“ಗೃಹ ಸಚಿವ ಜಿ ಪರಮೇಶ್ವರ್ ಅವರ ಶೈಕ್ಷಣಿಕ ಶಿಕ್ಷಣ ಸಂಸ್ಥೆಗಳ ಮೇಲೆ ಕೇಂದ್ರ ಸರ್ಕಾರ ರಾಜಕೀಯ ಪ್ರೇರಿತ ಇಡಿ ದಾಳಿ ನಡೆಸಿರುವುದು ಖಂಡನೀಯ” ಎಂದು ಕೆಪಿಸಿಸಿ ಸದಸ್ಯರು ಗದಗ್ ಜಿಲ್ಲಾ ಪರಿಶಿಷ್ಟ ಜಾತಿ ಕಾಂಗ್ರೆಸ್ ವಿಭಾಗ ಮಾಧ್ಯಮ ವಕ್ತಾರ ಸಂಜಯ್ ದೊಡ್ಡಮನಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗದಗ ಜಿಲ್ಲೆಯ ರೋಣ ಪಟ್ಟಣದ ಪತ್ರಿಕಾ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, “ಜಿ ಪರಮೇಶ್ವರ್ ಅವರ ರಾಜಕೀಯ ಉನ್ನತಿ ಸಹಿಸದ ಕೇಂದ್ರ ಸರ್ಕಾರ ಶೈಕ್ಷಣಿಕ ಶಿಕ್ಷಣ ಸಂಸ್ಥೆಗಳ ಮೇಲೆ ರಾಜಕೀಯ ದುರುದ್ದೇಶದಿಂದ ಅನಗತ್ಯವಾಗಿ ಇಡಿ ದಾಳಿಯನ್ನು ನಡೆಸಿದ್ದು, ಕೇಂದ್ರ ಸರ್ಕಾರ ಜಾರಿ ನಿರ್ದೇಶನಾಲಯವನ್ನು ದುರುಪಯೋಗ ಪಡೆಸಿಕೊಳ್ಳುತ್ತಿದೆ” ಎಂದು ದೂರಿದರು.
“ಕಳೆದ 50 ವರ್ಷಗಳಿಂದ ವಿದ್ಯಾರ್ಥಿ ವಸತಿ ನಿಲಯ, ಮೆಡಿಕಲ್, ಇಂಜಿನಿಯರಿಂಗ್, ಡೆಂಟಲ್ ನರ್ಸಿಂಗ್, ಪಾಲಿಟೆಕ್ನಿಕ್ ಕಾಲೇಜ್ ಪ್ರಾರಂಭಿಸಿ ಲಕ್ಷಾಂತರ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣಕ್ಕಾಗಿ ಶ್ರಮಿಸಿದ್ದಾರೆ. ಅನೇಕ ಬಡ ವಿದ್ಯಾರ್ಥಿಗಳ ಜೀವನಕ್ಕೂ ಭದ್ರಬುನಾದಿಯನ್ನು ಹಾಕಿದ್ದಾರೆ. ಇದೆಲ್ಲ ಕೇಂದ್ರ ಸರ್ಕಾರಕ್ಕೆ ಗೊತ್ತಿದ್ದರೂ ದುರುದ್ದೇಶದ ದಾಳಿಯನ್ನು ನಡೆಸಿದೆ. ಇದು ಅತ್ಯಂತ ಖಂಡನೀಯ” ಎಂದು ಹೇಳಿದರು.
“ಈಗಾಗಲೇ ಸುಪ್ರೀಂ ಕೋರ್ಟ್ ಕೂಡ ಜಾರಿ ನಿರ್ದೇಶನಾಲಯ ಮಿತಿಮೀರಿ ನಡೆದುಕೊಳ್ಳುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದೆ. ಜಾರಿ ನಿರ್ದೇಶನಾಲಯವು ಕೇಂದ್ರ ಸರ್ಕಾರದ ಕೈಗೊಂಬೆಯಾಗಿದೆ ಎಂಬುದು ಸ್ಪಷ್ಟಪಡಿಸುತ್ತಿದೆ. ಜಿ ಪರಮೇಶ್ವರ್ ಅವರು ರಾಜ್ಯದ ದಲಿತ ಸಮುದಾಯದ ಪ್ರಭಾವಿ ನಾಯಕರು ಸಿಎಂ ರೇಸನಲ್ಲಿರುವ ಪ್ರಮುಖರಾಗಿದ್ದಾರೆ. ಆದ್ದರಿಂದ ಅವರ ಒಡೆತನದ ಶೈಕ್ಷಣಿಕ ಸಂಸ್ಥೆಗಳ ಮೇಲೆ ದಾಳಿ ನಡೆಸಲಾಗುತ್ತಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಹಾವೇರಿ | ಮೇ 26ರಿಂದ 28ರವಗೆ ಬೆಂಗಳೂರಿನಲ್ಲಿ ಧರಣಿ ಸತ್ಯಾಗ್ರಹ
“ಜಿ ಪರಮೇಶ್ವರ್ ಅವರು ದಲಿತ ಎಂಬ ಕಾರಣಕ್ಕೆ ಈ ದಾಳಿ ನಡೆದಿದ್ದು, ಅವರನ್ನು ರಾಜಕೀಯವಾಗಿ ಮುಂದುವರೆಯಬಾರದೆಂಬ ದುರುದ್ದೇಶದಿಂದ ಕೇಂದ್ರ ಸರ್ಕಾರ ಕುತಂತ್ರದ ರಾಜಕಾರಣ ಮಾಡುತ್ತಿದೆ’ ಎಂದು ಮಾನ್ಯ ಮುಖ್ಯಮಂತ್ರಿಗಳು ಸಿದ್ದರಾಮಯ್ಯನವರು ಹೇಳಿದ್ದು’ ಜಿ ಪರಮೇಶ್ವರ್ ಅವರ ಬೆನ್ನಿಗೆ ನಿಂತಿದ್ದಾರೆ. ಕೂಡಲೇ ಈ ಅಕ್ರಮ ದಾಳಿಯನ್ನು ನಿಲ್ಲಿಸಬೇಕು. ಇಲ್ಲದಿದ್ದರೆ ಕೇಂದ್ರ ಸರ್ಕಾರದ ವಿರುದ್ಧ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವದಾಗಿ ಸಂಜಯ್ ದೊಡ್ಡಮನಿ ಎಚ್ಚರಿಸಿದ್ದಾರೆ.
