ಮಂಗಳೂರಿನ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಮೊಗವೀರ ಪಟ್ಟಣ ನಿವಾಸಿ ರಾಜೇಶ್ ಕೋಟ್ಯಾನ್ ಯಾನೆ ರಾಜು ಕೋಟ್ಯಾನ್ ಎಂಬುವವರ ಕೊಲೆ ನಡೆಸಿದ್ದ ನಾಲ್ಕು ಮಂದಿ ಆರೋಪಿಗಳಿಗೆ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿದೆ.
2016ರ ಏಪ್ರಿಲ್ 12ರಂದು ಈ ಪ್ರಕರಣ ನಡೆದಿದ್ದು ಆರೋಪಿಗಳಾದ ಮೊಹಮ್ಮದ್ ಆಸೀಫ್ ಯಾನೆ ಆಚಿ, ಮೊಹಮ್ಮದ್ ಸುಹೈಲ್, ಅಬ್ದುಲ್ ಮುತಾಲಿಫ್ ಯಾನೆ ಮುತ್ತು ಮತ್ತು ಅಬ್ದುಲ್ ಅಸ್ವೀರ್ ಯಾನೆ ಅಸ್ವೀರ್ ಯಾನೆ ಅಚ್ಚುಗೆ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.
ಇದನ್ನು ಓದಿದ್ದೀರಾ? ನಕಲಿ ಎನ್ಕೌಂಟರ್ ಪ್ರಕರಣ: ಮಾಜಿ ಪೊಲೀಸ್ ಅಧಿಕಾರಿ ಪ್ರದೀಪ್ ಶರ್ಮಾಗೆ ಬಾಂಬೆ ಹೈಕೋರ್ಟ್ನಿಂದ ಜೀವಾವಧಿ ಶಿಕ್ಷೆ
2016ರಲ್ಲಿ ಉಳ್ಳಾಲ ಮೊಗವೀರಪಟ್ಟಣ ನಿವಾಸಿ ರಾಜೇಶ್ ಕೋಟ್ಯಾನ್ ಎಂಬವರನ್ನು ಆರೋಪಿಗಳು ಉಳ್ಳಾಲ ಕೋಟೆಪುರ ಬರಕಾ ಓವರ್ ಸೀಸ್ ಫ್ಯಾಕ್ಟರಿಯ ಬಳಿಯಲ್ಲಿ ಮರದ ಕಟ್ಟಿಗೆಗಳಿಂದ ಹೊಡೆದು ಕೊಲೆ ಮಾಡಿದ್ದರು. ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಕೊಲೆ ಪ್ರಕರಣವು ಮಂಗಳೂರು ನಗರದಲ್ಲಿ ಅಶಾಂತಿ ವಾತಾವರಣವನ್ನು ಸೃಷ್ಠಿಸಿತ್ತು.
ಇದನ್ನು ಓದಿದ್ದೀರಾ? ಕಲಬುರಗಿ | ಒಂದೇ ಕುಟುಂಬದ ನಾಲ್ವರ ಸಜೀವ ದಹನ ಪ್ರಕರಣ; ಅಪರಾಧಿಗೆ ಜೀವಾವಧಿ ಶಿಕ್ಷೆ
ಈ ಪ್ರಕರಣದಲ್ಲಿ ನಾಲ್ವರು ಆರೋಪಿಗಳು ಮಾತ್ರವಲ್ಲದೆ ಇಬ್ಬರು ಬಾಲಕರನ್ನು ಕೂಡಾ ಬಂಧಿಸಲಾಗಿತ್ತು. ಎಂಟು ವರ್ಷಗಳ ಕಾಲ ನ್ಯಾಯಾಲಯದಲ್ಲಿ ವಿಚಾರಣೆ ನಡೆದಿದ್ದು, ನ್ಯಾಯಾಲಯವು ನಾಲ್ಕು ಮಂದಿ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ ತಲಾ 25,000 ರೂಪಾಯಿ ದಂಡವನ್ನು ವಿಧಿಸಿದೆ.
ಸರಕಾರದ ಪರವಾಗಿ ಹಿರಿಯ ಸರಕಾರಿ ಅಭಿಯೋಜಕರಾದ ಜುಡಿತ್ ವೋಲ್ಗಾ ಮಾರ್ಗರೇಟ್ ಕ್ರಾಸ್ತರವರು ವಾದವನ್ನು ಮಂಡಿಸಿರುತ್ತಾರೆ.