ಜನಪದ ವಾದ್ಯಗಳು ಮನರಂಜನೆಗಾಗಿ ಹುಟ್ಟಿಕೊಳ್ಳದೆ ಶ್ರಮಿಕ ವರ್ಗದ ಮತ್ತು ಕಲಾವಿದರ ದನಿಯಾಗಿವೆ. ಅವು ಜನರ ಬದುಕಿನ ನೋವು ಮರೆಸುತ್ತವೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಲಬುರಗಿ ವಿಭಾಗೀಯ ಜಂಟಿ ನಿರ್ದೇಶಕ ಬಸವರಾಜ ಹೂಗಾರ ಹೇಳಿದರು.
ಸಾಹಿತ್ಯರತ್ನ ಅಣ್ಣಾಭಾವು ಸಾಠೆ ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ಲೋಕ ಮಂಚ್ ಟ್ರಸ್ಟ್ ವತಿಯಿಂದ ಬೀದರ್ ನಗರದ ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ಶನಿವಾರ ಜರುಗಿದ ಜಾನಪದ ಸಂಭ್ರಮ, ಕವಿಗೋಷ್ಟಿ, ವಿಚಾರ ಸಂಕಿರಣ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ʼಅಣ್ಣಾಭಾವು ಸಾಠೆಯವರ ಜನ್ಮದಿನದ ಪ್ರಯುಕ್ತ ಇಂದು ಸಂವಿಧಾನದ ಕುರಿತು ಕವಿಗೋಷ್ಟಿ ಆಯೋಜಿಸಿದ್ದು ಶ್ಲಾಘನೀಯ. ಮಾತನಾಡಲು, ಅಭಿವ್ಯಕ್ತಪಡಿಸಲು ಆಗದೇ ಇರುವಂತಹ ಇಂದಿನ ದಯನೀಯ ಸ್ಥಿತಿಯಲ್ಲಿ ಕವಿತೆ, ವಾದ್ಯಗಳ ಮೂಲಕ ಸಂವಿಧಾನ ಆಶಯಗಳನ್ನು ಜನಮನಕ್ಕೆ ತಲುಪಿಸಲು ಕವಿಗೋಷ್ಠಿ ಹಮ್ಮಿಕೊಂಡಿದ್ದು ಅಭಿನಂದನೀಯ ಕಾರ್ಯವಾಗಿದೆʼ ಎಂದರು.
ʼಡಾ. ಬಾಬಾ ಸಾಹೇಬರು ಸಮುದ್ರವಿದ್ದಂತೆ. ಅಪಾರ ಜ್ಞಾನ ಭಂಡಾರ ನೀಡಿದ್ದಾರೆ. ಅವರ ವಿಚಾರಧಾರೆಗಳು ಮುನ್ನಡೆಸಿಕೊಂಡು ಬಂದ ಅಣ್ಣಾಭಾವು ಸಾಠೆಯಾಗಿದ್ದಾರೆ. ಬುದ್ಧ, ಬಸವ, ಅಂಬೇಡ್ಕರ್, ಅಣ್ಣಾಭಾವು ಸಾಠೆ ಇವರೆಲ್ಲ ಪಂಥಗಳಾಚೆ ಬೆಳೆದವರು. ಇಡೀ ರಾಜ್ಯಕ್ಕೆ ಸಾಂಸ್ಕೃತಿಕ ರಾಜಧಾನಿಯಾಗಿದ್ದು ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳು. ಇಲ್ಲಿಯ ಸಾಂಸ್ಕೃತಿಕ ನಾಯಕರ ಜೀವನ ಮತ್ತು ಆದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಆಚರಿಸಬೇಕುʼ ಎಂದರು.

ಅಧ್ಯಕ್ಷತೆ ವಹಿಸಿದ್ದ ಟ್ರಸ್ಟ್ ಅಧ್ಯಕ್ಷ ಮನೋಹರ ಮಾಳಗೆ ಮಾತನಾಡಿ, ʼಸಂವಿಧಾನ ಮತ್ತು ಸಾಠೆಯವರ ಸಾಹಿತ್ಯ ಸಂಶೋಧನೆಯನ್ನು ಮನೆ-ಮನೆಗೆ ತಲುಪಿಸುವ ಕಾರ್ಯ ನಾವು ಮಾಡುತ್ತಿದ್ದೇವೆ. ಕೇವಲ ಒಂದೂವರೆ ದಿವಸ ಶಾಲೆಗೆ ಹೋಗಿ ನೂರಕ್ಕೂ ಅಧಿಕ ಸಾಹಿತ್ಯ ಕೃತಿ ರಚಿಸಿದ ಕೀರ್ತಿ ಅಣ್ಣಾಭಾವು ಸಾಠೆಯವರಿಗೆ ಸಲ್ಲುತ್ತದೆ. ಸಾಠೆಯವರ ಸಾಹಿತ್ಯ ಮನುಕುಲಕ್ಕೆ ದಾರಿದೀಪವಾಗಿವೆ. ಶೋಷಿತ ಸಮುದಾಯದಲ್ಲಿ ಜನಿಸಿ ಉತ್ತುಂಗಕ್ಕೆ ಬೆಳೆದ ಸಾಠೆಯವರು ಜನಮನ ಪರಿವರ್ತಿಸಿದ್ದಾರೆ. ಒಮ್ಮೆ ಮರಾಠಿಯಿಂದ ಕನ್ನಡಕ್ಕೆ ತರ್ಜುಮೆಗೊಂಡ ಸಾಠೆಯವರ ಪುಸ್ತಕ ಓದಿ ಈ ಟ್ರಸ್ಟ್ ಸ್ಥಾಪನೆ ಮಾಡಿದ್ದೇವೆʼ ಎಂದರು.
ಕರ್ನಾಟಕ ಜಾನಪದ ಅಕಾಡೆಮಿ ಸಹ ಸದಸ್ಯ ವಿಜಯಕುಮಾರ ಸೋನಾರೆ ಮಾತನಾಡಿ, ʼಮೈಸೂರ ಭಾಗದವರು ಕೇವಲ ಮೂರು ಹಾಡು ಗಾಯನ ಮಾಡಿದರೂ ರಾಜ್ಯಮಟ್ಟದ ಕಲಾವಿದರೆನಿಸಿಕೊಳ್ಳುತ್ತಾರೆ. ಆದರೆ ಬೀದರ ಕಲಾವಿದರು ಸಾವಿರ ಹಾಡು ರಚಿಸಿ ಗಾಯನ ಮಾಡಿದರೂ ಪ್ರಚಾರ ಪಡೆದುಕೊಳ್ಳುವುದಿಲ್ಲ. ಸರಿಯಾದ ವೇಷಭೂಷಣ ಮತ್ತು ತಂಡ ಕಟ್ಟಿಕೊಂಡರೆ ಜಿಲ್ಲೆಯ ಕಲಾವಿದರಿಗೂ ರಾಜ್ಯಮಟ್ಟದಲ್ಲಿ ಮನ್ನಣೆ ಸಿಗುತ್ತದೆ. ಕಲಾವಿದರು ಪ್ರಯತ್ನಶೀಲರಾಗಬೇಕುʼ ಎಂದು ಕರೆ ನೀಡಿದರು.
ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಸದಸ್ಯ ಡಾ.ಸಂಜೀವಕುಮಾರ ಅತಿವಾಳೆ ಮಾತನಾಡಿದರು. ಜೆಸ್ಕಾಂ ಲೆಕ್ಕಾಧಿಕಾರಿ ಸುಮಂತ ಕಟ್ಟಿಮನಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಮಾರಂಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಿದ್ರಾಮ ಶಿಂಧೆ, ಕರ್ನಾಟಕ ರಾಜ್ಯ ವನ್ಯಜೀವಿ ಮಂಡಳಿ ಸದಸ್ಯ ವಿನಯ ಮಾಳಗೆ ಉಪಸ್ಥಿತರಿದ್ದರು. ಗಿಪ್ಸನ್ ಕೋಟೆ ನಾಡಗೀತೆ ನೆರವೇರಿಸಿದರು. ಪ್ರವೀಣ ಚಂದ್ರ ಸ್ವಾಗತಿಸಿದರು. ಪ್ರೇಮ ಅವಿನಾಶ ನಿರೂಪಿಸಿದರು. ಮನೋಹರ ಮಿರ್ಜಾಪುರಕರ್ ವಂದಿಸಿದರು.
ಸಂವಿಧಾನ ಮಹತ್ವದ ಮೇಲೆ ಬೆಳಕು ಚೆಲ್ಲಿದ ಕವಿತೆಗಳು:
ಕಾರ್ಯಕ್ರಮದಲ್ಲಿ ಭಾರತದ ಸಂವಿಧಾನದ ಕುರಿತು ಆಯೋಜಿಸಿದ ವಿಶೇಷ ಕವಿಗೋಷ್ಟಿಯನ್ನು ನಿವೃತ್ತ ಪ್ರಾಚಾರ್ಯ ಪ್ರೊ. ದೇವಿದಾಸ್ ತುಮಕುಂಟೆ ಉದ್ಘಾಟಿಸಿದರು. ಸಾಹಿತಿ ರಜಿಯಾ ಬಳಬಟ್ಟಿ ಹಾಗೂ ಅಣ್ಣಾಭಾವು ಸಾಠೆ ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ಲೋಕ ಮಂಚ್ ಟ್ರಸ್ಟ್ ಅಧ್ಯಕ್ಷ ಎಂ.ಎಸ್.ಮನೋಹರ ಉಪಸ್ಥಿತರಿದ್ದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಸಿದ್ದರಾಮಯ್ಯನವರ ಸರ್ಕಾರದ ಆತ್ಮಾವಲೋಕನಕ್ಕಿದು ಸಕಾಲ
ಕವಿಗಳಾದ ಸುನಿತಾ ಬಿರಾದಾರ, ಬುದ್ದಾದೇವಿ ಸಂಗಮಕರ್, ಸಿದ್ದಮ್ಮ ಬಸಣ್ಣೋರ್, ಅಜೀತ್ ನೇಳಗಿ, ವಿಶ್ವಜೀತ್ ದಂಡಿನ್ ಸೇರಿದಂತೆ ಹಲವರು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನದ ಕುರಿತು ಮಾರ್ಮಿಕವಾಗಿ ಸ್ವರಚಿತ ಕವಿತೆ ವಾಚಿಸಿದರು.