ಐದು ವರ್ಷದೊಳಗಿನ ಮಕ್ಕಳಿಗೆ ಮಾರ್ಚ್ 03ರಂದು ಬೂತ್ ಮಟ್ಟದಲ್ಲಿ ಪೋಲಿಯೋ ಲಸಿಕೆ ಹಾಕಲಾಗುವುದು ಹಾಗೂ ಮಾರ್ಚ್ 4 ರಿಂದ 6ರವರೆಗೆ ಮೂರು ದಿನಗಳ ಕಾಲ ಮನೆ-ಮನೆಗೆ ಭೇಟಿ ನೀಡಿ ಪೋಲಿಯೋ ಲಸಿಕೆ ಹಾಕಲಾಗುತ್ತಿದ್ದು, ಲಸಿಕೆ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಗದಗ ಜಿಲ್ಲಾಧಿಕಾರಿ ವೈಶಾಲಿ ಎಂ ಎಲ್ ತಿಳಿಸಿದರು.
ಗದಗ ನಗರದ ಜಿಲ್ಲಾಧಿಕಾರಿ ಕಾರ್ಯಾಲಯದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಪಲ್ಸ್ ಪೋಲಿಯೋ ಅನುಷ್ಠಾನ ಕುರಿತು ಟಾಸ್ಕ್ ಫೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
“ಶಾಲಾ ಮಕ್ಕಳಿಗೆ ಪಲ್ಸ್ ಪೊಲಿಯೋ ಕಾರ್ಯಕ್ರಮದ ಕುರಿತು ಪ್ರಭಾತ ಪೇರಿ ಕೈಗೊಳ್ಳಬೇಕು. ಪಲ್ಸ್ ಪೋಲಿಯೋ ಬೂತ್‌ಗಳಿಗಳಿರುವ ಅಂಗನವಾಡಿ ಕೇಂದ್ರಗಳನ್ನು ಪೋಲಿಯೋ ಬ್ಯಾನರ್‌ಗಳಿಂದ ಸಿಂಗರಿಸಿ ಪಲ್ಸ್ ಪೋಲಿಯೋ 4 ದಿನದ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು. ಕಟ್ಟಡ ನಿರ್ಮಾಣಕ್ಕೆ ಬಂದಂತಹ ಕಾರ್ಮಿಕರಿಗೆ ಪೋಲಿಯೋ ಕಾರ್ಯಕ್ರಮದ ಜಾಗೃತಿ ಮೂಡಿಸಬೇಕು. ಪಲ್ಸ್ ಪೋಲಿಯೋ ಕಾರ್ಯಕ್ರಮಕ್ಕೆ ಅವಶ್ಯವಿರುವ ಐಸ್ ಪ್ಯಾಕ್ ತಯಾರಿಸಲು ಮೂರು ದಿನಗಳ ಮೊದಲು ನಿರಂತರ ವಿದ್ಯುತ್ ಸರಬರಾಜು ಇರುವಂತೆ ನೋಡಿಕೊಳ್ಳಬೇಕು” ಎಂದರು.
ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ ಮೀನಾಕ್ಷಿ ಕೆ ಎಸ್ ಮಾತನಾಡಿ, “ಪಲ್ಸ್ ಪೋಲಿಯೋ ಕಾರ್ಯಕ್ರಮದಲ್ಲಿ ಈ ಸುತ್ತಿನಲ್ಲಿ 1,29,327 ಮಕ್ಕಳಿಗೆ ಲಸಿಕೆ ಗುರಿ ಹೊಂದಲಾಗಿದೆ. ಮಾರ್ಚ್ 3ರಂದು ಬೂತ್ ಮಟ್ಟದಲ್ಲಿ ಐದು ವರ್ಷದೊಳಗಿನ ಎಲ್ಲ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಲಾಗುವುದು. ಮಾರ್ಚ್ 4 ರಿಂದ 6 ರವರೆಗೆ ಮೂರು ದಿನಗಳ ಕಾಲ ಲಸಿಕಾ ತಂಡದವರು ಮನೆ-ಮನೆಗೆ ಭೇಟಿ ನೀಡಿ ಲಸಿಕಾ ಕೇಂದ್ರಕ್ಕೆ ಬರದೇ ಉಳಿದಂತ ಮಕ್ಕಳನ್ನು ಹುಡುಕಿ ಅಂಥ ಮಕ್ಕಳಿಗೆ ಲಸಿಕೆ ನೀಡಿ ಆ ಮನೆಗಳಿಗೆ “ಪಿ” ಮಾರ್ಕ್ ಗುರುತನ್ನು ಹಾಕುವರು” ಎಂದು ತಿಳಿಸಿದರು.
“ಗ್ರಾಮೀಣ ಭಾಗದಲ್ಲಿ 470 ಲಸಿಕಾ ಕೇಂದ್ರಗಳನ್ನು ಹಾಗೂ ನಗರ ಪ್ರದೇಶಗಳಲ್ಲಿ 235 ಲಸಿಕಾ ಕೇಂದ್ರಗಳನ್ನು ತೆರೆಯಲಾಗಿದೆ. ಈ ಕೆಲಸಕ್ಕೆ ಒಟ್ಟು 1,410 ಜನ ಸಿಬ್ಬಂದಿಯವರನ್ನು ಲಸಿಕೆ ಹಾಕುವ ಕೆಲಸಕ್ಕೆ ಒಟ್ಟು 705 ತಂಡಗಳಲ್ಲಿ ನಿಯೋಜನೆ ಮಾಡಲಾಗಿದೆ. ಕಾರ್ಯಕ್ರಮದ ಸಮರ್ಪಕ ಅನುಷ್ಠಾನಕ್ಕಾಗಿ ಮೇಲ್ವಿಚಾರಣೆ ಮಾಡಲು 146 ಮೇಲ್ವಿಚಾರಕರನ್ನು ನೇಮಿಸಲಾಗಿದೆ. ಅದರಂತೆ 30 ಟ್ರಾನ್ಜಿಟ್ ತಂಡಗಳು ಹಾಗೂ 07 ಸಂಚಾರಿ ತಂಡಗಳ ಮೂಲಕ ಪೋಲಿಯೋ ಹನಿ ಹಾಕುವ ವ್ಯವಸ್ಥೆ ಮಾಡಲಾಗಿದೆ” ಎಂದು ಸಭೆಗೆ ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಶಿವಮೊಗ್ಗ | ರೈತರ ಬೇಡಿಕೆ ಈಡೇರಿಸುವಂತೆ ಕರ್ನಾಟಕ ರಾಜ್ಯ ರೈತ ಸಂಘ ಆಗ್ರಹ
ಇದೇ ಸಂದರ್ಭದಲ್ಲಿ ಆರೋಗ್ಯ ಇಲಾಖೆಯ ಪಲ್ಸ್ ಪೋಲಿಯೋ ಕುರಿತು ಭಿತ್ತಿ ಪತ್ರ ಬಿಡುಗಡೆ ಮಾಡಿದರು.
ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಎಸ್ ಎಸ್ ನೀಲಗುಂದ, ಎಸ್‌ಎಂಒ ಡಾ ಮುಕುಂದ ಗಲಗಲಿ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ವಿ ಸಿ ಕರಿಗೌಡ್ರ, ತಾಲೂಕು ವೈದ್ಯಾಧಿಕಾರಿಗಳು, ಜಿಲ್ಲೆಯ ಎಲ್ಲ ಅನುಷ್ಠಾನಾಧಿಕಾರಿಗಳು ಸೇರಿದಂತೆ ಹಲವು ಇಲಾಖೆ ಅಧಿಕಾರಿಗಳು ಇದ್ದರು.