ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ದೇವದಾರಿ ಅರಣ್ಯ ಪ್ರದೇಶದಲ್ಲಿ ಕಬ್ಬಿಣದ ಅದಿರು ಗಣಿಗಾರಿಕ ನಡೆಸಲು ಕುದುರೆಮುಖ ಕಬ್ಬಿಣದ ಅದಿರು ಕಂಪನಿಗೆ (KIOCL) ಅನುಮತಿ ನೀಡಿ ಕೇಂದ್ರ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಸಚಿವ ಎಚ್.ಡಿ ಕುಮಾರಸ್ವಾಮಿ ಸಹಿ ಹಾಕಿದ್ದಾರೆ. ಆದರೆ, ಅಲ್ಲಿ ಗಣಿಗಾರಿಕೆ ನಡೆಸಲು ರಾಜ್ಯ ಸರ್ಕಾರ ಅನುಮತಿ ನೀಡುವುದಿಲ್ಲ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ತಿಳಿಸಿದ್ದಾರೆ.
ಉದ್ದೇಶಿತ ಗಣಿ ಪ್ರದೇಶವು ಅರಣ್ಯ ಭೂಮಿಯಾಗಿದೆ. ಅಲ್ಲಿ ಗಣಿಗಾರಿಕೆ ನಡೆಸುವುದರಿಂದ 1 ಲಕ್ಷ ಮರಗಳು ನಾಶವಾಗಲಿವೆ. ಅರಣ್ಯ ಪ್ರದೇಶದಲ್ಲಿ ಹೊಸ ಗಣಿಗಾರಿಕೆಗೆ ಅನುಮತಿ ನೀಡದಂತೆ 2016ರ ಮಾರ್ಚ್ 28ರಂದು ಅರಣ್ಯ ಇಲಾಖೆಯ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಅಧ್ಯಕ್ಷತೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಗಿದೆ. ಗಣಿಗಾರಿಕೆ ನಡೆಸಲು ಕೇಂದ್ರದ ಅನುಮತಿ ಪಡೆದಿರುವ ಕಂಪನಿ ವಿರುದ್ಧ ಹಲವಾರು ನಿಯಮ ಉಲ್ಲಂಘನೆಯ ಆರೋಪಗಳಿವೆ. ಈ ಎಲ್ಲ ಕಾರಣಗಳಿಂದ, ಅನುಮತಿ ನಿರಾಕರಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ.
ಗಣಿಗಾರಿಕೆಗೆ ಅನುಮತಿ ನೀಡಿ ಸಚಿವ ಎಚ್.ಡಿ ಕುಮಾರಸ್ವಾಮಿ ವಿರುದ್ಧ ರಾಜ್ಯಾದ್ಯಂತ ಆಕ್ರೋಶ ವ್ಯಕ್ತವಾಗಿದೆ. ದೇವದಾರಿಯಲ್ಲಿ ಗಣಿಗಾರಿಕೆ ವಿರೋಧಿಸಿ ‘ಸೇವ್ ಸಂಡೂರು ಫಾರೆಸ್ಟ್’ ಎಂಬ ಅಭಿಮಾನವನ್ನು ಕನ್ನಡಿಗರು ಆರಂಭಿಸಿದ್ದಾರೆ. ಉತ್ತರ ಕರ್ನಾಟಕದ ಆಮ್ಲಜನಕ ತಾಣವಾಗಿರುವ ಅರಣ್ಯ ಪ್ರದೇಶಕ್ಕೆ ಕೊಡಲಿ ಹಾಕಲು ಬಿಡುವುದಿಲ್ಲವೆಂದು ಹೋರಾಟಗಾರರು ಎಚ್ಚರಿಕೆ ನೀಡಿದ್ದಾರೆ.