ರಾಜ್ಯದಲ್ಲಿ 1200ಕ್ಕೂ ಹೆಚ್ಚಿನ ರೈತರು ಸಾಲಬಾಧೆ, ಬರಗಾಲದಿಂದ ಕಂಗೆಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇಂತಹ ರೈತರಿಗೆ ಸರ್ಕಾರ ವಿಶೇಷ ಯೋಜನೆ ರೂಪಿಸಬೇಕು. ಬರಗಾಲದ ಸಂಕಷ್ಟದಲ್ಲಿರುವ ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕೆಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಹೇಳಿದರು.
ಚಿಕ್ಕಬಳ್ಳಾಪುರ ನಗರದಲ್ಲಿ ಭಾನುವಾರ ರೈತ ಹುತಾತ್ಮರ ದಿನಾಚರಣೆ ಅಂಗವಾಗಿ ರೈತ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ʼಕೃಷಿ ಸಾಲ ಮತ್ತು ಬೆಳೆ ವಿಮೆ ನೀತಿಗಳಲ್ಲಿ ಬದಲಾವಣೆ ತರಬೇಕಿದೆ. ಜಮೀನು ಮೌಲ್ಯದ ಶೇ.75ರಷ್ಟು ಸಾಲ ನೀಡಬೇಕು. ಎಲ್ಲಾ ಬೆಳೆಗಳಿಗೂ ಬೆಳೆ ವಿಮೆ ಜಾರಿಗೊಳಿಸಬೇಕು. ರಾಜ್ಯದಲ್ಲಿ ಭೂ ಸುಧಾರಣೆ ತಿದ್ದುಪಡಿ ಕಾಯ್ದೆ ರದ್ದಾಗಬೇಕು. ಕೃಷಿ ಭೂಮಿ ಕಾರ್ಪೊರೇಟ್ ಕಂಪನಿಗಳು ಮತ್ತು ಬಂಡವಾಳಶಾಹಿಗಳು ವಶಕ್ಕೆ ಪಡೆಯುವುದು ತಪ್ಪಬೇಕುʼ ಎಂದು ಆಗ್ರಹಿಸಿದರು.
ಕೃಷಿ ಪಂಪ್ ಸೆಟ್‌ಗಳಿಗೆ ಆಧಾರ್ ಜೋಡಣೆ ಬೇಡ. ಇದಕ್ಕೂ ಮೊದಲು ಸಮರ್ಪಕ ವಿದ್ಯುತ್ ಪೂರೈಸಲು ಕ್ರಮ ಕೈಗೊಳ್ಳಬೇಕು. ರಾಜ್ಯದ 34 ಲಕ್ಷ ಹೈನುಗಾರರಿಗೆ ಸುಮಾರು 800 ಕೋಟಿ ಹಾಲಿನ ಪ್ರೋತ್ಸಾಹ ಧನ ಬಾಕಿಯಿದೆ. ಇದನ್ನು ಸರ್ಕಾರ ಕೂಡಲೇ ಬಿಡುಗಡೆಗೊಳಿಸಬೇಕು. ರಾಜ್ಯಾದ್ಯಂತ ಜಲಾಶಯಗಳಲ್ಲಿ ನೀರಿನ ಸಂಗ್ರಹ ಸಾಮರ್ಥ್ಯ ಕಡಿಮೆಯಾಗಿದೆ. ಅಂತರ್ಜಲಮಟ್ಟ ಕುಸಿಯುತ್ತಿದೆ. ಜಲಾಶಯಗಳಲ್ಲಿನ ಹೂಳೆತ್ತಲು ವಿಶೇಷ ಯೋಜನೆ ರೂಪಿಸಲು ಸರ್ಕಾರಕ್ಕೆ ಒತ್ತಾಯಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರೈತ ಸಂಘ ಜಿಲ್ಲಾಧ್ಯಕ್ಷ ಗೋವಿಂದ ರೆಡ್ಡಿ ಮಾತನಾಡಿ, ʼಜಿಲ್ಲೆಯಲ್ಲಿ ರೈತರು ಬರಗಾಲದಿಂದ ಸಂಕಷ್ಟಲ್ಲಿದ್ದು, ತರಕಾರಿ ಬೆಳೆದು ಜೀವನ ಸಾಗಿಸುತ್ತಿದ್ದಾರೆ. ಸರ್ಕಾರಗಳ ನಿರ್ಲಕ್ಷ್ಯ ನೀತಿ ರೈತರ ಸಮಸ್ಯೆ ಹೆಚ್ಚಳಕ್ಕೆ ಕಾರಣವಾಗಿದೆ. ಅದಕ್ಕಾಗಿ ಸಂಘಟನೆ ಬಲಪಡಿಸುವುದು ಅವಶ್ಯಕತೆʼ ಎಂದು ಕರೆ ನೀಡಿದರು.
ಕಾರ್ಯಕ್ರಮಕ್ಕೂ ಮುನ್ನ ನಗರದ ಪ್ರಮುಖ ರಸ್ತೆಗಳಲ್ಲಿ ನೂರಾರು ರೈತರು ಘೋಷಣೆಗಳ ಮೂಲಕ ತೆರಳಿ ಅಂಬೇಡ್ಕರ್ ಭವನಕ್ಕೆ ತಲುಪಿದರು. ಬಳಿಕ ಜರುಗಿದ ವೇದಿಕೆ ಸಮಾರಂಭದಲ್ಲಿ ನರಗುಂದ ಬಂಡಾಯ ಚಳುವಳಿ, ದೆಹಲಿ ರೈತ ಹೋರಾಟದಲ್ಲಿ ಮಡಿದ ಹುತಾತ್ಮ ರೈತರಿಗೆ ಮೇಣದ ಬತ್ತಿಯನ್ನು ಹಚ್ಚಿ, ಮೌನಾಚರಣೆ ಮಾಡಿ ಶ್ರದ್ಧಾಂಜಲಿ ಅರ್ಪಿಸಿದರು.
ಶಿವಮೊಗ್ಗ ಜಿಲ್ಲೆಯ ಕರಿಬಸಪ್ಪಗೌಡ ಹಾಗೂ ಇತರೆ ರೈತ ಸಂಘ ಮುಖಂಡರು ಮಾತನಾಡಿದರು. ಇದೇ ಸಂದರ್ಭದಲ್ಲಿ ವಿವಿಧ ಪ್ರಗತಿಪರ ರೈತರನ್ನು ಗೌರವಿಸಲಾಯಿತು.
ಈ ಸುದ್ದಿ ಓದಿದ್ದೀರಾ? ಮೈಸೂರು | ಮುಡಾ ಹಗರಣ; ಸಿಎಂ ಕುಟುಂಬದ ವಿರುದ್ಧ ಆರೋಪ ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ
ಕಾರ್ಯಕ್ರಮದಲ್ಲಿ ರಾಜ್ಯ ರೈತ ಸಂಘದ ಪ್ರಮುಖರಾದ ಅಂದಪ್ಪ ಹುರುಳಿ, ಶಿವಕುಮಾರ್, ಹತ್ತಳ್ಳಿ ದೇವರಾಜ್, ಶ್ರೀಕಾಂತ್ ರೆಡ್ಡಿ, ವೆಂಕಟಾಶಿವರೆಡ್ಡಿ, ರಾಮಲಕ್ಷ್ಮಮ್ಮ, ಕಾಂತಮ್ಮ ಸೇರಿದಂತೆ 400 ಕ್ಕೂ ಅಧಿಕ ರೈತರು ಭಾಗವಹಿಸಿದ್ದರು. ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ಸಂಚಾಲಕ ಲೋಕೇಶ್ ಗೌಡ ನಿರೂಪಿಸಿದರು.