ವಂಚನೆ ಪ್ರಕರಣದಲ್ಲಿ ಚೈತ್ರಾ ಕುಂದಾಪುರ ಅವರು ಜೈಲು ಸೇರಿದ್ದಾರೆ. ಅವರ ಬಗ್ಗೆ ಸುದ್ದಿ ಪ್ರಕಟ ಹಾಗೂ ಪ್ರಸಾರ ಮಾಡುವಾಗ ‘ಕುಂದಾಪುರ’ ಹೆಸರು ಬಳಸಬಾರದು ಎಂದು ಮಾಧ್ಯಮಗಳಿಗೆ ನಿರ್ಬಂಧ ಹೇರುವಂತೆ ಕೋರಿ ಬೆಂಗಳೂರು ಜಿಲ್ಲಾ ನ್ಯಾಯಾಲಯದಲ್ಲಿ ನಗರದ ಬಸವನಗುಡಿಯ ವ್ಯಕ್ತಿಯೊಬ್ಬರು ಅರ್ಜಿ ಸಲ್ಲಿಸಿದ್ದಾರೆ.
ಕುಂದಾಪುರ ಎಂಬುದು ತಾಲೂಕು ಕೇಂದ್ರವಾಗಿದೆ. ಚೈತ್ರಾ ಅವರ ಪೂರ್ಣ ಹೆಸರು ಚೈತ್ರಾ ಕುಂದಾಪುರ ಅಲ್ಲ. ಅವರು ಕುಂದಾಪುರ ತಾಲೂಕಿನವರಾಗಿದ್ದು, ಪಟ್ಟಣದ ಹೆಸರನ್ನು ಅವರ ಹೆಸರಿನೊಂದಿಗೆ ಸೇರಿಸಲಾಗಿದೆ. ಮಾಧ್ಯಮಗಳೂ ಅವರ ಹೆಸರು ಪ್ರಕಟಿಸುವಾಗ ಚೈತ್ರಾ ಕುಂದಾಪುರ ಎಂದು ಉಲ್ಲೇಖಿಸುತ್ತಿವೆ. ಇದರಿಂದ ಪಟ್ಟಣದ ಹೆಸರಿಗೆ ಧಕ್ಕೆ ಉಂಟಾಗುತ್ತಿದೆ ಎಂದು ಕುಂದಾಪುರ ಮೂಲದವರೇ ಆದ ಗಣೇಶ್ ಶೆಟ್ಟಿ ಅರ್ಜಿಯಲ್ಲಿ ವಿವರಿಸಿದ್ದಾರೆ.
ಕುಂದಾಪುರದ ಸಾಂಸ್ಕೃತಿಕ ಮತ್ತು ಆರ್ಥಿಕ ಅಭಿವೃದ್ಧಿಗೆ ಕದಂಬರು, ಚಾಲುಕ್ಯ, ಹೊಯ್ಸಳ, ವಿಜಯನಗರ ಅರಸರು ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಇಂತಹ ಪಟ್ಟಣದ ಹೆಸರನ್ನು ವಂಚನೆ ಆರೋಪಿ ಹೆಸರಿನೊಂದಿಗೆ ತಳಕು ಹಾಕಬಾರದು. ಸುದ್ದಿಗಳಲ್ಲಿ ಚೈತ್ರ ಕುಂದಾಪುರ ಎಂದು ಬಳಸುವುದು ಪಟ್ಟಣದ ಕುರಿತು ಅವಹೇಳನಕಾರಿಯಾಗಿದೆ ಎಂದು ದಾವೆಯಲ್ಲಿ ಆಕ್ಷೇಪಿಸಲಾಗಿದೆ.
ದಾವೆದಾರ ಪರ ವಕೀಲ ಪವನ ಚಂದ್ರ ಶೆಟ್ಟಿ ವಕಾಲತ್ತು ಹಾಕಿದ್ದಾರೆ. ಅರ್ಜಿಯು ಮುಂದಿನ ದಿನಗಳಲ್ಲಿ ವಿಚಾರಣೆಗೆ ಬರುವ ಸಾಧ್ಯತೆ ಇದೆ.