ಇಳಿ ವಯಸ್ಸಿನ ವೃದ್ಧ ದಂಪತಿಗೆ ಮನರೇಗಾ ಯೋಜನೆಯು ಬದುಕಲು ಆಧಾರವಾಗಿದೆ. ಸಾಮೂಹಿಕ ಬದು ನಿರ್ಮಾಣ ಕಾಮಗಾರಿಯಲ್ಲಿ ಕೂಲಿಕಾರರಾಗಿ ಭಾಗವಹಿಸುವ ಮೂಲಕ ಸ್ವಾವಲಂಬಿ ಜೀವನ ನಡೆಸಿ ಈ ದಂಪತಿ ಯುವಕರನ್ನೂ ನಾಚಿಸುವಂತೆ ದುಡಿಮೆ ಮಾಡಿ ಗಟ್ಟಿ ನೆಲೆ ಕಂಡುಕೊಂಡಿದ್ದಾರೆ.
ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಬಿದರಹಳ್ಳಿ ಪಂಚಾಯತಿಯ ಮುಂಡವಾಡ ಗ್ರಾಮದಲ್ಲಿ ವಾಸವಾಗಿರುವ 82 ವರ್ಷದ ಶಂಕರಪ್ಪ ಕೂಬಿಹಾಳ ಮತ್ತು 74 ವರ್ಷದ ಶಂಕರಮ್ಮ ಕೂಬಿಹಾಳ ದಂಪತಿ, ತಮ್ಮ ಇಳಿವಯಸ್ಸಿನಲ್ಲೂ ಶ್ರಮಜೀವಿಗಳಾಗಿ ಬದುಕು ಕಟ್ಟಿಕೊಂಡಿದ್ದಾರೆ. ಸುಮಾರು ಹತ್ತು ವರ್ಷಗಳಿಂದ ಈ ದಂಪತಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ಮನರೇಗಾ) ಅಡಿಯಲ್ಲಿ ವಿವಿಧ ಕಾಮಗಾರಿಗಳಲ್ಲಿ ಕೈಜೋಡಿಸಿ ದುಡಿಯುವುದರೊಂದಿಗೆ ಸಹಜೀವನ ನಿರ್ವಹಿಸುತ್ತಿದ್ದಾರೆ.
ಸಮುದಾಯ ಬದು ನಿರ್ಮಾಣ, ನಾಲಾ ಮತ್ತು ಕೆರೆ ಹೂಳೆತ್ತುವಂತಹ ಶ್ರಮಪೂರ್ಣ ಕಾರ್ಯಗಳಲ್ಲೂ ಯುವಕರ ಸಮಾನಾಗಿ ಕೆಲಸ ಮಾಡುತ್ತಾರೆ. ಯಾರ ಸಹಾಯವೂ ಇಲ್ಲದೇ ಶ್ರಮವನ್ನಷ್ಟೇ ನಂಬಿ ಬದುಕುತ್ತಿರುವ ಇವರ ಹಠ ಇಂದಿನ ಪೀಳಿಗೆಗೆ ಒಂದು ಜೀವನ ಪಾಠವಾಗಿದೆ.
ಈ ಅಜ್ಜ ಅಜ್ಜಿ ಯುವಜನತೆ ನಾಚುವಂತೆ ಉದ್ಯೋಗ ಖಾತ್ರಿ ಯೋಜನೆ (ಮನರೇಗಾ) ಅಡಿಯಲ್ಲಿ ಉದ್ಯೋಗ ಪಡೆದು ಕೆಲಸ ಮಾಡುತ್ತಿದ್ದಾರೆ. ಬಂದ ಕೂಲಿ ಮೊತ್ತದಿಂದ ಸ್ವಾವಲಂಬಿ ಜೀವನವನ್ನು ನಡೆಸುತ್ತಿದ್ದಾರೆ. ತಮ್ಮ ಎರಡು ಎಕರೆ ಕುಷ್ಕಿ ಕೃಷಿಭೂಮಿಯಲ್ಲಿ ಮತ್ತು ಬೇರೆ ರೈತರ ಜಮೀನುಗಳಲ್ಲಿ ದುಡಿಯುವ ಈ ದಂಪತಿ, ಬೇಸಿಗೆ ಕಾಲದಲ್ಲಿ ಮನರೇಗಾ ಕಾಮಗಾರಿಗಳಲ್ಲಿ ಭಾಗವಹಿಸಿ ಯೋಜನೆಯ ಸದುಪಯೋಗ ಪಡೆಯುತ್ತಿದ್ದಾರೆ.
ಇಳಿವಯಸ್ಸಿನಲ್ಲೂ ಕುಗ್ಗದ ಜೀವನೋತ್ಸಾಹದೊಂದಿಗೆ ಈ ಜೋಡಿ ಕೆಲಸದಲ್ಲಿ ತೊಡಗಿಕೊಳ್ಳುತ್ತಿದ್ದು, ಇವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಇಬ್ಬರನ್ನೂ ಮದುವೆ ಮಾಡಿ ಕೊಟ್ಟಿದ್ದಾರೆ. ದಂಪತಿಗಳ ಉತ್ಸಾಹದ ಗುಟ್ಟೇನು ಅಂದರೆ.. ದಿನಂಪ್ರತಿ ಜೋಳದ ರೊಟ್ಟಿ ಊಟ, ನಿತ್ಯವು ಮೈ ಬಗ್ಗಿಸಿ ದುಡಿಯುವುದು ಕಾರಣ ಎಂದು ನಗುತ್ತಾರೆ.

ಐವತ್ತು ಅರವತ್ತು ವಯಸ್ಸಿಗೆ ಜನರು ಆರೋಗ್ಯದ ವಿಚಾರದಲ್ಲಿ ಹೆಚ್ಚು ಹೈರಾಣಾಗುವ ಇಂದಿನ ದಿನಮಾನಗಳಲ್ಲಿ ಈ ದಂಪತಿಗಳ ಬಳಿ ಯಾವುದೇ ಕಾಯಿಲೆ ಹತ್ತಿರ ಸುಳಿದಿಲ್ಲ. ಕಿವಿಗಳು ಸ್ಪಷ್ಟವಾಗಿ ಕೇಳುತ್ತವೆ. ಕಣ್ಣುಗಳು ನಿಚ್ಚಳವಾಗಿ ಕಾಣಿಸುತ್ತವೆ. ಕೂಲಿ ಕೆಲಸವನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಾರೆ. ಆ ಮೂಲಕ ನರೇಗಾ ಯೋಜನೆಯಲ್ಲಿ ಹಿರಿಯ ನಾಗರಿಕರಿಗೆ ಇರುವ ಅರ್ಧ ಕೆಲಸ ಪೂರ್ಣ ಕೂಲಿ ಎಂಬ ನಿಯಮವನ್ನು ಸದುಪಯೋಗ ಪಡಿಸಿಕೊಂಡಿದ್ದಾರೆ. ಯುವಕರು ನಾಚುವಂತೆ ಕಷ್ಟಪಟ್ಟು ಕೆಲಸ ನಿರ್ವಹಿಸಿ ಕೂಲಿಮೊತ್ತದಿಂದ ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ.
ಹಿರಿಯ ನರೇಗಾ ಕೂಲಿಕಾರ್ಮಿಕ ದಂಪತಿ ಈ ದಿನ.ಕಾಮ್ ಜೊತೆಗೆ ಮಾತನಾಡಿ, “ಬ್ಯಾಸಗಿಯೊಳಗ ನಾವು ತಪ್ಪದ ಮನರೇಗಾ ಕಾಮಗಾರಿಯೊಳಗ ಭಾಗವಹಿಸ್ತೀವಿ. ಇದು ನಮ್ಮ ದುಡಿತಕ್ಕ ಭಾಳ ಅನುಕೂಲ ಆಗ್ಯೇದ. ಸುಮಾರು ಹತ್ತ ವರ್ಷ ಆಗಿರಬೇಕ್‌ರಿ ನಾವು ಹಿಂಗ ದುಡಕೋತ ಬಂದು. ನರೇಗಾ ಕೆಲಸ ಇಲ್ದಾಗ ನಮ್ಮ ಹಾಗೂ ಮಂದಿ ಹೊಲ್ದಾಗ ಜೊತಿಯಾಗಿ ದುಡಿತಿವ್ರಿ” ಎಂದು ಪ್ರತಿಕ್ರಿಯೆ ನೀಡಿದರು.
ಈ ಸುದ್ದಿ ಓದಿದ್ದೀರಾ? ರೋಣ | ಉದ್ಘಾಟನೆಯಾದರೂ ಬಾಗಿಲು ತೆರೆಯದ ಇಂದಿರಾ ಕ್ಯಾಂಟೀನ್; ಸ್ಥಳೀಯರ ಆಕ್ರೋಶ
ಈ ಕುರಿತು ಮುಂಡರಗಿ ತಾಪಂ ಇಒ ವಿಶ್ವನಾಥ ಹೊಸಮನಿ ಮಾತನಾಡಿ “ಮುಂಡರಗಿ ತಾಲೂಕಿನಲ್ಲಿ ಮನರೇಗಾ ಯೋಜನೆಯಲ್ಲಿ ಕೆಲಸ ಮಾಡುತ್ತಾ ಅನೇಕರು ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ. ಗುಳೆ ಹೋಗುವುದನ್ನು ತಪ್ಪಿಸುವುದರ ಜೊತೆಗೆ ಇಂತಹ ಹಿರಿಯ ನಾಗರಿಕರು ಯೋಜನೆಯ ಕಾಮಗಾರಿ ಮೂಲಕ ಸ್ವಾವಲಂಬಿ ಜೀವನ ನಡೆಸುತ್ತಿರುವುದು ದುಡಿಯುವ ವರ್ಗದ ಪ್ರತಿಯೊಬ್ಬರಿಗೂ ಮಾದರಿ” ಎಂದು ಹೇಳಿದರು.

ಶರಣಪ್ಪ ಎಚ್ ಸಂಗನಾಳ
ಗದಗ ಜಿಲ್ಲೆಯ ರೋಣ ತಾಲೂಕಿನ ಸವಡಿ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ. ಧ್ವನಿ ಶೈಕ್ಷಣಿಕ ಸಂಪನ್ಮೂಲ ಕೇಂದ್ರದಲ್ಲಿ ಒಂದಷ್ಟು ಕಾಲ ಕೆಲಸ. ಸದ್ಯ 'ಈ ದಿನ.ಕಾಮ್'ನಲ್ಲಿ ಮೀಡಿಯಾ ಕೋಆರ್ಡಿನೇಟರ್. ಓದು, ಪಕ್ಷಿ ವೀಕ್ಷಣೆ, ಕೃಷಿಯಲ್ಲಿ ಆಸಕ್ತಿ.