ರಾಜ್ಯದ ಜನಸಾಮಾನ್ಯರ ಬದುಕು ಹಸನಾಗಬೇಕು, ಹಸಿವು ಮುಕ್ತವಾಗಬೇಕೆಂದು ಜಾರಿಗೆ ತಂದಿರುವ ಅನ್ನಭಾಗ್ಯ ಯೋಜನೆ ನೆಮ್ಮದಿ ಹಾಗೂ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಆಸರೆಯಾಗಿದೆ ಎಂದು ರಾಜ್ಯದ ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳು ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್ ಕೆ ಪಾಟೀಲ್ ನುಡಿದರು.
ಗದಗ ಜಿಲ್ಲಾಡಳಿತ ಭವನದ ಆಡಿಟೋರಿಯಂ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ʼಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಹಾಗೂ ಕರ್ನಾಟಕ ಆಹಾರ ನಾಗರಿಕ ಸರಬರಾಜು ನಿಗಮದಿಂದ ಅನ್ನಭಾಗ್ಯ ಯೋಜನೆಗೆ ನೇರ ನಗದು ವರ್ಗಾವಣೆʼ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು.
“ಹೇಳಿದ್ದನ್ನು ಸಮರ್ಪಕವಾಗಿ ಅನುಷ್ಠಾನ ಮಾಡುವ ಮೂಲಕ ಸರ್ಕಾರ ನುಡಿದಂತೆ ನಡೆದಿದೆ. ರಾಜ್ಯದ ಜನಸಾಮಾನ್ಯರ ಹಸಿವು ನೀಗಿಸಿದ ಸಾರ್ಥಕ ಭಾವ ಮೂಡಿದೆ. ನೀವೆಲ್ಲರೂ ನಮ್ಮನ್ನು ನಂಬಿ ಆಶೀರ್ವದಿಸಿದ್ದೀರಿ. ನಿಮ್ಮ ಆಶೀರ್ವಾದದ ಶಕ್ತಿಯಿಂದ ಇಂದು ನಿಮಗೆಲ್ಲ 10 ಕೆಜಿ ಅಕ್ಕಿ ನೀಡಲು ಸಾಧ್ಯವಾಗಿದೆ. ತಾತ್ಕಾಲಿಕವಾಗಿ ಪ್ರತಿ ಪಡಿತರ ಕುಟುಂಬದ ಸದಸ್ಯರಿಗೆ 5 ಕೆಜಿ ಅಕ್ಕಿ ಹಾಗೂ 5 ಕೆಜಿ ಅಕ್ಕಿಗೆ ತಗಲುಬಹುದಾದ ಹಣವನ್ನು ನೀಡಲಾಗುತ್ತಿದೆ” ಎಂದು ತಿಳಿಸಿದರು.
“ಅನ್ನಭಾಗ್ಯ ಯೋಜನೆಯ ನಗದು ವರ್ಗಾವಣೆಗೆ ಜಿಲ್ಲೆಯಲ್ಲಿ ಸದ್ಯ ಬಿಪಿಎಲ್ ಹಾಗೂ ಎಎಪಿ ಸೇರಿದಂತೆ ಒಟ್ಟಾರೆ 11,88,833 ರಷ್ಟು ಅರ್ಹ ಪಡಿತರ ಚೀಟಿದಾರರಿದ್ದು, 6,43,423ರಷ್ಟು ಫಲಾನುಭವಿಗಳಿಗೆ 10,36,55,120 ರೂ. ನೇರ ನಗದು ಜಮೆ ಮಾಡಲು ಚಾಲನೆ ದೊರಕಿದೆ. ಇದೊಂದು ಕ್ರಾಂತಿಕಾರಕ ಕಾರ್ಯವಾಗಿದ್ದು, ಹಸಿವುಮುಕ್ತ ರಾಜ್ಯ ಮಾಡುವಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವ ನಮ್ಮ ಸರ್ಕಾರ ದಿಟ್ಟ ಹೆಜ್ಜೆ ಇಟ್ಟಿದೆ” ಎಂದರು.
“ಬೆಲೆ ಏರಿಕೆಯಿಂದ ಬೇಸತ್ತ ಜನಸಾಮಾನ್ಯರಿಗೆ ಆರ್ಥಿಕ ಆಧಾರ ನೀಡುವ ಗೃಹಲಕ್ಷ್ಮಿ ಯೋಜನೆಗೆ ನೋಂದಣಿ ಕಾರ್ಯಕ್ಕೆ ಜುಲೈ 19ರಂದು ಚಾಲನೆ ನೀಡಲಾಗುತ್ತಿದೆ. ಪ್ರತಿ ಕುಟುಂಬದ ಯಜಮಾನಿಗೆ ಪ್ರತಿ ತಿಂಗಳು ₹2000 ನೆರವು ನೀಡುವ ಯೋಜನೆ ಇದಾಗಿದೆ. ಬಡವರ ಬದುಕು ಅಸಹನೀಯವಾಗಿರುವದನ್ನು ಮನಗಂಡು ಕುಟುಂಬದ ಆರ್ಥಿಕ ಪುನಶ್ಚೇತನಕ್ಕೆ ಸರ್ಕಾರ ಮುಂದಾಗಿದೆ. ಅಗಸ್ಟ 16, 17ರಂದು ಗೃಹಲಕ್ಷ್ಮಿ ಯೋಜನೆಯ ₹2,000 ಆರ್ಥಿಕ ನೆರವು ಅರ್ಹ ಫಲಾನುಭವಿಗಳಿಗೆ ತಲುಪಲಿದೆ” ಎಂದು ತಿಳಿಸಿದರು.
“ಗೃಹಲಕ್ಷ್ಮಿ ಯೋಜನೆಯ ಮೊತ್ತದಿಂದ ಆರ್ಥಿಕ ಅಡಚಣೆ ನೀಗಿಸಲು ನೆರವು ನೀಡಿದಂತಾಗುತ್ತದೆ. ಈಗಾಗಲೇ ಶಕ್ತಿ ಯೋಜನೆ ಅಪಾರ ಜನಮನ್ನಣೆಗೆ ಪಾತ್ರವಾಗಿದ್ದು, ಒಂದೇ ತಿಂಗಳಲ್ಲಿ ಮಹಿಳೆಯರು 17 ಕೋಟಿ ರೂ. ಮೊತ್ತದ ಉಚಿತ ಬಸ್ ಪ್ರಯಾಣ ಮಾಡಿದ್ದು ಖುಷಿ ತಂದಿದೆ” ಎಂದು ಸಂತಸ ವ್ಯಕ್ತಪಡಿಸಿದರು.
ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, “ಬಡವರ ಹಸಿವು ನಿಗಿಸುವ ಶ್ರೇಷ್ಠ ʼಅನ್ನಭಾಗ್ಯ ಯೋಜನೆʼ ಅಡಿ ರಾಜ್ಯದಲ್ಲಿ 1.36 ಕೋಟಿಯಷ್ಟು ಬಿಪಿಎಲ್ ಪಡಿತರ ಕುಟುಂಬಗಳಿವೆ. ಸರ್ಕಾರದ ಪ್ರತಿ ಪೈಸೆ ಅರ್ಹರಿಗೆ ತಲುಪಬೇಕು ಮತ್ತು ಅದು ಸದುಪಯೋಗ ಆಗಬೇಕು. ಸರ್ಕಾರ ಅಥವಾ ಅಧಿಕಾರಿ ಉತ್ತಮ ಕೆಲಸ ಮಾಡಿದಾಗ, ಅದನ್ನು ಮೆಚ್ಚಿ ಬೆನ್ನು ತಟ್ಟುವ ಕಾರ್ಯವಾಗುತ್ತದೆ” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಅನ್ನಭಾಗ್ಯದ ಅನಿಸಿಕೆ: ಫಲಾನುಭವಿ ಯಾಕೂಬ ಅವರು ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಾ “ಮನೆಯ ಪ್ರತಿ ಸದಸ್ಯರಿಗೆ 5 ಕೆಜಿ ಅಕ್ಕಿಯ ಮೊತ್ತ ₹170ರಂತೆ ನಮಗೆ ₹680 ಸಿಗಲಿದೆ. ಇದರಿಂದ ನಾವು ಅಕ್ಕಿ, ಬೇಳೆ, ಸಕ್ಕರೆಯಂತಹ ಪಧಾರ್ಥಗಳನ್ನು ಖರೀದಿಸಲು ತುಂಬಾ ಸಹಕಾರಿಯಾಗಲಿದೆ. ಈ ಅನ್ನಭಾಗ್ಯ ಯೋಜನೆ ಜಾರಿಗೊಳಿಸಿದ ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಸಚಿವ ಎಚ್ ಕೆ ಪಾಟೀಲ್ ಅವರಿಗೆ ತುಂಬು ಹೃದಯದ ಧನ್ಯವಾದಗಳು” ಎಂದರು.
ಈ ಸುದ್ದಿ ಓದಿದ್ದೀರಾ? ಗದಗ | ಶೋಷಣೆ ವಿರುದ್ಧ ದನಿ ಎತ್ತಲು ಧೈರ್ಯ ಬರಬೇಕಾದರೆ ಉನ್ನತ ಶಿಕ್ಷಣ ಪಡೆಯಬೇಕು: ವಿಠ್ಠಲ್ ವಗ್ಗನ್
ಫಲಾನುಭವಿ ಶರಣಮ್ಮ ಲಿಗಾಡಿ ಮಾತನಾಡಿ, “ಮುಖ್ಯಮಂತ್ರಿ ಸಿದ್ಧರಾಮಯ್ಯನವರು ನೀಡುವ ಅನ್ನಭಾಗ್ಯ ಯೋಜನೆಯ ಧನಭಾಗ್ಯದ ಹಣವು ಕುಟುಂಬಕ್ಕೆ ಅತ್ಯಂತ ಅನುಕೂಲಕರವಾಗಿದೆ. ನೆಮ್ಮದಿಯ ಜೀವನ ನಡೆಸಲು ಸಹಾಯ ಮಾಡಿದ ಸರ್ಕಾರಕ್ಕೆ ಕೃತಜ್ಞೆಗಳನ್ನು ಸಲ್ಲಿಸುತ್ತೇನೆ” ಎಂದರು.
ಶಾಸಕ ಜಿ ಎಸ್ ಪಾಟೀಲ್, ಜಿಲ್ಲಾಧಿಕಾರಿ ವೈಶಾಲಿ ಎಂ ಎಲ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಸುಶೀಲಾ ಬಿ, ಜಿಲ್ಲಾ ಪೊಲೀಸ್ ಅಧೀಕ್ಷಕ ಬಿ ಎಸ್ ನೇಮಗೌಡ, ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ, ಎಲ್ ಡಿ ಚಂದಾವರಿ ಇದ್ದರು.