- ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ
- ಬಾಲಕಾರ್ಮಿಕ ಪದ್ಧತಿ ಸಮಾಜಕ್ಕೆ ಅಂಟಿಕೊಂಡಿರುವ ಪಿಡುಗು
ಸಾಮಾಜಿಕ ಪಿಡುಗು ಆಗಿರುವ ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಗಮನ ನೀಡುವದರ ಜೊತೆಗೆ ಬಾಲಕಾರ್ಮಿಕ ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ದೊರಕಿಸುವ ಕಾರ್ಯವಾಗಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಅಧ್ಯಕ್ಷ ಬಸವಾರಾಜ ಅವರು ಹೇಳಿದರು.
ಗದಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ,ಕಾರ್ಮಿಕ ಇಲಾಖೆ, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಶಿಕ್ಷಣ ಇಲಾಖೆ ಇವರುಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
“ಬಾಲ ಕಾರ್ಮಿಕ ಪದ್ಧತಿಯು ಪ್ರಪಂಚದ ಕೆಲವು ಭಾಗಗಳಲ್ಲಿ ಇಂದಿಗೂ ಸಾಮಾನ್ಯವಾಗಿದೆ. ಮೊದಲು 14 ವರ್ಷದ ಮಕ್ಕಳನ್ನು ಬಾಲ ಕಾರ್ಮಿಕರು ಎಂದು ಕರೆಯುತ್ತಿದ್ದರು 1986ರಲ್ಲಿ ಬಾಲಾ ಕಾರ್ಮಿಕ ಪದ್ಧತಿ ವಿರೋಧ ದಿನ ಜಾರಿಗೆ ಬಂದಿದ್ದು, 2002ರಲ್ಲಿ ಈ ಪದ್ಧತಿಯ ತಿದ್ದುಪಡಿಯಾದ ಬಳಿಕ 18 ವರ್ಷದ ಒಳಗಿನ ಮಕ್ಕಳು ತಮ್ಮ ಸ್ವಂತ ವ್ಯವಹಾರ ಹಾಗೂ ಇತರೆ ಕೂಲಿ ಚಟುವಟಿಕೆಗಳಲ್ಲಿ ತೊಡಗಿದರೆ ಅಂತಹ ಮಕ್ಕಳು ಬಾಲಕಾರ್ಮಿಕರಾಗಿರುತ್ತಾರೆ” ಎಂದರು.
“ಕಾರ್ಖಾನೆ ಕೆಲಸ, ಗಣಿಗಾರಿಕೆ, ಕಲ್ಲು ಒಡೆಯುವ ಕೆಲಸ, ಕೃಷಿ-ಬೇಸಾಯ, ವ್ಯವಹಾರಗಳಲ್ಲಿ ಪೋಷಕರಿಗೆ ಸಹಾಯ ಮಾಡುವುದು, ತಮ್ಮದೇ ಸ್ವಂತ ಸಣ್ಣ ವ್ಯವಹಾರವನ್ನು ಹೊಂದಿದ್ದಾರೆ. ಎಲ್ಲಿಯವರೆಗೆ ಕುಟುಂಬದಲ್ಲಿ ಬಡತನವಿರುತ್ತದೋ ಅಲ್ಲಿಯವರೆಗೂ ಬಾಲಕಾರ್ಮಿಕ ಪದ್ದತಿ ಇರುತ್ತದೆ. ಬಾಲಕಾರ್ಮಿಕರಿಗೆ ಉತ್ತಮ ಶಿಕ್ಷಣವನ್ನು ನೀಡಬೇಕು. ಎಲ್ಲ ಇಲಾಖೆಯವರು ಒಗ್ಗೂಡಿ ಈ ಪದ್ಧತಿಯನ್ನು ನಿರ್ಮೂಲನೆ ಮಾಡಬೇಕು” ಎಂದು ಹೇಳಿದರು.
ಹಲವು ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡು ಹದಿನೆಂಟು ವರ್ಷದ ಒಳಗಿನ ಮಕ್ಕಳಿಗೆ ಎಲ್ಲ ರೀತಿಯ ಸೌಲಭ್ಯಗಳನ್ನು ತಲುಪಿಸುವ ಕಾರ್ಯದಲ್ಲಿ ಕೈಜೋಡಿಸಬೇಕು. ಆಗ ಮಾತ್ರ ಬಾಲ ಕಾರ್ಮಿಕ ಪದ್ಧತಿ, ಮಕ್ಕಳ ಸಾಗಾಣಿಕೆ, ಬಾಲ್ಯ ವಿವಾಹ, ಮಕ್ಕಳ ಮಾರಾಟ ಇವೆಲ್ಲವನ್ನೂ ತಕ್ಕ ಮಟ್ಟಿಗೆ ತಡೆಯಬಹುದು” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಅಲ್ಪಸಂಖ್ಯಾತ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು; ಅಧಿಕಾರಿಗಳಿಗೆ ಸಚಿವ ಜಮೀರ್ ಸೂಚನೆ
“18 ವರ್ಷದ ಒಳಗಿನ ಹದಿಹರೆಯದ ಮಕ್ಕಳು ಕೆಲಸದಲ್ಲಿ ತೊಡಗಿದ್ದರೆ ಅದು ಬಾಲ ಕಾರ್ಮಿಕ ಪದ್ಧತಿಯಾಗುತ್ತದೆ. ಹಾಗಾಗಿ ಈ ಪದ್ಧತಿಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ ಮಕ್ಕಳನ್ನು ಶಾಲೆಗೆ ಕಳುಹಿಸುವ ಉದ್ಧೇಶದಿಂದ ಈ ಒಂದು ದಿನದ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ” ಎಂದು ಜಿಲ್ಲಾ ಕಾರ್ಮಿಕ ಇಲಾಖೆ ಅಧಿಕಾರಿ ಭೀಮರಾವ್ ಆರ್ ಜಾಧವ ತಿಳಿಸಿದರು.
ಮಕ್ಕಳ ರಕ್ಷಣಾ ಅಧಿಕಾರಿ ರಾಧಾ ಮಣ್ಣೂರ, ಕಾರ್ಮಿಕ ಇಲಾಖೆ ನಿರೀಕ್ಷಕ ಉಮೇಶ ಎಸ್. ಹುಲ್ಲಣ್ಣವರ, ಮಧುಸೂದನ, ನಿವೃತ್ತ ಕಾರ್ಮಿಕ ಅಧಿಕಾರಿ ಚಂದ್ರಶೇಖರ ಐಲಿ, ಸಮಾಜ ಕಲ್ಯಾಣ ಇಲಾಖೆ ವಿಜಯಲಕ್ಷ್ಮಿ, ಜಿಲ್ಲಾ ಬಾಲಕಾರ್ಮಿಕ ನಿರ್ಮೂಲನಾ ಸೊಸೈಟಿ ಯೋಜನಾ ನಿರ್ದೇಶಕ ಸಂದೇಶ ಚ. ಪಾಟೀಲ, ಜಯಶ್ರೀ ಸೇರಿದಂತೆ ಇತರರು ಇದ್ದರು.