ಉಡುಪಿಯ ನೇಜಾರಿನಲ್ಲಿಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ವಿರುದ್ಧ ಯುವಕನೊಬ್ಬ ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಾಕಾರಿ ಪೋಸ್ಟ್ ಹಾಕಿದ್ದ. ಆತನ ವಿರುದ್ಧ ಪೊಲೀಸರು ಸಮೋಟೋ ಪ್ರಕರಣ ದಾಖಲಿಸಿದ್ದಾರೆ.
ಕೊಲೆ ಆರೋಪಿ ಪ್ರವೀಣ್ ಚೌಗಲೆಯನ್ನು ಬಂಧಿಸಿರುವ ಪೊಲೀಸರು, ಆತನನ್ನು ಮಹಜರಿಗಾಗಿ ಹತ್ಯೆಯ ಸ್ಥಳಕ್ಕೆ ಕರೆದೊಯ್ದಿದ್ದರು. ಆ ವೇಳೆ, ಜನರು ಪ್ರತಿಭಟನೆ ನಡೆಸಿ, ಆಕ್ರೋಶ ವ್ಯಕ್ತಪಡಿಸಿದ್ದರು. ಜನರ ಮೇಲೆ ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದರು.
ಆ ಘಟನೆಯನ್ನು ಉದ್ದೇಶಿಸಿ ಶಿವಮೊಗ್ಗ ಮೂಲದ ಹಫೀಜ್ ಮೊಹಮ್ಮದ್ ಎಂಬಾತ ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಾಕಿದ್ದರು. ಪೋಸ್ಟ್‌ನಲ್ಲಿ “ಪ್ರಿಪರೇಶನ್ ಇಲ್ಲದೇ ಪ್ರವೀಣ್ ಚೌಗಲೆಯನ್ನು ಕೊಲ್ಲುವ ಒಂದು ಸುಲಭದ ದಾರಿಯನ್ನು ನೇಜಾರಿನವರು ಕಳೆದುಕೊಂಡರು” ಎಂದು ಬರೆದಿದ್ದರು.
ಪ್ರಚೋದನಾಕಾರಿ ಪೋಸ್ಟ್‌ಅನ್ನು ಗಮನಿಸಿದ್ದ ಉಡುಪಿ ಪೊಲೀಸರು ಹಫೀಜ್ ವಿರುದ್ಧ ಉಡುಪಿ ಸೆನ್ ಪೊಲೀಸ್ ಠಾಣೆಯಲ್ಲಿ ಸುಮೊಟೊ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಪರಾಧ ಕೃತ್ಯಕ್ಕೆ ಪ್ರಚೋದನೆ, ಸಾರ್ವಜನಿಕ ಶಾಂತಿ ಕದಡುವ ಆರೋಪದ ಮೇಲೆ ಐಪಿಸಿ ಸೆಕ್ಷನ್ 155, 505(2) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ನವೆಂಬರ್ 12ರಂದು ಉಡುಪಿಯ ನೇಜಾರು ನಗರದಲ್ಲಿ ಏಕಾಏಕಿ ಮನೆಗೆ ನುಗ್ಗಿದ ಆರೋಪಿ ಪ್ರವೀಣ್ ಚೌಗಲೆ ಮನೆಯಲ್ಲಿದ್ದ ಹಸೀನಾ, ಅವರ ಮಕ್ಕಳಾದ ಅಯ್ನಾಝ್ ಮತ್ತು ಹಾಸೀಂ ಹಾಗೂ 11 ವರ್ಷದ ಬಾಲಕ ಅಫ್ನಾನ್‌ನನ್ನು ಬರ್ಬರವಾಗಿ ಕೊಲೆ ಮಾಡಿ, ಪರಾರಿಯಾಗಿದ್ದ. ಪ್ರಕರಣದ ಬೆನ್ನತ್ತಿದ ಪೊಲೀಸರು ಬೆಳಗಾವಿ ಜಿಲ್ಲೆಯಲ್ಲಿ ಆರೋಪಿಯನ್ನು ಬಂಧಿಸಿದ್ದರು. ವಿಚಾರಣೆ ವೇಳೆ, ತಾನೇ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ. ಕೊಲೆಗೆ ಮೂರು ಕಾರಣಗಳಿವೆ ಎಂದು ಹೇಳಿಕೊಂಡಿದ್ದಾನೆ.
ತಾನು ಯುವತಿ ಅಯ್ನಾಝ್ ಅವರನ್ನು ಮಾತ್ರ ಕೊಲ್ಲಲು ಬಂದಿದ್ದೆ. ಆದರೆ, ತಡೆಯಲು ಬಂದವರಿಂದ ತಪ್ಪಿಸಿಕೊಳ್ಳಲು ಉಳಿದ ಮೂವರನ್ನು ಹತ್ಯೆಗೈದಿದ್ದಾಗಿ ವಿಚಾರಣೆ ವೇಳೆ ಆರೋಪಿ ಒಪ್ಪಿಕೊಂಡಿದ್ಧಾನೆ ಎಂದು ಪೊಲೀಸರು ತಿಳಿಸಿದ್ದಾರೆ.