- ವಿವಾಹವಾಗಿದ್ದನ್ನು ಮುಚ್ಚಿಟ್ಟು ಯುವಕನನ್ನು ಪ್ರೀತಿಸುತ್ತಿದ್ದ ಮಹಿಳೆ
- ಹುಟ್ಟುಹಬ್ಬದ ನೆಪ ಹೇಳಿ ಮನೆಗೆ ಕರೆದು ಬಿಸಿನೀರು ಎರಚಿದ್ದ ಮಹಿಳೆ
ಅನ್ಯ ಯುವತಿಯೊಂದಿಗೆ ವಿವಾಹ ನಿಶ್ಚಿತಾರ್ಥ ಮಾಡಿಕೊಂಡಿದ್ದಕ್ಕೆ ಯುವಕನ ಮೇಲೆ ಆತನ ಸ್ನೇಹಿತೆ ಬಿಸಿನೀರು ಎರಚಿ, ಗಾಯಗೊಳಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಕಲಬುರಗಿ ಮೂಲದ ವಿಜಯ್ ಕುಮಾರ್ ಗಾಯಗೊಂಡಿರುವ ಯುವಕ. ಆತನನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಆತನ ಮೇಲೆ ಬಿಸಿನೀರು ಎರಚಿದ ಮಹಿಳೆ ವಿರುದ್ಧ ಚಾಮರಾಜಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಜಯ್ ಕುಮಾರ್ ಬಟ್ಟೆ ಮಾರಾಟ ಜಾಲತಾಣದಲ್ಲಿ ಕೆಲಸ ಮಾಡುತ್ತಿದ್ದರು. ಆತನಿಗೆ ತನ್ನದೇ ಜಿಲ್ಲೆಯ ಮಹಿಳೆಯೊಬ್ಬರು ಪರಿಚಯವಾಗಿದ್ದರು. ಇಬ್ಬರ ನಡುವೆ ಸ್ನೇಹವಿತ್ತು. ಆದರೆ, ಆಕೆಗೆ ವಿವಾಹವಾಗಿದ್ದರೂ, ಈತನನ್ನು ಪ್ರೀತಿಸುತ್ತಿದ್ದರು ಮತ್ತು ಮದುವೆಯಾಗುವಂತೆ ಒತ್ತಾಯಿಸುತ್ತಿದ್ದರು ಎಂದು ತಿಳಿದುಬಂದಿದೆ.
“ಆಕೆಗೆ ವಿವಾಹವಾಗಿರುವ ವಿಚಾರ ತಿಳಿದುಕೊಂಡ ವಿಜಯ್, ಆಕೆಯಿಂದ ಅಂತರ ಕಾಯ್ದುಕೊಂಡಿದ್ದ. ಅಲ್ಲದೆ, ಇತ್ತೀಚೆಗೆ ಬೇರೊಬ್ಬ ಯುವತಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದ” ಎಂದು ಪೊಲೀಸರು ತಿಳಿಸಿದ್ದಾರೆ.
“ಮೇ 25ರಂದು ಮಹಿಳೆ, ತನ್ನ ಹುಟ್ಟುಹಬ್ಬದ ಆಚರಣೆಗೆಂದು ವಿಜಯ್‌ನನ್ನು ತನ್ನ ಕೊಠಡಿಗೆ ಕರೆಸಿಕೊಂಡಿದ್ದರು. ಈ ವೇಳೆ, ವಿಜಯ್ ಮೇಲೆ ಬಿಸಿನೀರು ಎರಚಿ, ಮಹಿಳೆ ಪರಾರಿಯಾಗಿದ್ದಾರೆ. ಮನೆ ಮಾಲೀಕರ ಸಹಾಯದಿಂದ ವಿಜಯ್ ಆಸ್ಪತ್ರೆಗೆ ದಾಖಲಾಗಿದ್ದಾರೆ” ಎಂದು ಪೊಲೀಸರು ವಿವರಿಸಿದ್ದಾರೆ.