆಯಿಂದ ಕಾಲುವೆಯ ನೀರು ಬಂದು ಸೇರುವ ಕೊಲ್ಲಿಯ ಜಾಗದಲ್ಲಿ ರಭಸ ಹೆಚ್ಚಾಗಿ, ನೀರು ಒತ್ತರಿಸಿಕೊಳ್ಳುತ್ತದೆ. ಈ ಭಾಗದಲ್ಲಿ ತಡೆಗೋಡೆ ಇಲ್ಲದ ಕಾರಣ ಊರ ಕಡೆಗೆ ನೀರು ನುಗ್ಗುತ್ತದೆ. ಇನ್ನೂ 20000 ಕ್ಯುಸೆಕ್ ನೀರು ಹೆಚ್ಚಾದರೆ ಕ್ಯಾತನಹಳ್ಳಿಗೆ ಹೋಗುವ ಸಂಪರ್ಕ ರಸ್ತೆ ಕಡಿತವಾಗುವ ಭೀತಿ ಎದುರಾಗಿದೆ.
ಜಿಲ್ಲಾಡಳಿತ, ಕಾವೇರಿ ನೀರಾವರಿ ನಿಗಮ ಹಾಗೂ ಸಣ್ಣ ನೀರಾವರಿ ಇಲಾಖೆ ಇವರೆಲ್ಲ ಗಮನಹರಿಸಿ ಪ್ರಕೃತಿ ವಿಕೋಪ ನಿಧಿಯಿಂದ ತುರ್ತು ಕಾಮಗಾರಿಯನ್ನು ಕೈಗೊಂಡು ಪ್ರವಾಹದ ಪ್ರಭಾವವನ್ನು ತಡೆಯಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘದ ಎಣ್ಣೆ ಹೊಳೆ ರಘು ಒತ್ತಾಯಿಸಿದ್ದಾರೆ.

ಈ ಮೊದಲು ಬಿದ್ದ ಮಳೆಯ ನೀರು ಚರಂಡಿಯ ಮೂಲಕ ಸರಾಗವಾಗಿ ಊರಿಂದ ಹೊರಹರಿದು ಹೋಗಿ ನದಿಯನ್ನು ಸೇರುತ್ತಿತ್ತು. ಅವೈಜ್ಞಾನಿಕವಾಗಿ ತಡೆಗೋಡೆಯನ್ನು ನಿರ್ಮಿಸಿದ ಕಾರಣ ನೀರು ಊರಲ್ಲಿ ಶೇಖರಣೆಯಾಗಿ ನಿಂತು ರೋಗರುಜಿನಗಳಿಗೆ ಕಾರಣವಾಗುತ್ತಿದೆ. ಇದನ್ನು ತುರ್ತಾಗಿ ಸರಿಪಡಿಸಬೇಕಾಗಿದೆ ಎಂದು ಒತ್ತಾಯಿಸಿದರು.
ಪ್ರತಿ ಸಲವೂ ಕಾವೇರಿ ನದಿಯಲ್ಲಿ ನೀರು ಹೆಚ್ಚಾದಂತೆ ಎಣ್ಣೆಹೊಳೆ ಗ್ರಾಮದಲ್ಲಿ ಮುಳುಗಡೆಯ ಭೀತಿ ಎದುರಾಗುತ್ತದೆ. ಇದರ ಬಗ್ಗೆ ಸರ್ಕಾರಗಳು ವಿಶೇಷ ಕಾಳಜಿ ವಹಿಸಿ ಗ್ರಾಮದಲ್ಲಿ ಆಗಿರುವ ಅವ್ಯವಸ್ಥೆಯನ್ನು ತುರ್ತಾಗಿ ಸರಿಪಡಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.


