ಭಾರತ ಕಂಡ ಶ್ರೇಷ್ಟ ಮಹಾ ನಾಯಕರಲ್ಲಿ ಒಬ್ಬರಾಗಿರುವ ಡಾ ಬಿ ಆರ್ ಅಂಬೇಡ್ಕರ್ ಅವರ ಜಯಂತಿಯನ್ನು ಶ್ರಮಿಕ ವರ್ಗವಾದ ತಮ್ಮೆಲ್ಲರ ಜತೆಗೆ ಮಾಡುತ್ತಿರುವುದು ನಮ್ಮ ನಿಮ್ಮೇಲ್ಲರ ಪುಣ್ಯ. ನಮ್ಮ ದೇಶದ ಪ್ರತಿಯೊಬ್ಬರ ಪಾಲಿನ ಪವಿತ್ರ ಗ್ರಂಥವಾದ ಸಂವಿಧಾನದ ಹಿಂದಿನ ದೊಡ್ಡ ಶಕ್ತಿ ಬಾಬಾ ಸಾಹೇಬ್ ಅಂಬೇಡ್ಕರ್ ಎಂದು ಹೊಳೆ ಮಣ್ಣೂರು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಶಿವನಗೌಡ ಮೆಣಸಗಿ ತಿಳಿಸಿದರು.
ಗದಗ ಜಿಲ್ಲೆ ರೋಣ ತಾಲೂಕಿನ ಹೊಳೆ ಮಣ್ಣೂರ ಗ್ರಾಮದಲ್ಲಿ ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ನಡೆದ ಬದು ನಿರ್ಮಾಣ ಕಾಮಗಾರಿ ಸ್ಥಳದಲ್ಲಿ ಹಮ್ಮಿಕೊಂಡಿದ್ದ ‘ಸಂವಿಧಾನ ಶಿಲ್ಪಿ’ ಡಾ ಬಿ ಆರ್ ಅಂಬೇಡ್ಕರ್ ಅವರ 133ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
“ನಮ್ಮ ಭಾರತೀಯರಿಗೆ ಮೂರು ಮುಖ್ಯ ತತ್ವಗಳನ್ನು ಅಂಬೇಡ್ಕರ್ ಅವರು ನೀಡಿದ್ದಾರೆ. ಅವುಗಳೆಂದರೆ, ʼಶಿಕ್ಷಣ, ಸಂಘಟನೆ, ಹೋರಾಟʼ ಈ ತತ್ವಗಳ ದಿಸೆಯಲ್ಲಿ ಪ್ರತಿಯೊಬ್ಬರೂ ಕೆಲಸ ಮಾಡಬೇಕು” ಎಂದರು.
“ಪ್ರಪಂಚದಲ್ಲಿ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಭಾರತ. ದೇಶದ ಸಾಮಾನ್ಯ ಹಾಗೂ ಕಟ್ಟ ಕಡೆಯ ಮನುಷ್ಯನಿಗೆ ಎಲ್ಲ ಮೂಲಭೂತ ಹಕ್ಕುಗಳನ್ನು ದಯಪಾಲಿಸಿದ್ದು ಭಾರತದ ಶ್ರೇಷ್ಟ ಸಂವಿಧಾನ. ಅಂತಹ ಸಂವಿಧಾನ ಶಿಲ್ಪಿ ಡಾ. ಬಿಆರ್ ಅಂಬೇಡ್ಕರ್ ಅವರ ಜನ್ಮದಿನಾಚರಣೆಯನ್ನು ಇಂದು ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯ ಕಾಮಗಾರಿ ನಡೆಯುವ ಸ್ಥಳದಲ್ಲಿ ನೂರಾರು ಕಾರ್ಮಿಕರ ಸಮಕ್ಷಮದಲ್ಲಿ ಆಚರಣೆ ಮಾಡುತ್ತಿರುವುದು ಅರ್ಥಪೂರ್ಣವಾಗಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ಮೈಸೂರು | ಯದುವೀರ್ ಹೆಸರನ್ನು ʼಯಮರಾಜ್ ಒಡಿಯರ್ʼ ಎಂದ ಮೋದಿ: ಪ್ರಧಾನಿ ಪ್ರಮಾದಕ್ಕೆ ಕಾಲೆಳೆದ ನೆಟ್ಟಿಗರು
ಇದೇ ಸಂದರ್ಭದಲ್ಲಿ ಮೇ 7ರಂದು ನಡೆಯುವ ಲೋಕಸಭಾ ಚುನಾವಣೆಗೆ ತಮ್ಮ ಅಮೂಲ್ಯವಾದ ಮತವನ್ನು ಕಡ್ಡಾಯವಾಗಿ ಚಲಾಯಿಸುವಂತೆ ಹಾಗೂ ಮತದಾನದಿಂದ ಯಾರೂ ಕೂಡಾ ಹೊರಗೆ ಉಳಿಯದಂತೆ ಮಾಹಿತಿ ನೀಡಿದ ಅವರು ಗ್ರಾಮದಿಂದ ಉದ್ಯೋಗದ ನಿಮಿತ್ಯ ಬೇರೆ ಗ್ರಾಮಗಳಿಗೆ ವಲಸೆ ಹೋಗಿರುವವರು ಕಡ್ಡಾಯವಾಗಿ ಅಂದು ಗ್ರಾಮಕ್ಕೆ ಹಾಗೂ ತಮ್ಮ ಮತಗಟ್ಟೆಗೆ ಬಂದು ಮತ ಚಲಾಯಿಸಬೇಕೆಂದು ಕೋರಿ ಮತದಾನದ ಕುರಿತು ಪ್ರತಿಜ್ಞಾವಿಧಿ ಭೋದಿಸಿದರು.
ಈ ಸಂದರ್ಭದಲ್ಲಿ ಹೊಳೆ ಮಣ್ಣೂರು ಗ್ರಾಮ ಪಂಚಾಯಿತಿ ಸಿಬ್ಬಂದಿಗಳು ಹಾಗೂ ನೂರಾರು ಕೂಲಿ ಕಾರ್ಮಿಕರರು ಇದ್ದರು.
