ಚಿಕ್ಕಬಳ್ಳಾಪುರ | ಶಾಲೆಗಳಲ್ಲಿ ಮಕ್ಕಳ ರಕ್ಷಣಾ ಸಮಿತಿ ರಚನೆ ಕಡ್ಡಾಯ: ನ್ಯಾ. ನೇರಳೆ ವೀರಭದ್ರಯ್ಯ ಭವಾನಿ

Date:

Advertisements

ಮಕ್ಕಳ ಸುರಕ್ಷತೆ ಹಾಗೂ ಸಮಸ್ಯೆಗಳ ಪರಿಹಾರಕ್ಕಾಗಿ ಸರ್ಕಾರದ ಆದೇಶದಂತೆ ಪ್ರತಿ ಶಾಲೆಯಲ್ಲಿಯೂ ಕಡ್ಡಾಯವಾಗಿ ಮಕ್ಕಳ ರಕ್ಷಣಾ ಸಮಿತಿಗಳನ್ನು ರಚಿಸಬೇಕು ಎಂದು ಚಿಕ್ಕಬಳ್ಳಾಪುರ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶೆ ನೇರಳೆ ವೀರಭದ್ರಯ್ಯ ಭವಾನಿ ಸೂಚಿಸಿದರು.

ಚಿಕ್ಕಬಳ್ಲಾಪುರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಮಕ್ಕಳ ರಕ್ಷಣಾ ಸಮಿತಿ ರಚನೆ ಕುರಿತು ನಡೆದ ಕಾನೂನು ಅರಿವು ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. “ಶಾಲೆಗೆ ಹೋದ ಮಕ್ಕಳು ಸುರಕ್ಷಿತವಾಗಿ ಮನೆಗೆ ವಾಪಾಸ್‌ ಬರಬೇಕು. ಮಕ್ಕಳು ಶಾಲೆಯಲ್ಲಿರುವ ಅವಧಿಯಲ್ಲಿ ಅವರಿಗೆ ಏನೇ ತೊಂದರೆ ಆದರೂ, ಶಾಲೆಯಲ್ಲಿ ಮುಕ್ತವಾಗಿ ಹೇಳಿಕೊಳ್ಳುವಂತಿರಬೇಕು” ಎಂದರು.

“ಮಕ್ಕಳ ಸುರಕ್ಷತೆ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಎಲ್ಲಾ ಶಾಲೆಗಳಲ್ಲಿಯೂ ಮಕ್ಕಳ ರಕ್ಷಣಾ ಸಮಿತಿಗಳನ್ನು ರಚಿಸುವಂತೆ 1990 ರಲ್ಲಿಯೇ ಸುತ್ತೋಲೆ ಹೊರಡಿಸಿದೆ. ಆದರೆ, ಸರ್ಕಾರದ ಆದೇಶವನ್ನು ಶಾಲೆಗಳು ಪಾಲಿಸುತ್ತಿಲ್ಲ. ಯಾವುದೇ ಶಾಲೆಗಳಲ್ಲಿ ಮಕ್ಕಳ ರಕ್ಷಣಾ ಸಮಿತಿಗಳು ರಚನೆಯಾಗಿಲ್ಲ. ಇದು ನಿಜಕ್ಕೂ ಬೇಸರದ ಸಂಗತಿಯಾಗಿದೆ” ಎಂದು ಬೇಸರ ವ್ಯಕ್ತಪಡಿಸಿದರು.

Advertisements

“ಮಕ್ಕಳು ತಮಗೆ ಆದ ತೊಂದರೆಯನ್ನು ಯಾರೊಂದಿಗೆ ಹೇಳಿಕೊಳ್ಳಬೇಕು. ಮಕ್ಕಳು ಮುಕ್ತ ಮತ್ತು ನಿರ್ಭಯ ವಾತಾವರಣದಲ್ಲಿ ಅತ್ಯಂತ ಸುರಕ್ಷಿತವಾಗಿ ಇರಬೇಕು. ಆದ್ದರಿಂದ ಎಲ್ಲಾ ಶಾಲೆಗಳಲ್ಲಿ ಮಕ್ಕಳ ರಕ್ಷಣಾ ಸಮಿತಿಗಳನ್ನು ಕಡ್ಡಾಯವಾಗಿ ಮತ್ತು ಆದ್ಯತೆಯ ಮೇಲೆ ರಚಿಸಿ ಮಕ್ಕಳಿಗೆ ಅನುಕೂಲ ಮಾಡಿಕೊಡಬೇಕು. ಈಗಾಗಲೇ ಸರ್ಕಾರಿ ಕಚೇರಿಗಳಲ್ಲಿ ಮಹಿಳೆಯರ ಸುರಕ್ಷತೆಯ ದೃಷ್ಟಿಯಿಂದ ಸಮಿತಿಗಳನ್ನು ರಚಿಸಲಾಗಿದ್ದು, ಸಮಿತಿಗಳು ಕ್ರಿಯಾಶೀಲವಾಗಿವೆ. ಹಾಗೆಯೇ ಮಕ್ಕಳ ವಿಚಾರದಲ್ಲಿಯೂ ಶಾಲೆಗಳಲ್ಲಿ ಸಮಿತಿಗಳು ರಚನೆಯಾಗಬೇಕು. ಆ ಮೂಲಕ ಮಕ್ಕಳ ಹಕ್ಕುಗಳು ರಕ್ಷಣೆಯಾಗಬೇಕು” ಎಂದು ಹೇಳಿದರು.

“ಸಮಿತಿಗಳು ರಚನೆಯಾಗುವುದರಿಂದ ಮಕ್ಕಳು ಎದುರಿಸುವ ಸಮಸ್ಯೆಗಳನ್ನು ಅರಿಯಲು ಅನುಕೂಲವಾಗುತ್ತದೆ. ಮಕ್ಕಳ ಸಮಸ್ಯೆಗಳು ಶಿಕ್ಷಕರು, ಸರ್ಕಾರಿ ಅಧಿಕಾರಿಗಳು ಮತ್ತು ಪೋಷಕರಿಗೆ ತಿಳಿಯುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಮಕ್ಕಳ ರಕ್ಷಣಾ ಸಮಿತಿಗಳು ಹೆಚ್ಚು ಸಹಕಾರಿಯಾಗಲಿವೆ” ಎಂದರು.

ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಮಾತನಾಡಿ, “ಹಿರಿಯ ನಾಗರೀಕರು ಸೇರಿದಂತೆ ಸಾರ್ವಜನಿಕರ ಹಲವು ಸಮಸ್ಯೆಗಳು ಗಮನಕ್ಕೆ ಬಂದ ಕೂಡಲೇ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡು ಸ್ಪಂದಿಸುವಲ್ಲಿ ಸಕ್ರಿಯವಾಗಿದೆ. ಶಾಲಾ ಆಸ್ತಿಗಳ ಒತ್ತುವರಿ ಇನ್ನಿತರ ವಿಚಾರಗಳಲ್ಲಿ ಪ್ರಾಧಿಕಾರ ಹೆಚ್ಚು ಮುತುವರ್ಜಿಯಿಂದ ಕೆಲಸ ಮಾಡಿ ಸಂಬಂಧಪಟ್ಟ ಇಲಾಖೆಗಳಿಗೆ ಸೂಕ್ತ ನಿರ್ದೇಶನವನ್ನೂ ಮಾಡುತ್ತಿದೆ” ಎಂದು ಹೇಳಿದರು.

“ಮಕ್ಕಳ ಹಕ್ಕುಗಳ ರಕ್ಷಣೆ ಹಿನ್ನೆಲೆಯಲ್ಲಿ ಜಿಲ್ಲೆಯ ಪ್ರತಿ ಶಾಲೆಯಲ್ಲಿ ಮಕ್ಕಳ ರಕ್ಷಣಾ ಸಮಿತಿಗಳು ರಚನೆಯಾಗಬೇಕು. ಈ ಸಮಿತಿಗಳ ರಚನೆ ಕುರಿತು ಪಂಚಾಯಿತಿಗಳು, ಶಿಕ್ಷಕರಿಗೇ ಮಾಹಿತಿ ಇಲ್ಲ. ಮಕ್ಕಳ ಮೇಲೆ ಯಾರಿಂದಲೂ ಯಾವುದೇ ರೀತಿಯ ದೌರ್ಜನ್ಯಗಳು ನಡೆಯದಂತೆ ಮುನ್ನೆಚ್ಚರಿಕೆಯಾಗಿ ತಡೆಯುವುದೇ ಸಮಿತಿಗಳ ಮುಖ್ಯ ಧ್ಯೇಯವಾಗಿದೆ” ಎಂದರು.

“ಬಾಲ ನ್ಯಾಯನಿಧಿ, ಉಚಿತ ಮಕ್ಕಳ ಸಹಾಯವಾಣಿ 1098 ಸೇರಿದಂತೆ ಹಲವು ಯೋಜನೆಗಳ ಮೂಲಕ ಮಕ್ಕಳು ಸುರಕ್ಷಿತ ವಾತಾವರಣದಲ್ಲಿ ಬದುಕುವಂತೆ ಮಾಡಬಹುದಾಗಿದೆ. ಮಕ್ಕಳ ಮೇಲೆ ದೌರ್ಜನ್ಯಗಳು ನಡೆಯಬಾರದು. ಒಂದು ವೇಳೆ ನಡೆದರೆ ಅದಕ್ಕೆ ಕಾನೂನಿನ ನೆರವನ್ನೂ ಪಡೆದುಕೊಂಡು ಮಕ್ಕಳನ್ನು ರಕ್ಷಿಸಬೇಕಿದೆ. ಎಲ್ಲಿಯೇ ಆಗಲಿ ಮಕ್ಕಳ ಹಕ್ಕುಗಳಿಗೆ ಧಕ್ಕೆಯಾಗುತ್ತಿದ್ದರೆ, ಶೋಷಣೆ ಆಗುತ್ತಿದ್ದರೆ ಗಮನಿಸಿದವರು ಮಕ್ಕಳ ಸಹಾಯವಾಣಿಯನ್ನು ಸಂಪರ್ಕಿಸಿ ಮಾಹಿತಿ ನೀಡುವ ಮೂಲಕ ಸಾಮಾಜಿಕ ಜವಾಬ್ದಾರಿ ತೋರಬೇಕು” ಎಂದು ಕರೆ ನೀಡಿದರು.

“ಸಾಮಾಜಿಕ ಜಾಲತಾಣಗಳಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳು ಮಕ್ಕಳ ರಕ್ಷಣಾ ನಿರ್ದೇಶನಾಲಯದಿಂದ ನಡೆಯುತ್ತಿದೆ. ಪೋಸ್ಟರ್, ವಿಡಿಯೊ ಮತ್ತು ಕಿರುಚಿತ್ರಗಳ ಮುಖಾಂತರ ಮಕ್ಕಳ ಹಕ್ಕುಗಳ ರಕ್ಷಣೆಯ ವಿಚಾರಗಳಲ್ಲಿ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಜಾಗೃತಿ ಮೂಡಿಸಲಾಗುತ್ತಿದ್ದು, ಸಂಕಷ್ಟ ಪರಿಸ್ಥಿತಿಯಲ್ಲಿರುವ ಮಕ್ಕಳ ರಕ್ಷಣೆಗಾಗಿ ಸಹಾಯವಾಣಿ ಸಂಖ್ಯೆ 1098 ಅಥವಾ 112 ಸಂಖ್ಯೆಗೆ(24/7) ಕರೆ ಮಾಡಬಹುದು” ಎಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಹಿರಿಯ ಸಿವಿಲ್ ನ್ಯಾಯದಿಶೆ ಅರುಣಕುಮಾರಿ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಶ್ರೀನಿವಾಸ್, ಸರ್ಕಾರಿ ವಕೀಲರಾದ ಜಯರಾಮರೆಡ್ಡಿ, ಬಿಜಿಎಸ್ ವಿದ್ಯಾ ಸಂಸ್ಥೆಯ ಡಾ.ಮಧುಸೂದನ್, ವಿಕಾಸ್ ರೆಡ್ಡಿ, ಕೆ.ವಿ.ಶಿಕ್ಷಣ ಮಹಾವಿದ್ಯಾಲಯದ ಶಿವರಾಂ ಮತ್ತಿತರರು ಉಪಸ್ಥಿತರಿದ್ದರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹಾವೇರಿ |  ಶೇ 1ರಷ್ಟು ಒಳಮೀಸಲಾತಿ ಕಲ್ಪಿಸಲು ಅಲೆಮಾರಿ ಸಮುದಾಯದ ಮುಖಂಡರು ಆಗ್ರಹ

"ಒಳಮೀಸಲಾತಿ ಹಂಚಿಕೆಯಲ್ಲಿ ಅನ್ಯಾಯವಾಗಿದೆ. ರಾಜ್ಯ ಸರಕಾರ ಈಗ ಹಂಚಿಕೆ ಮಾಡಿರುವ ಒಳ...

ತರೀಕೆರೆ l ಸರ್ಕಾರಿ ಜಾಗದಲ್ಲಿ ಅಕ್ರಮ ಮಳಿಗೆ ನಿರ್ಮಾಣ ಆರೋಪ; ದಸಂಸ ಪ್ರತಿಭಟನೆ

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ಪಟ್ಟಣದ ತಾಲೂಕು ಕಚೇರಿ ಮುಂಭಾಗದಲ್ಲಿ ಅಕ್ರಮವಾಗಿ ಮಳಿಗೆ...

ಉಡುಪಿ | ಭಾರತದಲ್ಲಿ ಪ್ರಜಾಪ್ರಭುತ್ವದ ಅಧಪತನ – ಶ್ಯಾಮರಾಜ್ ಬಿರ್ತಿ

ಭಾರತದಲ್ಲಿ ಅಘೋಷಿತ ತುರ್ತುಪರಿಸ್ಥಿತಿ ಜಾರಿಯಲ್ಲಿದೆ. ಅಭಿವ್ಯಕ್ತಿ ಸ್ವಾತಂತ್ರ್ಯ ವೂ ಶ್ರೇಣಿಕೃತ ವ್ಯವಸ್ಥೆಯಲ್ಲಿದೆ....

ದೀಕ್ಷಾ ಭೂಮಿ ಯಾತ್ರೆಗೆ ಡಾ. ಬಿ.ಆರ್.ಅಂಬೇಡ್ಕರ್ ಅನುಯಾಯಿಗಳ ನಿಯೋಜನೆ – ಅರ್ಜಿ ಆಹ್ವಾನ

ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಪರಿಶಿಷ್ಟ ಜಾತಿ ಮತ್ತು...

Download Eedina App Android / iOS

X