ಗದಗ ಜಿಲ್ಲೆಯ ಗಜೇಂದ್ರಗಡದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ.5ಕ್ಕೆ ರೋಣ ಬಿಇಒ ಆರ್.ಎನ್ ಹುರಳಿ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಶಾಲೆಯಲ್ಲಿನ ಸಮಸ್ಯೆಗಳನ್ನು ಪರಿಹರಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.
ಶಾಲೆಯ ಆವರಣವು ಅವ್ಯವಸ್ಥಿತವಾಗಿದೆ ಎಂದು ಡಿವೈಎಫ್‌ಐ ಮುಖಂಡ ದಾವಲಸಾಬ ತಾಳಿಕೋಟಿ ಅವರು ದೂರು ನೀಡಿದ್ದರು. ದೂರು ಸ್ವೀಕರಿಸಿದ ಬಿಇಒ ಶಾಲೆಗೆ ಭೇಟಿ ನೀಡಿದ್ದಾರೆ.
ಶಾಲೆಯಲ್ಲಿ ಸಭೆ ನಡೆಸಿದ ಅವರು, “ಶಾಲೆಯಲ್ಲಿನ ಕೆಲ ಶಿಕ್ಷಕಿಯರ ವರ್ಗಾವಣೆಗೆ ಮನವಿ ಬಂದಿದೆ. ಅದನ್ನು ಪರಿಶೀಲನೆ ನಡೆಸಿ, ಮುಂದಿನ ಕ್ರಮ ಕೈಗೊಳ್ಳುತ್ತೇವೆ. ಅವ್ಯವಸ್ಥಿತೆಯನ್ನು ನಿರ್ವಹಿಸಿ, ಶೀಘ್ರದಲ್ಲಿಯೇ ಶಾಲೆಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುತ್ತೇವೆ” ಎಂದು ಹೇಳಿದ್ದಾರೆ.
ಸಭೆಯಲ್ಲಿ ಮಾತನಾಡಿದ ದಾವಲಸಾಬ ತಾಳಿಕೋಟಿ, “ಶಾಲೆಯಲ್ಲಿನ ಕೆಲ ಶಿಕ್ಷಕಿಯರು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡದೆ, ಶಾಲಾ ಅವಧಿಯಲ್ಲಿ ಮೊಬೈಲ್ ಬಳಕೆ ಮಾಡುತ್ತಿದ್ದಾರೆ. ಅಂತಹವರನ್ನು ವರ್ಗಾವಣೆ ಮಾಡಬೇಕು. ಶಾಲೆಗೆ ಬೇಕಾದ ಮೂಲ ಸೌಕರ್ಯಗಳನ್ನು ಒದಗಿಸಬೇಕು” ಎಂದು ಮನವಿ ಮಾಡಿದ್ದಾರೆ.