ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದಲ್ಲಿ ವಿದ್ಯುತ್ ಸ್ಪರ್ಶದಿಂದ ಮೃತಪಟ್ಟ ಬಾಲಕನ ಮನೆಗೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶೇಖರಗೌಡ ರಾಮತ್ನಾಳ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ರಾಧಾ ಮಣ್ಣೂರ ಹಾಗೂ ಸಿಬ್ಬಂದಿ ಭೇಟಿ ನೀಡಿ ಸಾಂತ್ವಾನ ಹೇಳಿದರು.
ಜೂನ್ 13 ರಂದು ಸಂಜೆ 6.45 ಸುಮಾರಿಗೆ ಗಜೇಂದ್ರಗಡದ ನಿವಾಸಿ ರಾಮು ಕಲಾಲ ಮತ್ತು ಜಯಶ್ರೀ ದಂಪತಿಯ 12 ವರ್ಷದ ಪುತ್ರ ಕುಮಾರ ಪಂಕಜ ರಾಮು ಕಲಾಲ ಎಂಬ ಬಾಲಕ ಆಟವಾಡುವ ಸಮಯದಲ್ಲಿ ವಿದ್ಯುತ್ ಕಂಬಕ್ಕೆ ಸ್ಪರ್ಶಿಸಿ ಮೃತಪಟ್ಟಿದ್ದ.
ತಾಲೂಕು ಆಡಳಿತ, ಹೆಸ್ಕಾಂ, ಶಿಕ್ಷಣ ಇಲಾಖೆ, ಪುರಸಭೆ, ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆಯ ಎಲ್ಲ ಅಧಿಕಾರಿಗಳನ್ನು ಬಾಲಕನ ಮನೆಗೆ ಕರೆಯಿಸಿ ಕುಟುಂಬದ ಸದಸ್ಯರೊಂದಿಗೆ ಮಾತನಾಡಿಸಿ ಎಲ್ಲ ಇಲಾಖೆಗಳಿಂದ ಬರುವ ಸಹಾಯ ಧನದ ಬಗ್ಗೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿ ದಾಖಲಾತಿಗಳನ್ನು ಸಂಗ್ರಹಿಸಿ ಸೂಕ್ತ ಕ್ರಮಕೈಗೊಳ್ಳುವಂತೆ ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಗದಗ | ಸಮೀರ, ನಬಿಸಾಬ ಕುಟುಂಬಕ್ಕೂ ಪರಿಹಾರ ನೀಡಿ: ಸಾಹಿತಿ ಬಸವರಾಜ್ ಸೂಳಿಬಾವಿ
ಗಜೇಂದ್ರಗಡ ತಾಲೂಕ ತಹಶೀಲ್ದಾರ ಕಾರ್ಯಾಲಯದಲ್ಲಿ ತುರ್ತು ಪರಮಾರ್ಶನಾ ಸಭೆ ಆಯೋಜಿಸಿ ಎಲ್ಲ ಇಲಾಖೆಯ ಅಧಿಕಾರಿಗಳಿಗೆ ಮಕ್ಕಳ ರಕ್ಷಣಾ ಆಯೋಗದ ಕಾರ್ಯಚಟುವಟಿಕೆಗಳ ಬಗ್ಗೆ ಮತ್ತು ಶಾಲೆಯಿಂದ ಹೊರಗುಳಿದ ಮಕ್ಕಳು, ಬಾಲಕಾರ್ಮಿಕ ಮಕ್ಕಳು, ಬಾಲ್ಯ ವಿವಾಹದಿಂದ ರಕ್ಷಣೆಗೊಳಗಾದ ಮಕ್ಕಳಿಗೆ ಪುನರ್ವಸತಿಗೆ ಕ್ರಮ ಕೈಗೊಳ್ಳಲು ಸೂಚಿಸಿದರು.
ಗಜೇಂದ್ರಗಡ ಪುರಸಭೆ ಮುಖ್ಯಾಧಿಕಾರಿ ರೇಣುಕಾ ದೇಸಾಯಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಬಿ ಎಂ ಮಾಳೆಕೊಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಮ್ಯಾಕಲ್ ಸೇರಿದಂತೆ ಸಂಬಂಧಿತ ನಾನಾ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.