ಸಫಾಯಿ ಕರ್ಮಚಾರಿ ಆಯೋಗಕ್ಕೆ ಸಫಾಯಿ ಕರ್ಮಚಾರಿಗಳನ್ನೇ ನೇಮಿಸಿದರೆ ಸಫಾಯಿ ಕರ್ಮಚಾರಿಗಳಿಗೆ ಸೌಲಭ್ಯಗಳು ದೊರೆಯುತ್ತವೆ ಎಂದು ರಾಷ್ಟ್ರೀಯ ಸಫಾಯಿ ಮಜ್ದೂರ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಭಾಸ್ಕರ್ ಬಾಬು ಹೇಳಿದರು.
ರಾಯಚೂರು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, “ಸಫಾಯಿ ಕರ್ಮಚಾರಿಗಳಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ಯಾವುದೇ ಸೌಲಭ್ಯಗಳು ದೊರೆಯದ ಕಾರಣ ಸಮಾಜ ತೀರ ಹಿಂದುಳಿದು ತುಳಿತಕ್ಕೊಳಗಾಗಿದೆ, ಸರ್ಕಾರದ ಸೌಲಭ್ಯ ದೊರೆಯದ ಕಾರಣ ಸಮುದಾಯ ಎಲ್ಲಾ ರೀತಿಯಿಂದ ಅಭಿವೃದ್ಧಿಯಾಗುತ್ತಿಲ್ಲ” ಎಂದು ಬೇಸರ ವ್ಯಕ್ತಪಡಿಸಿದರು.
“ಸಫಾಯಿ ಕರ್ಮಚಾರಿಗಳ ಅಭಿವೃದ್ಧಿ ಸಫಾಯಿ ಕರ್ಮಚಾರಿ ಆಯೋಗ ರಚಿಸಿದೆ. ಆದರೆ ಆಯೋಗದಲ್ಲಿ ಸಫಾಯಿ ಕರ್ಮಚಾರಿಗಳು ಅಲ್ಲದೇ ಇರುವರನ್ನು ನೇಮಕ ಮಾಡಿದ್ದರಿಂದ ಸೌಲಭ್ಯಗಳು ದೊರೆಯುತ್ತಿಲ್ಲ. ಸಮುದಾಯಯ ಅಭಿವೃದ್ಧಿಗಾಗಿ ಬಂದ ಅನುದಾನ ದುರ್ಬಳಕೆಯಾಗುತ್ತಿದ್ದು, ಯಾವುದೇ ಸೌಲಭ್ಯ ಸಮುದಾಯದ ಜನರಿಗೆ ತಲುಪುತ್ತಿಲ್ಲ. ರಾಜ್ಯ ಮತ್ತು ಕೇಂದ್ರ ಸರ್ಕಾರದ ಸಾಕಷ್ಟು ಯೋಜನೆಗಳಿದ್ದರೂ ಸಮಾಜದವರು ವಂಚಿತರಾಗಿದ್ದಾರೆ. ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಹಾಗೂ ರಾಜಕೀಯ ಪ್ರಾತಿನಿಧ್ಯ ನೀಡಬೇಕಾಗಿದೆ” ಎಂದು ಆಗ್ರಹಿಸಿದರು.
“ಮಲ ಎತ್ತುವುದು ಸರ್ಕಾರ ನಿಷೇಧಿಸಿದೆ, ಮಲ ಎತ್ತುವ ಕಾರ್ಮಿಕರು ಸಾವನಪ್ಪಿದರೆ ಸರ್ಕಾರ 10 ಲಕ್ಷ ರೂ. ಪರಿಹಾರ ಧನ ನೀಡುತ್ತಿದೆ. ಒಂದು ಕಡೆ ನಿಷೇಧ ಎಂದು ಘೋಷಿಸಿ ಮತ್ತೆ ಕೆಲಸ ಮಾಡುವ ವೇಳೆ ಸಾವನಪ್ಪಿದವರಿಗೆ ಸಹಾಯ ಧನ ನೀಡುತ್ತೇವೆಂದು ಹೇಳುವುದು ಗೊಂದಲ ಉಂಟಾಗಿದೆ. ಸರ್ಕಾರ ಇದನ್ನು ನಿವಾರಣೆ ಮಾಡಬೇಕು” ಎಂದು ಒತ್ತಾಯಿಸಿದರು.
“ಮುಂಬರುವ ಚಳಿಗಾಲದ ಅಧಿವೇಶನದಲ್ಲಿ ಸಫಾಯಿ ಕರ್ಮಚಾರಿಗಳಿಗೆ ಮೂಲಭೂತ ಸೌಲಭ್ಯ ಒದಗಿಸಿ ಕೊಡುವ ನಿಟ್ಟಿನಲ್ಲಿ ಸಚಿವ ಎನ್.ಎಸ್. ಬೋಸರಾಜ ಅವರಿಗೆ ಮನವಿ ಸಲ್ಲಿಸಲಾಗುತ್ತದೆ. ಅಧಿವೇಶನದಲ್ಲಿ ಈ ಬಗ್ಗೆ ಧ್ವನಿ ಎತ್ತಿ ನ್ಯಾಯ ಒದಗಿಸಿಕೊಡಬೇಕೆಂದು ಮನವಿ ಮಾಡಲಾಗುತ್ತದೆ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ದುಡಿವ ಜನರ ಮಹಾಧರಣಿ: ಶುರುವಾಗಲಿ ಜನಪರ್ಯಾಯ
ಈ ಸಂದರ್ಭದಲ್ಲಿ ರಂಗನಾಥ, ಭೀಮಸೇನ, ನಾಯ್ಡು, ಪ್ರಮೋದ್ ಸೇರಿದಂತೆ ಇತರರು ಇದ್ದರು.
ವರದಿ : ಹಫೀಜುಲ್ಲ