ಗದಗ ಜಿಲ್ಲೆಯ ಗಜೇಂದ್ರಗಡದಲ್ಲಿ ಅಲ್ಪಸಂಖ್ಯಾತರ ಮುರಾರ್ಜಿ ವಸತಿ ನಿಲಯ, ಮೇಟ್ರಿಕ್ ಪೂರ್ವ, ಮೇಟ್ರಿಕ ನಂತರ ವಸತಿ ನಿಲಯ ಮಂಜೂರು ಮಾಡಬೇಕೆಂದು ಅಂಜುಮನ್ ಇಸ್ಲಾಂ ಕಮೀಟಿ ಮುಖಂಡರು ಒತ್ತಾಯಿಸಿದ್ದಾರೆ. ಜಿಲ್ಲಾ ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ ಅಧಿಕಾರಿ ಶರಣಪ್ಪ ಗರೇಬಾಳ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಮನವಿ ಸಲ್ಲಿಸಿ ಮಾತನಾಡಿದ ಕಮಿಟಿಯ ಕಾರ್ಯದರ್ಶಿ ದವಲಸಾಬ್ ತಾಳಿಕೋಟಿ, “ಗಜೇಂದ್ರಗಡ ಪಟ್ಟಣವು ಗದಗ ಜಿಲ್ಲೆಯಲ್ಲಿಯೇ ಅತ್ಯಂತ ತೀವ್ರಗತಿಯಲ್ಲಿ ಬೆಳವಣಿಗೆ ಹೊಂದುತ್ತಿರುವ ತಾಲೂಕು ಕೇಂದ್ರವಾಗಿದೆ. ಸುಮಾರು 25,000ಕ್ಕೂ ಹೆಚ್ಚು ಮಂದಿ ಅಲ್ಪಸಂಖ್ಯಾತರ ಸಮುದಾಯದವರು ವಾಸಿಸುತ್ತಿದ್ದಾರೆ. ಈ ಸಮುದಾಯದ ಮಕ್ಕಳ ಉನ್ನತ ಶಿಕ್ಷಣ ಹಾಗೂ ಭವಿಷ್ಯದ ಹಿತ ದೃಷ್ಟಿಯಿಂದ ಗಜೇಂದ್ರಗಡ ಪಟ್ಟಣದಲ್ಲಿಯೇ ಅಲ್ಪಸಂಖ್ಯಾತರ ಮುರಾರ್ಜಿ ವಸತಿ ನಿಲಯ ಸ್ಥಾಪನೆ ಮಾಡಬೇಕು. ಅದಕ್ಕಾಗಿ ಹಲವು ವರ್ಷಗಳಂದಲೂ ಬೇಡಿಕೆ ಸಲ್ಲಿಸುತ್ತಿದ್ದೇವೆ. ಆದರೂ, ಇನ್ನೂ ಜಾರಿಯಾಗಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
“ಅಲ್ಪಸಂಖ್ಯಾತ ಸಮುದಾಯದ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪೂರಕವಾಗುವಂತೆ ಅಲ್ಪಸಂಖ್ಯಾತರ ಮುರಾರ್ಜಿ ವಸತಿ ನಿಲಯ, ಅಲ್ಪಸಂಖ್ಯಾತರ ಮೆಟ್ರಿಕ್ ನಂತರದ ವಸತಿ ನಿಲಯ, ಅಲ್ಪಸಂಖ್ಯಾತರ ಮೆಟ್ರಿಕ್ ಪೂರ್ವ ವಸತಿ ನಿಲಯವನ್ನು ಗಜೇಂದ್ರಗಡ ಪಟ್ಟಣದಲ್ಲಿಯೇ ಸ್ಥಾಪಿಸುವ ಮೂಲಕ ಶೈಕ್ಷಣಿಕ ಪ್ರಗತಿಗೆ ಪ್ರೋತ್ಸಾಹಿಸಬೇಕು” ಎಂದು ದಾವಲಸಾಬ್ ತಾಳಿಕೋಟಿ ಹೇಳಿದರು.
ಈ ವೇಳೆ ಅಂಜುಮನ್ ಇಸ್ಲಾಂ ಕಮೀಟಿ ಛೇರ್ಮನ್ ಹಸನಸಾಬ ತಟಗಾರ, ಫಯಾಜ್ ತೋಟದ, ದಾದು ಹಣಗಿ, ಭಾಷಾ ಮುದಗಲ್ಲ, ಇಮ್ರಾನ್ ಅತ್ತಾರ ಇದ್ದರು.