ಗದಗ ಜಿಲ್ಲೆಯಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ 2023-24ನೇ ಸಾಲಿಗೆ ಅಲ್ಪಸಂಖ್ಯಾತರ ಕಾನೂನು ಪದವೀಧರರಿಗೆ ತರಬೇತಿಗೆ ಆಯ್ಕೆ ಮಾಡಬೇಕಾಗಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತ ಹಾಗೂ ಅರ್ಹ ಅಲ್ಪಸಂಖ್ಯಾತರ (ಮುಸ್ಲಿಂ, ಜೈನ್, ಕ್ರಿಶ್ಚಿಯನ್, ಸಿಖ್, ಬೌದ್ಧ, ಪರ್ಶಿಯನ್) ಕಾನೂನು ಪದವೀಧರರು ಭರ್ತಿ ಮಾಡಿದ ಅರ್ಜಿಗಳನ್ನು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಗದಗ ಜಿಲ್ಲಾ ಕಚೇರಿಗೆ ನವೆಂಬರ್ 16ರ ಸಾಯಂಕಾಲ 5.30ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಇಲಾಖೆ ತಿಳಿಸಿದೆ.
ಗದಗ ಜಿಲ್ಲೆಯಲ್ಲಿಯೇ ತರಬೇತಿ ನೀಡಲಾಗುವುದು. ಅಭ್ಯರ್ಥಿಗಳು ಗದಗ ಜಿಲ್ಲೆಯವರಾಗಿರಬೇಕು. ಕಾನೂನು ತರಬೇತಿ ಪಡೆಯುವ ಅಭ್ಯರ್ಥಿಯು ಅಲ್ಪಸಂಖ್ಯಾತರ ಸಮುದಾಯದವರಾಗಿರಬೇಕು. ಅಭ್ಯರ್ಥಿಯ ಕುಟುಂಬದ ವಾರ್ಷಿಕ ಆದಾಯ 3.50 ಲಕ್ಷ ರೂಪಾಯಿ ಒಳಗಿರಬೇಕು. ತರಬೇತಿ ಅವಧಿ 4 ವರ್ಷಗಳಾಗಿದ್ದು, ಆಯ್ಕೆಗೊಂಡ ಅಭ್ಯರ್ಥಿಗಳಿಗೆ ತರಬೇತಿ ಅವಧಿಯಲ್ಲಿ ಮಾಹೆಗೆ 5,000 ರೂ. ತರಬೇತಿ ಭತ್ಯೆ ನೀಡಲಾಗುವುದು. ಅಭ್ಯರ್ಥಿಗಳನ್ನು ಜಿಲ್ಲಾ ಮಟ್ಟದಲ್ಲಿ ಆಯ್ಕೆ ಸಮಿತಿಯಿಂದ ಸಂದರ್ಶನದ ಮೂಲಕ ಆಯ್ಕೆ ಮಾಡುವುದಾಗಿ ತಿಳಿಸಿದೆ.
ಈ ಸುದ್ದಿ ಓದಿದ್ದೀರಾ? ತುಮಕೂರು | ವಸತಿ ಸಮುಚ್ಛಯದಲ್ಲಿ ಅಮಾನಿಕೆರೆ ಕೋಡಿಹಳ್ಳ ನಿವಾಸಿಗಳಿಗೆ ಆದ್ಯತೆ ನೀಡಿ: ನರಸಿಂಹಮೂರ್ತಿ
ಅಭ್ಯರ್ಥಿಗಳು ಅರ್ಜಿಯ ಜೊತೆಗೆ ಅವರ ವಯಸ್ಸನ್ನು ದೃಢೀಕರಿಸುವ ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ ಅಥವಾ ಶಾಲಾ ಪ್ರಮಾಣ ಪತ್ರ, ಪದವಿ ಹಾಗೂ ಕಾನೂನು ಪದವಿಯಲ್ಲಿ ಪಡೆದ ಅಂಕಪಟ್ಟಿ ಪ್ರಮಾಣ ಪತ್ರದ ದೃಢೀಕರಣ ಪ್ರತಿಗಳನ್ನು ಲಗತ್ತಿಸಬೇಕು. ಅಭ್ಯರ್ಥಿಯ ವಯಸ್ಸು ಅರ್ಜಿ ಸ್ವೀಕರಿಸುವ ಕೊನೆಯ ದಿನಾಂಕಕ್ಕೆ 30 ವರ್ಷಗಳಿಗೆ ಮೀರಿರಬಾರದು. ಅಭ್ಯರ್ಥಿಯು ಬಾರ್ ಕೌನ್ಸಿಲ್‌ನಲ್ಲಿ ತಮ್ಮ ಹೆಸರನ್ನು ನೋಂದಾಯಿಸರಬೇಕು ಹಾಗೂ ತರಬೇತಿಗೆ ಅರ್ಜಿಯನ್ನು ಸಲ್ಲಿಸಲು ನಿಗದಿಪಡಿಸಿರುವ ಕೊನೆಯ ದಿನಾಂಕಕ್ಕೆ ಹಿಂದೆ 2 ವರ್ಷಗಳೊಳಗಾಗಿ ಕಾನೂನು ಪದವಿಯಲ್ಲಿ ಉತ್ತೀರ್ಣರಾಗಿರಬೇಕು.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಕಚೇರಿ, ಜಿಲ್ಲಾ ನ್ಯಾಯಾಲಯದ ಎದುರು, ಹುಬ್ಬಳ್ಳಿ ರಸ್ತೆ, ಗದಗ ಇಲ್ಲಿ ಸಂಪರ್ಕಿಸಬಹುದಾಗಿದೆ.