ಕೇಂದ್ರ ಸರ್ಕಾರದ ರೈತ ವಿರೋಧಿ ನೀತಿಯಿಂದ ಕಬ್ಬು ಬೆಳೆಗಾರರಿಗೆ ವರ್ಷಕ್ಕೆ ₹4,000 ಕೋಟಿ ವೆಚ್ಚವಾಗುತ್ತಿದೆ. ಈ ದೇಶದ ಬಂಡವಾಳ ಶಾಹಿಗಳು ಬೆಲೆ ನಿಗದಿಪಡಿಸುತ್ತಾರೆ. ಆದರೆ ರೈತರು ಬೆಳೆದ ಬೆಳೆಗೆ ನಿಜವಾದ ಬೆಲೆ ಸಿಗಬೇಕಾದರೆ ಸಂಘಟಿತರಾಗಿ ಸರ್ಕಾರದ ಈ ನೀತಿಯ ವಿರುದ್ದ ಬೀದಿಗಿಳಿಯಬೇಕು ಎಂದು ಹಿರಿಯ ರೈತ ಮುಖಂಡ ಬಿ ಎಸ್ ಸೊಪ್ಪಿನ ಕೂಡ್ಲೇಪ್ಪ ಗುಡಿಮನಿ ಹೇಳಿದರು.
ಕರ್ನಾಟಕ ಪ್ರಾಂತ ರೈತ ಸಂಘ ತಾಲೂಕು ಘಟಕದ ನೇತೃತ್ವದಲ್ಲಿ ಗದಗ ಜಿಲ್ಲೆ ಗಜೇಂದ್ರಗಡ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ 43ನೇ ರೈತ ಹುತಾತ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
“ದೊಡ್ಡದೊಡ್ಡ ಕಂಪನಿಗಳ ಮಾಲೀಕರ ಲಕ್ಷಗಟ್ಟಲೆ ಸಾಲವನ್ನು ಮನ್ನಾ ಮಾಡಿದ್ದಾರೆ. ಆದರೆ ರೈತರ ಸಾಲವನ್ನು ಮನ್ನಾ ಮಾಡಲು ಇವರಿಂದ ಸಾಧ್ಯವಾಗಿಲ್ಲ. ಹಾಗಾದ್ರೆ ಇವರು ಯಾರ ಪರವಾಗಿ ಕೆಲಸ ಮಾಡುತ್ತಿದ್ದಾರೆ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕಿದೆ. ಕೇರಳದ ಎಡ ಸರ್ಕಾರ ನಿಜವಾಗಿಯೂ ರೈತರ ಹಿತಾಸಕ್ತಿ ಕಾಪಾಡುವಲ್ಲಿ ಸದಾ ಮುಂದಿದೆ. ನಮ್ಮ ಸರ್ಕಾರಗಳು ರೈತರ ಹಿತಾಸಕ್ತಿ ಕಾಪಾಡುವಲ್ಲಿ ಹಿಂದೆಮುಂದೆ ನೋಡುತ್ತಾರೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
“ದುಡಿಯುವ ಜನರ ಮೇಲೆಯೂ 4 ಬಿಲ್‌ಗಳನ್ನು ಪಾಸ್ ಮಾಡುವ ಮೂಲಕ ಕಾರ್ಮಿಕ ವಿರೋಧಿ ನೀತಿ, ಹಿಗೇ ಒಂದಲ್ಲಾ ಒಂದು ಸಮುದಾಯದ ಮೇಲೆ ಪ್ರಭುತ್ವ ತನ್ನ ಸರ್ವಾಧಿಕಾರಿ ಧೋರಣೆಯನ್ನು ಮಾಡುತ್ತಲೇ ಬಂದಿದೆ” ಎಂದು ಕೂಡ್ಲೇಪ್ಪ ಗುಡಿಮನಿ ಆಕ್ರೋಶ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಮೈಸೂರು | ಹಿರಿಯ ರೈತರಿಗೆ ಪಿಂಚಣಿ, ಸರ್ಕಾರಿ ಶಾಲಾ ಮಕ್ಕಳಿಗೆ ಕೃಪಾಂಕ ನೀಡಿ: ಶಾಸಕ ಬಿ ಆರ್ ಪಾಟೀಲ್
ಜಿಲ್ಲಾ ಸಂಚಾಲಕ ಎಂ ಎಸ್ ಹಡಪದ ಪ್ರಾಸ್ತಾವಿಕವಾಗಿ ಮಾತುನಾಡಿದರು. ನರಗುಂದ ನವಲಗುಂದ ರೈತ ಬಂಡಾಯದ ರುವಾರಿ ಬಿ ಎಸ್ ಸೊಪ್ಪಿನ ಅವರು ವಿಶೇಷ ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಜಿ. ನಾಗರಾಜ, ರವೀಂದ್ರ, ಹೊನವಾಡ ಮಹೇಶ ಪತ್ತಾರ, ಶರಣು ಪೂಜಾರ, ಬಸವರಾಜ ಮಂತೂರ, ಫಯಾಜ್ ತೋಟದ, ಮಹೇಶ ಹಿರೇಮಠ, ಬಾಲು ರಾಠೋಡ, ಪೀರು ರಾಠೋಡ, ಮೇಘರಾಜ ಬಾವಿ ಸೇರಿದಂತೆ ರೈತರು, ಕಾರ್ಮಿಕರು ಇದ್ದರು.