ಸಾರ್ವಜನಿಕರಿಗೆ ಸರ್ಕಾರದ ಎಲ್ಲ ಸೇವೆಗಳು ನಿಗದಿತ ಅವಧಿಯಲ್ಲಿ ಜನರಿಗೆ ತಲುಪುವಂತೆ ಮಾಡುವ ಉದ್ದೇಶದಿಂದ ಜಾರಿಗೆ ತಂದಿರುವ ಸಕಾಲ ಯೋಜನೆಯ ಅನುಷ್ಠಾನದಲ್ಲಿ ಇನ್ನಷ್ಟು ಕಾರ್ಯಕ್ಷಮತೆ ತರಲು, ಗಡುವು ಮೀರಿರುವ ಅರ್ಜಿಗಳ ಶೀಘ್ರ ವಿಲೇವಾರಿಗೆ ಇಲಾಖಾ ಅಧಿಕಾರಿಗಳು ಗಮನ ನೀಡಬೇಕು ಎಂದು ಗದಗ ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ ಆರ್ ಸೂಚಿಸಿದರು.
ಗದಗ ಪಟ್ಟಣದ ಜಿಲ್ಲಾಡಳಿತ ಭವನದಲ್ಲಿ ಏರ್ಪಡಿಸಿದ್ದ ಜಿಲ್ಲಾಮಟ್ಟದ ಸಕಾಲ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
“ಸಾರ್ವಜನಿಕರು ಸಕಾಲ ಮೂಲಕ ಅರ್ಜಿ ಸಲ್ಲಿಸಿದ ದಿನಾಂಕದಿಂದಲೇ ಕಾಲಮಿತಿಯೊಳಗೆ ಸೇವೆ ಒದಗಿಸುವುದು ನಮ್ಮ ಹೊಣೆಗಾರಿಕೆ. ಯಾವುದೇ ಇಲಾಖೆಯಲ್ಲೂ ವಿನಾಕಾರಣ ವಿಳಂಬಕ್ಕೆ ಆಸ್ಪದ ನೀಡಬೇಡಿ. ಕಾಲಮಿತಿ ಮೀರಿ ಉಳಿದಿರುವ ಅರ್ಜಿಗಳನ್ನು ತಕ್ಷಣ ನಿಯಮಾನುಸಾರ ವಿಲೇವಾರಿಗೊಳಿಸಿ. ಕಾಲಮಿತಿಯಲ್ಲಿ ಅರ್ಜಿ ವಿಲೇವಾರಿ ಮಾಡಬೇಕೆನ್ನುವ ಒತ್ತಡದಿಂದಾಗಿ ಅನಗತ್ಯವಾಗಿ ಅರ್ಜಿಗಳ ತಿರಸ್ಕಾರ ಮಾಡಬೇಡಿ. ನಿಯಮಾನುಸಾರ ಅರ್ಜಿ ತಿರಸ್ಕಾರ ಮಾಡಲು ಕ್ರಮವಹಿಸಬೇಕು. ತಪ್ಪಿದಲ್ಲಿ ಇಲಾಖಾಧಿಕಾರಿಗಳು ಶಿಕ್ಷೆ, ದಂಡ ಹಾಗೂ ಇಲಾಖಾ ವಿಚಾರಣೆಗೆ ಒಳಪಡಬೇಕಾದೀತು” ಎಂದು ಎಚ್ಚರಿಸಿದರು.
“ಸಕಾಲ ಯೋಜನೆ ಕುರಿತು ಇಲಾಖಾ ಮುಖ್ಯಸ್ಥರು ಸರಿಯಾಗಿ ತಿಳಿವಳಿಕೆ ಹೊಂದಬೇಕು. ಸಕಾಲ ಯೋಜನೆಯನ್ನು 2011 ರಿಂದ ಆರಂಭಗೊಳಿಸಲಾಗಿದೆ. ಪ್ರಸ್ತುತ 1173 ಸೇವೆಗಳನ್ನು ಸಕಾಲ ಯೋಜನೆಯಡಿ ಸಾರ್ವಜನಿಕರಿಗೆ ಒದಗಿಸಲಾಗುತ್ತಿದೆ. ಸಕಾಲ ಯೋಜನೆಯಡಿ ಅರ್ಜಿ ಸಲ್ಲಿಸುವವರು ಗ್ರಾಮ ಒನ್, ಕರ್ನಾಟಕ ಒನ್, ನಾಡಕಚೇರಿ, ಸಿಎಸ್ ಸಿ ಸೆಂಟರ್ ಮೂಲಕ ಅರ್ಜಿ ಸಲ್ಲಿಸಲಿದ್ದಾರೆ. ಅವರು ಸಲ್ಲಿಸಿದ ಅರ್ಜಿಗಳು ಸರಿಯಿದ್ದಲ್ಲಿ ಶೀಘ್ರ ವಿಲೇವಾರಿ ಮಾಡುವ ಮೂಲಕ ಸಕಾಲ ಯೋಜನೆಯಲ್ಲಿ ಉತ್ತಮ ಪ್ರಗತಿ ಸಾಧಿಸಬೇಕಾಗಿದೆ. ಯೋಜನೆಯಡಿ ಹಲವು ಯೋಜನೆಗಳನ್ನು ಸೇರ್ಪಡೆಗೊಳಿಸಲಾಗಿದೆ. ಈ ಬಗ್ಗೆ ಜಿಲ್ಲಾ ಮಟ್ಟದ ಅಧಿಕಾರಿಗಳು ತಮ್ಮ ಇಲಾಖೆಗೆ ಸಂಬAಧಿಸಿದ ಯೋಜನೆಗಳ ಕುರಿತಂತೆ ಮೊದಲು ಅರಿತುಕೊಂಡು ನಂತರ ಸಕಾಲದಲ್ಲಿಯೇ ಅರ್ಜಿ ಸ್ವೀಕರಿಸಿ ಸೇವೆ ಒದಗಿಸಬೇಕು. 0 ( ಝೀರೋ) ರಿಸೀಪ್ಟ್ ಇರುವಂತಹ ಇಲಾಖೆಯ ಯೋಜನೆಗಳ ಕುರಿತು ಮುಖ್ಯಸ್ಥರು ಸಾರ್ವಜನಿಕರಿಗೆ ಸರಿಯಾಗಿ ಮಾಹಿತಿ ನೀಡುವ ಮೂಲಕ ಸಕಾಲದಲ್ಲಿಯೇ ಅರ್ಜಿ ಸ್ವೀಕರಿಸಿ ಪರಿಹಾರ ನೀಡಬೇಕು” ಎಂದು ಹೇಳಿದರು.
“ಜಿಲ್ಲಾ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ತಮ್ಮ ಇಲಾಖೆಯ ಸಕಾಲ ಯೋಜನೆಯಡಿ ಸಾಧಿಸಿದ ಪ್ರಗತಿ ಅಂಕಿ ಅಂಶಗಳನ್ನು ಹಾಗೂ ವಿಳಂಬ ವಿಲೇವಾರಿ ಮಾಡಿದ ಕುರಿತಂತೆ ತಾಂತ್ರಿಕ ತೊಂದರೆಗಳ ಕುರಿತು ಸಭೆಯ ಗಮನಕ್ಕೆ ತಂದರು. ಜೊತೆಗೆ ಮುಂದಿನ ಹಂತದಲ್ಲಿ ಕಾಲಮಿತಿಯಲ್ಲಿಯೇ ಅರ್ಜಿ ವಿಲೇವಾರಿ ಮಾಡಲಾಗುವುದು. ಸಕಾಲ ಪ್ರಗತಿಯಲ್ಲಿ ರಾಜ್ಯದಲ್ಲಿ ಗದಗ ಜಿಲ್ಲೆ 8 ನೇ ಸ್ಥಾನದಲ್ಲಿದೆ. ಜಿಲ್ಲೆಯಲ್ಲಿ ಜುಲೈ 2025 ರ ಅಂತ್ಯದವರೆಗೆ ಸಕಾಲ ಯೋಜನೆಯಡಿ 67154 ಅರ್ಜಿಗಳನ್ನು ಸ್ವೀಕರಿಸಲಾಗಿದೆ. 68305 ಅರ್ಜಿಗಳನ್ನು ವಿಲೇವಾರಿ ಮಾಡಿದ್ದು 5873 ಅರ್ಜಿಗಳನ್ನು ತಿರಸ್ಕರಿಸಲಾಗಿದೆ. 1039 ಅರ್ಜಿಗಳನ್ನು ಕಾಲಮಿತಿ ನಂತರ ಹಾಗೂ 67266 ಅರ್ಜಿಗಳನ್ನು ನಿಗದಿತ ಕಾಲಮಿತಿಯಲ್ಲಿ ವಿಲೇವಾರಿ ಮಾಡಲಾಗಿದೆ. ಆಗಸ್ಟ್ ಮಾಹೆಯಲ್ಲಿ ಕಂದಾಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಿಗೆ ಸಂಬಂಧಿಸಿದ 1157 ಅರ್ಜಿಗಳನ್ನು ತಿರಸ್ಕರಿಸಲಾಗಿದೆ. 251 ಅರ್ಜಿಗಳನ್ನು ಗಡುವು ಮೀರಿದ ನಂತರ ವಿಲೇವಾರಿಗೊಳಿಸಲಾಗಿದೆ” ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ: ಗದಗ | ಸಾರಿಗೆ ನೌಕರರ ಮುಷ್ಕರದಿಂದ ಪ್ರಯಾಣಿಕರು ಪರದಾಟ
ಸಭೆಯಲ್ಲಿ ಕೃಷಿ ಜಂಟಿ ನಿರ್ದೇಶಕಿ ತಾರಾಮಣಿ, ಜಿಲ್ಲಾ ಕಾರ್ಮಿಕ ಅಧಿಕಾರಿ ಶ್ರೀಶೈಲ ಸೋಮನಕಟ್ಟಿ, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಮೆಹಬೂಬ ತುಂಬರಮಟ್ಟಿ, ಡಿಡಿಪಿಐ ಆರ್ ಎಸ್ ಬುರುಡಿ, ಕೆ.ಎಸ್.ಆರ್.ಟಿ.ಸಿ. ವಿಭಾಗೀಯ ನಿಯಂತ್ರಣಾಧಿಕಾರಿ ದೇವರಾಜ, ಡಿಡಿಎಲ್ ಆರ್ ರುದ್ರಣ್ಣಗೌಡ ಜಿ ಜೆ ನಗರಸಭೆ ಪೌರಾಯುಕ್ತ ರಾಜಾರಾಮ ಪವಾರ, ಅಲ್ಪಸಂಖ್ಯಾತರ ಇಲಾಖೆ ಜಿಲ್ಲಾ ಅಧಿಕಾರಿ ಅಮಿತ ಬಿದರಿ, ಪಶು ಸಂಗೋಪನಾ ಇಲಾಖೆಯ ಉಪನಿರ್ದೇಶಕ ಡಾ. ಹುಲಗಣ್ಣವರ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.