ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸುವ ಭರದಲ್ಲಿ ಮಾಜಿ ಸಂಸದ ಎಲ್.ಆರ್ ಶಿವರಾಮೇಗೌಡ ಮಂಡ್ಯ ಜನರ ವಿರುದ್ಧ ನಾಲಿಗೆ ಹರಿಬಿಟ್ಟಿದ್ದಾರೆ. ‘ಮಂಡ್ಯ ಜನರು ನರಸತ್ತವರು. ಮಂಡ್ಯದವರು ಕೈಗೆ ಬಳೆತೊಟ್ಟುಕೊಳ್ಳಬೇಡಿ’ ಎಂದು ಆಕ್ಷೇಪಾರ್ಹ, ಮಹಿಳಾ ನಿಂದನೆಯ ಹೇಳಿಕೆ ನೀಡಿ, ವಿವಾದ ಸೃಷ್ಟಿಸಿದ್ದಾರೆ.
ಬಿಜೆಪಿಯಲ್ಲಿರುವ ಶಿವರಾಮೇಗೌಡ ಬಿಜೆಪಿ ತೊರೆದಿದ್ದು, ಮರಳಿ ಕಾಂಗ್ರೆಸ್ ಸೇರಲು ಮುಂದಾಗಿದ್ದಾರೆ. ತಾವು ಕಾಂಗ್ರೆಸ್ ಸೇರುವ ಬಗ್ಗೆ ನಾಗಮಂಗಲದಲ್ಲಿ ಮಾಧ್ಯಮಗೊಳೊಂದಿಗೆ ಮಾತನಾಡಿದ ಅವರು, “ಕುಮಾರಸ್ವಾಮಿಯನ್ನು ರಾಮನಗರದಿಂದ ಓಡಿಸಿದ್ದಾರೆ. ಆದರೆ, ಮಂಡ್ಯದವರು ನರಸತ್ತವರು ಎಂದು ಕುಮಾರಸ್ವಾಮಿ ಇಲ್ಲಿಗೆ ಬಂದಿದ್ದಾರೆ” ಎಂದು ಹೇಳಿದ್ದಾರೆ.
“ಮಂಡ್ಯ ಜಿಲ್ಲೆಯ ಮುಖಂಡರು ಎಚ್ಚೆತ್ತುಕೊಳ್ಳಬೇಕು. ಮಂಡ್ಯದಲ್ಲೂ ಗಂಡಸರಿದ್ದಾರೆ. ಗಂಡಸರಾಗ್ರಪ್ಪ, ಕೈಗೆ ಬಳೆ ತೊಟ್ಟುಕೊಳ್ಳಬೇಡಿ” ಎಂದು ನಾಲಿಗೆ ಹರಿಬಿಟ್ಟಿದ್ದಾರೆ.
“ಬಿಜೆಪಿಗೆ ರಾಜೀನಾಮೆ ನೀಡಿದ್ದೇನೆ. ಕಾಂಗ್ರೆಸ್ ಸೇರಲು ನಿರ್ಧರಿಸಿದ್ದೇನೆ. ಹಳೇ ಮೈಸೂರು ಭಾಗದಲ್ಲಿ ಬಿಜೆಪಿಯನ್ನು ಬೆಳೆಸಬೇಕೆಂದು ಆ ಪಕ್ಷ ಸೇರಿದ್ದೆ. ಆದರೆ, ಜೆಡಿಎಸ್ ಜೊತೆ ಬಿಜೆಪಿ ಮೈತ್ರಿ ಮಾಡಿಕೊಂಡಿದೆ. ಮಂಡ್ಯದಲ್ಲಿ ಜೆಡಿಎಸ್‌ನವರು ಬಿಜೆಪಿಯ ಕತ್ತುಹಿಸುಕಿದ್ದಾರೆ. ಹೊಂದಾಣಿಕೆಯಿಂದ ಬಿಜೆಪಿ ಉಸಿರುಗಟ್ಟುತ್ತಿದೆ” ಎಂದು ಶಿವರಾಮೇಗೌಡ ಹೇಳಿದ್ದಾರೆ.
“ಕುಮಾರಸ್ವಾಮಿ ಎರಡು ಬಾರಿ ಲಾಟರಿಯಲ್ಲಿ ಮುಖ್ಯಮಂತ್ರಿ ಆಗಿದ್ದಾರೆ. ಕುಮಾರಸ್ವಾಮಿಯ ಗಾಡಿ ಮುಳುಗುತ್ತಿದ್ದು, ಅದನ್ನು ಮಂಡ್ಯ ಜನರು ಕೈ ಹಿಡಿದು ಎತ್ತಿದ್ದಾರೆ. ಸಚಿವರಾಗಿದ್ದರೂ ಕುಮಾರಸ್ವಾಮಿ ಏನು ಮಾಡುತ್ತಿದ್ದಾರೆ? ದೊಡ್ಡ ದೊಡ್ಡ ಕೈಗಾರಿಕಾ ತಂದು ಮಂಡ್ಯ ಜನರ ಋಣ ತೀರಿಸಬೇಕು” ಎಂದಿದ್ದಾರೆ.
2019ರ ಲೋಕಸಭಾ ಚುನಾವಣೆ ವೇಳೆಯೂ ನಾಲಿಗೆ ಹರಿಬಿಟ್ಟಿದ್ದ ಶಿವರಾಮೇಗೌಡ, ಮಾಜಿ ಸಂಸದೆ ಸುಮಲತಾ ಅವರನ್ನು ಮಾಯಾಂಗನೆ ಎಂದಿದ್ದರು. ಜನಾಕ್ರೋಶಕ್ಕೆ ಕಾರಣರಾಗಿದ್ದರು.