“ಗದಗ ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ತಿಗೆ ನಮ್ಮ ಹೃತ್ಪೂರ್ವಕ ನಮಸ್ಕಾರಗಳು. ಗಜೇಂದ್ರಗಡದಲ್ಲಿ 10ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಜರುಗುತ್ತಿದೆ. ಇದನ್ನು ಕಾಟಾಚಾರಕ್ಕೆ ಮಾಡುತ್ತಿದ್ದಿರೊ ಮಾಡಬೇಕೆಂದು ಮಾಡುತ್ತಿದ್ದಿರೊ ಗೊತ್ತಿಲ್ಲ?” ಎಂದು ಯುವ ಕವಿ ವೀರಪ್ಪ ತಾಳದವರ ಕಿಡಿಕಾರಿದ್ದಾರೆ.
ಗದಗ ಜಿಲ್ಲೆಯ ರೋಣ ತಾಲೂಕಿನ ಯಾವಗಲ್ ಗ್ರಾಮದ ಕವಿ ವೀರಪ್ಪ ತಾಳದವರ ಈದಿನ.ಕಾಮ್‌ಗೆ ಪ್ರತಿಕ್ರಿಯೆ ನೀಡಿದ್ದು, “10ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಆಮಂತ್ರಣದಲ್ಲಿರುವ ಕವಿಗೋಷ್ಠಿ ಕಾರ್ಯಕ್ರಮಕ್ಕೆ ನಮಗೆ ಮಾಹಿತಿ ಕೊಡದೆ, ಅನುಮತಿ ಪಡೆಯದೆ ನಮ್ಮ ಹೆಸರು ಹಾಕಿಕೊಂಡಿದ್ದಾರೆ. ಬಹುತೇಕ ಜಿಲ್ಲೆಯ ಕವಿಗಳಿಗೆ ಒಂದು ಸಣ್ಣ ಸಂಗತಿಯೂ ತಿಳಿಸದೆ ಗೋಷ್ಠಿಯ ಪಟ್ಟಿಯನ್ನು ಸಾಧನೆ ಎಂಬಂತೆ ಹಿಗ್ಗಿಸಿಕೊಂಡಿರುವುದು ಕಸಾಪದ ಆಡಳಿತದ ಬೇಜವಾಬ್ದಾರಿಗೆ ಹಿಡಿದ ಕೈಗನ್ನಡಿಯಾಗಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
“ನಿನ್ನೆ ಆಕಸ್ಮಿಕವಾಗಿ ಈ ಮಾಹಿತಿ ನಮ್ಮ ಗಮನಕ್ಕೆ ಬಂತು. ಜಿಲ್ಲೆಯ ಕವಿಗಳಿಗೆ ಒಂದು ಮಾತು ತಿಳಿಸದೆ ಇಷ್ಟೊಂದು ಆತುರದ ಕಾರ್ಯಕ್ರಮ ರೂಪಿಸುವ ಇರಾದೆಯಾದರೂ ಏನಿತ್ತು ಎಂಬುದನ್ನು ಜಿಲ್ಲಾಧ್ಯಕ್ಷರಾದ ಶ್ರೀ ವಿವೇಕಾನಂದ ಪಾಟೀಲರು ಸ್ಪಷ್ಟ ಪಡಿಸಬೇಕೆಂದು” ಯುವ ಕವಿ ವೀರಪ್ಪ ತಾಳದವರ ಒತ್ತಾಯಿಸಿದ್ದಾರೆ.

“ಶ್ರೀ ವಿವೇಕಾನಂದ ಪಾಟೀಲರು ಅಧ್ಯಕ್ಷರಾದ ನಂತರ ಇದು ಪ್ರಥಮವಾಗಿ ಜರುಗುತ್ತಿರುವ ಜಿಲ್ಲಾ ಸಮ್ಮೇಳನ ಎಂದು ಕಾಣುತ್ತದೆ. ಈ ಹುಮ್ಮಸ್ಸಿನ ಕಾರಣಕ್ಕಾದರೂ ತಾವು ಜಿಲ್ಲೆಯ ಕವಿಗಳಿಗೆ, ಕನ್ನಡ ಕಟ್ಟುವ ಮನಸ್ಸುಗಳಿಗೆ ತಿಳಿಸುವ ಪುಟ್ಟ ಕಾಯಕವಾದರೂ ಮಾಡಬಹುದಿತ್ತು. ‘ಹೇಗೊ ಹೆಸರು ಹಾಕಿ ಬಿಡೋಣ, ಇಷ್ಟವಿದ್ದವರು ಬಂದು ಕವಿತೆ ಓದಲಿ, ಇಲ್ಲ ಬಿಡಲಿ?” ಎಂಬ ನಿಷ್ಕಾಳಜಿಗೆ ಕಸಾಪ ಈಡಾಗಿರುವುದು ನಮ್ಮ ಜಿಲ್ಲೆಗೆ ಆದ ಅವಮಾನವೆ ಆಗಿದೆ” ಎಂದು ಕಿಡಿಕಾರಿದ್ದಾರೆ.
ಇದನ್ನು ಓದಿದ್ದೀರಾ? ಡಾಲಿ ಚಾಯ್‌ವಾಲ ಮಂಗಳೂರಿನವನಾಗಿದ್ದಿದ್ದರೆ ಆತನ ಸ್ಟಾಲ್ ಕೂಡ ಬುಲ್ಡೋಜ್ ಆಗುತ್ತಿತ್ತು : ನಟ ರಾಜ್ ಬಿ ಶೆಟ್ಟಿ
“ಕರ್ನಾಟಕ ಏಕೀಕರಣ ಚಳುವಳಿಗೆ ಮುನ್ನುಡಿ ಬರೆದ, ಕನ್ನಡ ನಾಡಿಗೆ ಕರ್ನಾಟಕ ಎಂದು ಹೆಸರು ಕೊಟ್ಟ. ಭುವನೇಶ್ವರಿಯ ಚಿತ್ರ ಬರೆದ, ಉದಯವಾಗಲಿ ಚೆಲುವ ಕನ್ನಡ ನಾಡೆಂದು ಸಾರಿದ , ಪಂಚತಂತ್ರ ರೂಪಗೊಂಡ, ದಾನ ಚಿಂತಾಮಣಿ ಅತಿಮಬ್ಬೆ, ಗದುಗಿನ ನಾರಾಯಣಪ್ಪ, ಚಾಮರಸ, ಹುಯಿಲುಗೋಳ ನಾರಾಯಣರಾವ್ ರು, ಭೀಮಸೇನ ಜೋಶಿ,ಅಂದಾನಪ್ಪ ದೊಡ್ಡಮೇಟಿ, ಅನೇಕ ಮಹಾನುಭಾವರು ಜನ್ಮ ತಳೆದ ಈ ಪುಣ್ಯ ಭೂಮಿಗೆ, ಮುದ್ರಣ ಕಾಶಿಗೆ ಯಾವ ಗರಿ ಮೂಡಿಸಲು ಹೊರಟಿದೆಯೊ ಎಂಬುದನ್ನು ಜಿಲ್ಲಾ ಕಸಾಪ ಹಾಗೂ ಆಡಳಿತ ಮಂಡಳಿಯೆ ತಿಳಿಸಬೇಕೆಂದು” ಈ ಮೂಲಕ ಗದಗ ಜಿಲ್ಲೆಯ ಎಲ್ಲಾ ಕವಿಗಳು ಮನವಿ ಮಾಡಿಕೊಳ್ಳುತ್ತೇವೆ ಎಂದು ಕವಿ ವೀರಪ್ಪ ತಾಳದವರ ತಿಳಿಸಿದ್ದಾರೆ.


