ಶಿಗ್ಗಾವಿ ಸವಣೂರು ಕ್ಷೇತ್ರದ ಜನತೆಗೆ ಧನ್ಯವಾದ ಯಾತ್ರೆ ಆರಂಭಿಸಿದ್ದು, ಇದು ಯಾವುದೇ ರಾಜಕೀಯ ಯಾತ್ರೆಯಲ್ಲ. ಮುಂದಿನ ಚುನಾವಣೆಗೂ ಧನ್ಯವಾದ ಯಾತ್ರೆಗೂ ಸಂಬಂಧವಿಲ್ಲ. ನಮ್ಮ ನಿಮ್ಮ ನಡುವಿನ ಅವಿನಾಭಾವ ಸಂಬಂಧವನ್ನು ಶಾಶ್ವತಗೊಳಿಸಲು ಈ ಯಾತ್ರೆ ಮಾಡುತ್ತಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ-ಗದಗ ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಅವರು ಶಿಗ್ಗಾವಿ ಹಾಗೂ ಸವಣೂರು ವಿಧಾನಸಭಾ ಕ್ಷೇತ್ರದ ಮುತ್ತಳ್ಳಿ, ತಡಸ, ಅಡವಿ ಸೋಮಾಪುರ, ಕುನ್ನೂರು, ಶ್ಯಾಡಂಬಿ, ಮಡಿ ಗ್ರಾಮಗಳಲ್ಲಿ ಇಂದು ಆರಂಭಿಸಿರುವ ಮತದಾರರಿಗೆ ಧನ್ಯವಾದ ಯಾತ್ರೆಯಲ್ಲಿ ಪಾಲ್ಗೊಂಡು ಮಾತನಾಡಿದರು.
“ನಾನು ಶಾಸಕನಾಗಿಯೇ ನಿಮ್ಮ ಸೇವೆ ಮಾಡಬೇಕೆಂದೇನಿಲ್ಲ. ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ನಾನು ಹಾವೇರಿ ಗದಗ ಕ್ಷೇತ್ರದ ಸಂಸದನಾಗಿದ್ದು, ಈ ಕ್ಷೇತ್ರದ ಅಭಿವೃದ್ಧಿ ಹಾಗೂ ನಿಮ್ಮ ವೈಯಕ್ತಿಕ ಕೆಲಸಗಳನ್ನು ಮಾಡಲು ನಾನು ಸದಾ ಸಿದ್ದನಿದ್ದೇನೆ. ನಾನು ಶಾಸಕನಲ್ಲದಿದ್ದರೂ ನಿಮ್ಮ ಸೇವೆ ಮಾಡಲು ಅದಕ್ಕಿಂತ ಹೆಚ್ಚಿನ ಶಕ್ತಿಯನ್ನು ನೀವು ನನಗೆ ನೀಡಿದ್ದೀರಿ” ಎಂದು ಹೇಳಿದರು.
“ಇವತ್ತು ಬಹಳ ದೊಡ್ಡ ಪ್ರಮಾಣದ ಅಭಿವೃದ್ಧಿಯಾಗಬೇಕೆಂಬ ಪರಿಕಲನೆ ನನ್ನದಾಗಿತ್ತು. ವಾಣಿಜ್ಯಿಕವಾಗಿ, ಶೈಕ್ಷಣಿಕವಾಗಿ ತಡಸ ಗ್ರಾಮ ಅಭಿವೃದ್ಧಿಯಾಗಬೇಕೆಂಬ ಬಯಕೆ ನನ್ನದಾಗಿದೆ. ಪ್ರಗತಿ ನಿರಂತರ ನಡೆಯುವ ಪ್ರಕ್ರಿಯೆಯಲ್ಲಿ ತಡಸ್ ಗ್ರಾಮದಲ್ಲಿ ಎಲ್ಲ ಸಮುದಾಯದ ಜನರಿದ್ದಾರೆ. ಅವರೆಲ್ಲರೂ ನಮ್ಮವರು ಎಂದು ನನಗೆ ಬೆಂಬಲ ಕೊಟ್ಟಿದ್ದಾರೆ. ಪ್ರತಿಬಾರಿ ಚುನಾವಣೆಯಲ್ಲಿ ಮತ ಎಣಿಕೆ ನಡೆಯುವುದು ತಡಸ್ ಹಾಗೂ ಮುತ್ತಳ್ಳಿ ಗ್ರಾಮದಿಂದ ಆರಂಭವಾಗುತ್ತದೆ. ಈ ಭಾಗದ ಜನರು ಕೇವಲ ಮತಗಳ ಮೂಲಕವಲ್ಲ ಅತ್ಮಸ್ಥೆರ್ಯವನ್ನೂ ನನಗೆ ನೀಡಿದ್ದಾರೆ. ನಾನು ನಿಮ್ಮನ್ನು ಎಂದೂ ಮರೆಯಲು ಸಾಧ್ಯವಿಲ್ಲ. ಈ ಭಾಗದ ಜನರಿಗೆ ನನ್ನ ಮನಪೂರ್ವಕ ಧನ್ಯವಾದಗಳನ್ನು ಹೇಳಲು ಬಯಸುತ್ತೇನೆ” ಎಂದು ಹೇಳಿದರು.
ತಡಸ್ ಗ್ರಾಮ ಮೂರು ತಾಲೂಕುಗಳ ಕೇಂದ್ರ ಬಿಂದುವಾಗಿದೆ. ಈ ಗ್ರಾಮವು ಕುಡಿಯುವ ನೀರಿನ ಸಮಸ್ಯೆ, ವಿದ್ಯುತ್ ಸಮಸ್ಯೆಯಿಂದ ಗ್ರಾಮ ಕೂಡಿತ್ತು. ದೊಡ್ಡ ಮಳೆಯಾದರೆ ಮನೆಯೊಳಗೆ ನೀರು ಬರುತ್ತಿತ್ತು. ಈ ಎಲ್ಲ ಸಮಸ್ಯೆಗಳನ್ನು ಬಗೆಹರಿಸಿ ಊರಿಗೆ ಬಸ್ ನಿಲ್ದಾಣ, ಹೈಸ್ಕೂಲು, ಕಾಲೇಜು ಎಲ್ಲವನ್ನೂ ನಿಮ್ಮ ಸಹಕಾರದಿಂದ ಮಾಡಲು ಸಾಧ್ಯವಾಗಿದೆ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.
ಇದನ್ನು ಓದಿದ್ದೀರಾ? ಡಿ.ದೇವರಾಜ ಅರಸು ಟ್ರಕ್ ಟರ್ಮಿನಲ್ ಮಾಜಿ ಅಧ್ಯಕ್ಷ ಡಿ ಎಸ್ ವೀರಯ್ಯ ಬಂಧನ
ಮುಂಬರುವ ದಿನಗಳಲ್ಲಿ ಈ ಅಭಿವೃದ್ಧಿಯ ವೇಗ ಇನ್ನಷ್ಟು ಹೆಚ್ಚಾಗಬೇಕು. ಹಿಂದುಳಿದ ತಾಲೂಕು ಎಂಬ ಹಣೆಪಟ್ಟಿಯಿಂದ ಮುಂದುವರೆಯುತ್ತಿರುವ ತಾಲೂಕು ಎಂಬ ಹಣೆಪಟ್ಟಿಗೆ ಬದಲಾಯಿಸಲಾಗಿದೆ. ಅಭಿವೃದ್ಧಿಯ ಬಗ್ಗೆ ನಿಮ್ಮ ಕಳಕಳಿ ಇಟ್ಟುಕೊಂಡು ಯಾವಾಗಲೂ ಕೂಡ ನೀವು ನನ್ನ ಬಳಿ ಬರಬಹುದು. ನನ್ನ ಮನೆಯ ಬಾಗಿಲು ಹಾಗೂ ಮನಸಿನ ಬಾಗಿಲು ಸದಾ ತೆರೆದಿದೆ ಎಂದು ಬೊಮ್ಮಾಯಿ ಹೇಳಿದರು.
