ಮೈಸೂರಿನ ಬನ್ನಿಮಂಟಪ ಪಂಜಿನ ಕಾವಾಯತು ಮೈದಾನದಲ್ಲಿ ಜಿಲ್ಲಾಡಳಿತ ವತಿಯಿಂದ 79 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ನೆರವೇರಿಸಿ ಮಾತನಾಡಿದ ಮೈಸೂರು ಜಿಲ್ಲಾ ಉಸ್ತುವಾರಿ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ ಹೆಚ್ ಸಿ ಮಹದೇವಪ್ಪ ‘ ತ್ಯಾಗ, ಬಲಿದಾನ, ಹೋರಾಟದಿಂದ ದಕ್ಕಿದ ಸ್ವಾತಂತ್ರ್ಯ ‘ ಎಂದರು.
” ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ನಾಯಕರು ಮತ್ತು ಯೋಧರ ತ್ಯಾಗವನ್ನು ಸ್ಮರಿಸಿ ಗೌರವ ಸಲ್ಲಿಸುವ ದಿನವಾಗಿದೆ. ನಾವು ಮತ್ತು ನಮ್ಮ ಮುಂದಿನ ಪೀಳಿಗೆಗಳು ವಿದೇಶಿ ವಸಾಹತುಶಾಹಿ ದಬ್ಬಾಳಿಕೆಯ ನೊಗದಿಂದ ಮುಕ್ತವಾದ ಸ್ವಾತಂತ್ರ್ಯದ ಗಾಳಿಯನ್ನು ಉಸಿರಾಡಲು ಅವರು ತಮ್ಮ ಬೆವರು ಮತ್ತು ರಕ್ತವನ್ನು ತ್ಯಾಗ ಮಾಡಿದ್ದಾರೆ. ನಮಗೆ ಸ್ವಾತಂತ್ರ್ಯ ತಂದು ಕೊಡಲು ಹೋರಾಡಿದ ಮಹಾತ್ಮ ಗಾಂಧೀಜಿ, ಜವಾಹರ್ ಲಾಲ್ ನೆಹರು, ಸರ್ದಾರ್ ವಲ್ಲಭಾಯಿ ಪಟೇಲ್, ಗೋಪಾಲಕೃಷ್ಣ ಗೋಖಲೆ, ಲೋಕಮಾನ್ಯ ತಿಲಕ್, ನೇತಾಜಿ ಸುಭಾಷ್ ಚಂದ್ರಬೋಸ್, ಮೌಲಾನಾ ಅಬ್ದುಲ್ ಕಲಾಂ ಆಜಾದ್, ಡಾ. ಬಿ. ಆರ್. ಅಂಬೇಡ್ಕರ್ ಸೇರಿದಂತೆ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗಿಯಾದ ಎಲ್ಲರನ್ನು ಸ್ಮರಿಸುತ್ತ ಗೌರವ ಸಲ್ಲಿಸಬೇಕು ” ಎಂದರು
ಭಾರತ ನಿಜವಾದ ಅರ್ಥದಲ್ಲಿ ಸ್ವಾತಂತ್ರ್ಯ, ಸೌಹಾರ್ದತೆ, ಭ್ರಾತೃತ್ವದ ಅಡಿಗಲ್ಲಿನ ಮೇಲೆ ನಮ್ಮ ಸಮಾಜ ನಿರ್ಮಾಣವಾಗಿದೆ. ಸ್ವಾತಂತ್ರ್ಯ ಕ್ಕಾಗಿ ಹೋರಾಟ, ತ್ಯಾಗ, ಬಲಿದಾನಗಳನ್ನು ಮಾಡಿದ ಹಿರಿಯರನ್ನು ಕೃತಜ್ಞತೆಯಿಂದ ನೆನಪು ಮಾಡಿಕೊಳ್ಳುವ ಕರ್ತವ್ಯದ ದಿನವಿದು. ಆದರೆ, ನಮ್ಮ ದೇಶಪ್ರೇಮ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮಕ್ಕಷ್ಟೇ ಸೀಮಿತಗೊಳ್ಳಬಾರದು. ದೇಶ ಪ್ರೇಮ ನಮ್ಮಲ್ಲಿ ಪ್ರತಿದಿನ, ಪ್ರತಿಕ್ಷಣ ರಕ್ತಗತವಾಗಿರಬೇಕು. ನಾವಿಂದು ಮನೆಯೊಳಗೆ ಸುರಕ್ಷಿತವಾಗಿ, ನಿಶ್ಚಿಂತೆಯಿoದ ಇರಲು ಕಾರಣ ಗಡಿಯಲ್ಲಿ ನಮ್ಮ ಹೆಮ್ಮೆಯ ಸೈನಿಕರು ತಮ್ಮ ಪ್ರಾಣ ಒತ್ತೆ ಇಟ್ಟು ಕಾಯುತ್ತಿರುವುದು. ಗಡಿಯಲ್ಲಿ ಹಗಲು, ರಾತ್ರಿ ಹೋರಾಡುತ್ತಿರುವ ಮತ್ತು ಹೋರಾಡುತ್ತಲೇ ವೀರ ಮರಣವನ್ನಪ್ಪಿದ ನಮ್ಮ ಹೆಮ್ಮೆಯ ಸೈನಿಕರಿಗೆ ಒಮ್ಮೆ ತಲೆಬಾಗಿ ನಮಿಸೋಣ.
ನಮ್ಮದು ಸರ್ವರನ್ನೂ ಒಳಗೊಂಡಿರುವ, ಸರ್ವರನ್ನೂ ಬೆಸೆಯುವ ಮತ್ತು ಸರ್ವರಿಗೂ ಸಮಪಾಲು ಸಮಬಾಳು ನೀಡುವ, ನಾಡಿನ ಪ್ರತಿಯೊಬ್ಬ ಪ್ರಜೆಯ ಜೀವನಮಟ್ಟ ಸುಧಾರಣೆಯನ್ನು ಗುರಿಯಾಗಿಟ್ಟುಕೊಂಡ ಸರ್ವೋದಯ ತತ್ವದ ಅಭಿವೃದ್ದಿಯಾಗಿದೆ. ಸಾಮಾಜಿಕ ನ್ಯಾಯದ ಕನಸುಗಾರ ಬಸವಣ್ಣ, ಗ್ರಾಮ ಸ್ವರಾಜ್ಯದ ಹರಿಕಾರ ಮಹಾತ್ಮ ಗಾಂಧೀಜಿ ಮತ್ತು ಸಾಮಾಜಿಕ ಪ್ರಜಾಪ್ರಭುತ್ವದ ಹೋರಾಟಗಾರ ಡಾ. ಬಿ. ಆರ್. ಅಂಬೇಡ್ಕರ್ ಅವರು ಸೇರಿದಂತೆ ಮತ್ತಿತರ ಸಾಮಾಜಿಕ ಮತ್ತು ರಾಜಕೀಯ ಚಿಂತಕರ ಆಶಯಗಳು ನಮಗೆ ಪ್ರೇರಣೆ ನೀಡಿವೆ ಎಂದು ಹೇಳಿದರು.

ಅನೇಕರ ತ್ಯಾಗ, ಬಲಿದಾನದಿಂದ ಸ್ವಾತಂತ್ರ್ಯ ಸಿಕ್ಕಿದೆ. ಎಲ್ಲ ಮಹನೀಯರು ಸರ್ವಸ್ವವನ್ನು ತ್ಯಾಗ ಮಾಡಿ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿದ್ದರು. ಶಾಂತಿಯುತ ಸಮಾಜವಿದ್ದರೆ ಮಾತ್ರ ಅಭಿವೃದ್ಧಿ ಸಾಧ್ಯ. ಹೀಗಾಗಿ, ನಮ್ಮ ಸರ್ಕಾರ ಐದು ಗ್ಯಾರಂಟಿಗಳನ್ನು ಜಾರಿಗೆ ತಂದಿದೆ. ಅಭಿವೃದ್ಧಿಯೇ ನಿಜವಾದ ಸ್ವಾತಂತ್ರ್ಯ. ಹೀಗಾಗಿ, ನಾವು ಈ ಮಹತ್ವದ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ಸರ್ಕಾರದ ಮಹತ್ವದ ಪಂಚ ಗ್ಯಾರಂಟಿಗಳಲ್ಲಿ ಒಂದಾದ ಅನ್ನಭಾಗ್ಯ ಯೋಜನೆಯು ಬಡಜನರ ಹಸಿವು ನೀಗಿಸಿ ನೆಮ್ಮದಿಯ ಜೀವನ ಸಾಗಿಸಲು ನೆರವಾಗಿದೆ. ಶರಣರ ದಾಸೋಹ ಪರಿಕಲ್ಪನೆಯಡಿ ಈ ಯೋಜನೆಯನ್ನು ಹಸಿವು ಮುಕ್ತ ಕರ್ನಾಟಕ ನಿರ್ಮಾಣದ ಉದ್ದೇಶದಿಂದ ಜಾರಿಗೆ ತರಲಾಗಿದೆ. ನಮ್ಮ ಸರ್ಕಾರವು ಅನ್ನಭಾಗ್ಯ ಯೋಜನೆಯಡಿ ಆದ್ಯತಾ ಪಡಿತರ ಚೀಟಿ ಮತ್ತು ಅಂತ್ಯೋದಯ ಪಡಿತರ ಚೀಟಿಯಲ್ಲಿರುವ ಪ್ರತಿ ಸದಸ್ಯರಿಗೆ ಪ್ರತಿ ಮಾಹೆ 10 ಕೆಜಿ. ಆಹಾರ ಧಾನ್ಯ ನೀಡಲಾಗುತ್ತಿದ್ದು, ಫೆಬ್ರವರಿ-2025 ರಿಂದ ಜುಲೈ-2025 ರವರೆವಿಗೆ ಒಟ್ಟು 6,42,630 ಕ್ವಿಂಟಾಲ್ ಪ್ರಮಾಣದಷ್ಟು ಅಕ್ಕಿಯನ್ನು ಪಡಿತರದಾರರಿಗೆ ವಿತರಿಸಲಾಗಿದೆ.
ಮೈಸೂರು ಜಿಲ್ಲೆಯಲ್ಲಿ ಶಕ್ತಿ ಯೋಜನೆ ಪ್ರಾರಂಭದಿoದ ಜುಲೈ 2025ರ ಅಂತ್ಯದವರೆಗೆ ಜಿಲ್ಲೆಯಲ್ಲಿ ಒಟ್ಟು 32.59 ಕೋಟಿ ಮಹಿಳೆಯರು ಶಕ್ತಿ ಯೋಜನೆಯನ್ನು ಸದುಪಯೋಗ ಪಡೆದುಕೊಂಡು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ನೆರವಾಗಿದೆ. ಇದರಲ್ಲಿ ಒಟ್ಟು ₹167.40 ಕೋಟಿ ಮೊತ್ತದ ಮಹಿಳಾ ಟಿಕೇಟ್ಗಳನ್ನು ವಿತರಣೆ ಮಾಡಲಾಗಿರುತ್ತದೆ. ಗೃಹಜ್ಯೋತಿ ಯೋಜನೆಯಡಿ ಸೆಸ್ಕ್ ವ್ಯಾಪ್ತಿಯಲ್ಲಿ ಮೈಸೂರು ಜಿಲ್ಲೆಯ್ಲ 9,61,477 ಗ್ರಾಹಕರು ಸೇವಾ ಸಿಂಧು ಪೋರ್ಟಲ್ನಲ್ಲಿ ನೊಂದಾಯಿಸಿದ್ದು, ಸದರಿ ನೋಂದಣಿ ಪೈಕಿ 9,00,148 ಗ್ರಾಹಕರು ಗೃಹಜ್ಯೋತಿ ಯೋಜನೆ ಸೌಲಭ್ಯ ಪಡೆದು ಫಲಾನುಭವಿಗಳಾಗಿರುತ್ತಾರೆ.
ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಒತ್ತಾಸೆಯಾಗಿ ನಮ್ಮ ಸರ್ಕಾರವು ಗೃಹಲಕ್ಷ್ಮಿ ಯೋಜನೆಯನ್ನು ಜಾರಿಗೆ ತಂದಿದ್ದು, ಈವರೆಗೆ ಜಿಲ್ಲೆಯಲ್ಲಿ 6,94,871 ಫಲಾನುಭವಿಗಳು ಯೋಜನೆಯ ಪ್ರಯೋಜನವನ್ನು ಪಡೆದುಕೊಂಡು ಕುಟುಂಬ ನಿರ್ವಹಣೆ ಮಾಡಿರುತ್ತಾರೆ. 2023ನೇ ಸಾಲಿನಲ್ಲಿ ಯುವನಿಧಿ ಯೋಜನೆಯಡಿ ಡಿಪ್ಲೋಮೋ ಹಾಗೂ ಪದವೀಧರ ನಿರುದ್ಯೋಗಿಗಳಿಗೆ ಪ್ರತಿ ತಿಂಗಳು ಕ್ರಮವಾಗಿ ₹1500 ಮತ್ತು ₹3000 ನಿರುದ್ಯೋಗ ಭತ್ಯೆಯನ್ನು ಗರಿಷ್ಠ ಎರಡು ವರ್ಷಗಳ ಅವಧಿಯವರಿಗೂ ನೀಡಲಾಗುತ್ತಿದೆ. ಮೈಸೂರು ಜಿಲ್ಲೆಯಲ್ಲಿ ಈವರೆಗೂ 12,006 ಅರ್ಜಿಗಳು ನೋಂದಣಿಯಾಗಿದ್ದು, 10,539 ಫಲಾನುಭವಿಗಳಿಗೆ ಡಿಬಿಟಿ ಮೂಲಕ ಹಣವನ್ನು ಪಾವತಿಸಲಾಗಿದೆ ಎಂದು ಮಾಹಿತಿ ನೀಡಿದರು.
2024-25ನೇ ಸಾಲಿನಲ್ಲಿ ಕೃಷಿ ಭಾಗ್ಯ ಯೋಜನೆಯಡಿ ಒಟ್ಟು ₹3.82 ಕೋಟಿ ಅನುದಾನದಲ್ಲಿ 290 ಫಲಾನುಭವಿಗಳಿಗೆ ಹಾಗೂ ಕೃಷಿ ಭಾಗ್ಯ ಯೋಜನೆಯಡಿ ಒಟ್ಟು ₹4.5 ಕೋಟಿ ಅನುದಾನದಲ್ಲಿ 354 ಫಲಾನುಭವಿಗಳಿಗೆ ಕೃಷಿ ಹೊಂಡ, ಕ್ಷೇತ್ರ ಬದು, ಪಾಲಿಥೀನ್ ಹೊದಿಕೆ, ಡೀಸೆಲ್ ಪಂಪ್ಸೆಟ್ ಹಾಗೂ ತುಂತುರು ನೀರಾವರಿ ಘಟಕವನ್ನು ಅನುಷ್ಠಾನಿಸಲಾಗಿದೆ. ಮೈಸೂರು ಜಿಲ್ಲೆಯು ತೋಟಗಾರಿಕೆಯಲ್ಲಿ ಮುಂಚೂಣಿಯಲ್ಲಿದ್ದು, ತೋಟಗಾರಿಕೆ ಇಲಾಖಾ ವತಿಯಿಂದ ವಿವಿಧ ಯೋಜನೆಗಳನ್ನು ರೈತರ ಅನುಕೂಲಕ್ಕಾಗಿ ಅನುಷ್ಠಾನಗೊಳಿಸಲಾಗುತ್ತಿದೆ. ಜಿಲ್ಲಾ ಪಂಚಾಯತ್, ರಾಜ್ಯ ವಲಯ ಹಾಗೂ ಕೇಂದ್ರ ಪುರಸ್ಕೃತ ಯೋಜನೆಗಳಡಿ ಜಿಲ್ಲೆಯಲ್ಲಿ 2024-25ನೇ ಸಾಲಿನ ಮಾರ್ಚ್ ಮಾಹೆಯ ಅಂತ್ಯಕ್ಕೆ ₹23 ಕೋಟಿ ಅನುದಾನ ವೆಚ್ಚ ಭರಿಸಿದ್ದು, ಯೋಜನೆಯ ಮಾರ್ಗಸೂಚಿಗಳ ಅನುಸಾರ 8,102 ಸಂಖ್ಯೆ ಫಲಾನುಭವಿಗಳಿಗೆ ಸವಲತ್ತುಗಳನ್ನು ವಿತರಿಸಲಾಗಿದೆ ಎಂದು ತಿಳಿಸಿದರು.
ಸಾಮಾಜಿಕ ಭದ್ರತಾ ಯೋಜನೆಯಡಿ ಸರ್ಕಾರವು ವಿವಿಧ ಗುಂಪುಗಳಿಗೆ ಆರ್ಥಿಕ ಸಹಾಯ ಮತ್ತು ಇತರೆ ಸೌಲಭ್ಯಗಳನ್ನು ಒದಗಿಸಿದ್ದು, ಮೈಸೂರು ಜಿಲ್ಲೆಯಲ್ಲಿ 92,940 ಫಲಾನುಭವಿಗಳು ಇಂದಿರಾಗಾoಧಿ ವೃದ್ಧಾಪ್ಯ ವೇತನ, 11,016 ಮನಸ್ವಿನಿ ಯೋಜನೆ, 88 ಮೈತ್ರಿ ಯೋಜನೆ, 40,648 ಅಂಗವೀಕಲರ ವೇತನ, 1,61,946 ಸಂಧ್ಯಾ ಸುರಕ್ಷಾ ಹಾಗೂ 1,12,403 ಫಲಾನುಭವಿಗಳು ವೇತನ ಪಡೆಯುತ್ತಿದ್ದಾರೆ. ಡಾ. ಬಿ. ಆರ್. ಅಂಬೇಡ್ಕರ್ ನಿವಾಸ್ ವಸತಿ ಯೋಜನೆಯಡಿ 2024-25ನೇ ಸಾಲಿನಲ್ಲಿ ಮೈಸೂರು ಜಿಲ್ಲೆಗೆ 3,243 ಮನೆಗಳನ್ನು ಮಂಜೂರು ಮಾಡಲಾಗಿದೆ. ಪ್ರಧಾನಿ ಮಂತ್ರಿ ಆವಾಸ್ ವಸತಿ ಯೋಜನೆಯಡಿ 2024-25 ನೇ ಸಾಲಿನಲ್ಲಿ ಜಿಲ್ಲೆಗೆ ಒಟ್ಟು 13,985 ಮನೆಗಳು ಮಂಜೂರಾಗಿದ್ದು, ಒಟ್ಟಾರೆ ವಿವಿಧ ಯೋಜನೆಗಳಡಿ 21,754 ಮನೆಗಳನ್ನು ಮಂಜೂರು ಮಾಡಲಾಗಿರುತ್ತದೆ ಎಂದು ಅಂಕಿಅಂಶ ನೀಡಿದರು.
2025-26ನೇ ಸಾಲಿನಲ್ಲಿ ಮೈಸೂರು ಜಿಲ್ಲೆಯಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಒಟ್ಟಾರೆ 16,019 ಕಾಮಗಾರಿಗಳನ್ನು ಕ್ರಿಯಾಯೋಜನೆಯಲ್ಲಿ ತೆಗೆದುಕೊಂಡಿದ್ದು, ಅದರಲ್ಲಿ ಪ್ರಸ್ತುತ 4,351 ಕಾಮಗಾರಿಗಳು ಪ್ರಾರಂಭಗೊoಡಿವೆ. ನರೇಗಾ ಯೋಜನೆಯಡಿ ₹17.50 ಲಕ್ಷ ಮಾನವ ದಿನಗಳ ಸೃಜನೆ ಗುರಿಯನ್ನು ನಿಗಧಿಪಡಿಸಿದ್ದು, ಇಲ್ಲಿಯವರೆಗೆ ₹8.10 ಲಕ್ಷ ಮಾನವ ದಿನಗಳ ಸೃಜಿಸಲಾಗಿದೆ. ಜಿಲ್ಲೆಗೆ ನಿಗಧಿಯಾಗಿರುವ ಗುರಿಯನ್ನು ಈ ವರ್ಷದ ಅಂತ್ಯದೊಳಗಾಗಿ ಪೂರ್ಣಗೊಳಿಸಲು ಕ್ರಮವಹಿಸಲಾಗುತ್ತದೆ. 2024-25ನೇ ಸಾಲಿನ ಸ್ವಚ್ಛ ಸರ್ವೇಕ್ಷಣಾ ಕಾರ್ಯಕ್ರಮದಲ್ಲಿ ಮೈಸೂರು ನಗರವು ನವದೆಹಲಿಯ ವಿಜ್ಞಾನಭವನದಲ್ಲಿ ಸ್ವಚ್ಛ ನಗರಿ ಪ್ರಶಸ್ತಿಯನ್ನು ಭಾರತದ ಘನತೆವೆತ್ತ ರಾಷ್ಟ್ರಪತಿಗಳಾದ ದ್ರೌಪದಿ ಮುರ್ಮು ಅವರಿಂದ ಪಡೆದುಕೊಳ್ಳಲಾಯಿತು. ಮೈಸೂರು ನಗರವು ಪ್ರತೀ ವರ್ಷವು ಸಹ ಸ್ವಚ್ಛನಗರಿ ಪ್ರಶಸ್ತಿಯನ್ನು ಗಳಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಎಂದರು.

2024-25ನೇ ಸಾಲಿನಲ್ಲಿ ಮೈಸೂರು ಮಹಾನಗರ ಪಾಲಿಕೆಯು ದಾಖಲೆ ₹239.00 ಕೋಟಿ ಅಂದರೆ ಶೇ.93 ರಷ್ಟು ಆಸ್ತಿ ತೆರಿಗೆ ಸಂಗ್ರಹ ಮಾಡುವ ಮೂಲಕ ರಾಜ್ಯದಲ್ಲೇ ಹೆಚ್ಚು ಆಸ್ತಿ ತೆರಿಗೆ ಸಂಗ್ರಹ ಮಾಡಿದ ಕೀರ್ತಿಗೆ ಭಾಜನವಾಗಿರುತ್ತದೆ. ಈ ಮುಖೇನ ಮೈಸೂರು ನಗರದ ಸರ್ವತೋಮುಖ ಅಭಿವೃದ್ದಿಗೆ ಕಾರಣವಾಗಿರುತ್ತದೆ. ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಪ್ರತಿನಿತ್ಯ ಉತ್ಪತ್ತಿಯಾಗುವ ಸುಮಾರು 145 ಟನ್ ಹಸಿ ತ್ಯಾಜ್ಯ ಬಳಸಿ ಬಯೋ ಗ್ಯಾಸ್ ತಯಾರಿಸುವ ಘಟಕವನ್ನು ₹65.98 ಕೋಟಿ ವೆಚ್ಚದಲ್ಲಿ ಸ್ಥಾಪಿಸಲು ಭಾರತ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿಮಿಟೆಡ್ ಅವರೊಡನೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಈ ಪ್ರಸ್ತಾವನೆ ಸರ್ಕಾರದಿಂದ ಅನುಮೋದನೆ ಪಡೆಯಲಾಗಿದೆ. ಜಿಲ್ಲೆಯಲ್ಲಿ ನೂತವಾಗಿ 9 ‘ ನಮ್ಮ ಕ್ಲಿನಿಕ್ ‘ಗಳನ್ನು ಪ್ರಾರಂಭಿಸಿ, ಕಾರ್ಯನಿರ್ವಹಿಸುತ್ತಿವೆ. ಸದರಿ ನಮ್ಮ ಕ್ಲಿನಿಕ್ನಲ್ಲಿ ಸುಮಾರು 80,489 ಜನರು ಉಚಿತ 12 ರೀತಿಯ ವಿವಿಧ ಆರೋಗ್ಯ ಸೇವೆಯನ್ನು ಪಡೆಯುತ್ತಿದ್ದಾರೆ. ರಾಷ್ಟ್ರೀಯ ಬಾಲ ಸ್ವಾಥಸ್ಯ ಕಾರ್ಯಕ್ರಮದಡಿಯಲ್ಲಿ ಒಟ್ಟು 1,98,107 ಮಕ್ಕಳನ್ನು ನೋಂದಾವಣೆ ಮಾಡಲಾಗಿದ್ದು, ಇದರಲ್ಲಿ 1,93,116 ಮಕ್ಕಳನ್ನು ಆರೋಗ್ಯ ತಪಾಸಣೆಗೆ ಒಳಪಡಿಸಿ ಶೇ.97 ರಷ್ಟು ಸಾಧನೆ ಮಾಡಲಾಗಿದೆ.
ಮೈಸೂರಿನ ದಿವಾನ್ಸ್ ರಸ್ತೆಯ ಬಳಿಯಿರುವ ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಭವನ ಕಾಮಗಾರಿಯನ್ನು ₹23.83 ಕೋಟಿ ವೆಚ್ಚದಲ್ಲಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಪೂರ್ಣಗೊಳಿಸಲಾಗುವುದು. ಜಿಲ್ಲೆಯಲ್ಲಿ ಡಾ. ಬಿ. ಆರ್. ಅಂಬೇಡ್ಕರ್ ಹಾಗೂ ಡಾ. ಬಾಬು ಜಗಜೀವನರಾಂ ಭವನಗಳ ನಿರ್ಮಾಣ, ಪ್ರಗತಿ ಕಾಲೋನಿ, ಸ್ಮಶಾನಗಳ ಅಭಿವೃದ್ಧಿ ಹಾಗೂ ವಿವಿಧ ಕಾಮಗಾರಿಗಾಗಿ ₹11.46 ಕೋಟಿ ವೆಚ್ಚ ಮೀಸಲಿರಿಸಿ ಕ್ರಮ ಕೈಗೊಳ್ಳಲಾಗಿದೆ. ಒಟ್ಟಾರೆ ಹಲವಾರು ಮಹನೀಯರ, ಸ್ವಾತಂತ್ರ್ಯ ಯೋಧರ, ದೇಶಪ್ರೇಮಿಗಳ, ಹಿರಿಯರ ಹೋರಾಟ ಹಾಗೂ ಪರಿಶ್ರಮದಿಂದ ನಿರ್ಮಾಣವಾಗಿರುವ ಈ ಭವ್ಯ ಭಾರತದ ಭವಿಷ್ಯವನ್ನು ಇನ್ನೂ ಎತ್ತರಕ್ಕೆ ಕೊಂಡೊಯ್ಯುವ ಸವಾಲುಗಳು ನಮ್ಮೆಲ್ಲರ ಮುಂದಿದೆ ಎಂದರು.
ಈ ಸುದ್ದಿ ಓದಿದ್ದೀರಾ?ಮೈಸೂರು | ಸಂಭ್ರಮದ ಜನಸ್ವಾತಂತ್ರ್ಯೋತ್ಸವ; ಸಂವಿಧಾನ ಸಂರಕ್ಷಣಾ ಪಡೆಗೆ ಚಾಲನೆ
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಜಿ ಲಕ್ಷ್ಮಿಕಾಂತ್ ರೆಡ್ಡಿ, ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್ ಖಾನ್, ಜಿಲ್ಲಾ ಪೊಲೀಸ್ ಅಧೀಕ್ಷಕ ವಿಷ್ಣುವರ್ಧನ ಸೇರಿದಂತೆ ಹಲವರು ಇದ್ದರು.