“ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜೂ. 3ರಂದು ಗದಗ ಜಿಲ್ಲೆಗೆ ಆಗಮಿಸಿ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವರು” ಎಂದು ಕಾನೂನು, ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.
ಗದಗ ಪಟ್ಟಣದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು “ಜೂ. 3ರಂದು ಬೆಳಿಗ್ಗೆ 11.40ಕ್ಕೆ ತಾಲೂಕಿನ ಲಕ್ಕುಂಡಿ ಗ್ರಾಮದ ಕೋಟೆ ವೀರಭದ್ರೇಶ್ವರ ದೇವಸ್ಥಾನ ಆವರಣದಲ್ಲಿ ಉತ್ಖನನಕ್ಕೆ ಚಾಲನೆ ನೀಡುವರು. ನಂತರ ಬಯಲು ವಸ್ತು ಸಂಗ್ರಹಾಲಯ ಆವರಣದ ಪ್ರಾಚ್ಯಾವಶೇಷಗಳ ವೀಕ್ಷಣೆ ಮಾಡಿ, ಶ್ರೀ ಕಾಶಿ ವಿಶ್ವನಾಥ ದೇವಸ್ಥಾನಕ್ಕೆ ಭೇಟಿ ನೀಡುವರು” ಎಂದು ಹೇಳಿದರು.
“ಮಧ್ಯಾಹ್ನ 1ಕ್ಕೆ ನಗರದ ಎಪಿಎಂಸಿ ಆವರಣದಲ್ಲಿನ ಸ್ವಾಮಿ ವಿವೇಕಾನಂದ ಭವನದಲ್ಲಿ ದಿ.ಕರ್ನಾಟಕ ಕುರುಬರ ಸಂಘ ಹಾಗೂ ಕರ್ನಾಟಕ ಕುರುಬರ ಸಹಕಾರ ಪತ್ತಿನ ಸಂಘ ಗದಗ ವತಿಯಿಂದ ಆಯೋಜಿಸಿರುವ ಶತಮಾನೋತ್ಸವ ಸಮಾರಂಭದಲ್ಲಿ ಭಾಗವಹಿಸುವರು. ಸಂಜೆ 4.30 ಗಂಟೆಗೆ ಗದಗ ನಗರದ ಪಂಡಿತ ಭೀಮಸೇನ ಜೋಶಿ ರಂಗಮಂದಿರದಲ್ಲಿ ಗದಗ-ಬೆಟಗೇರಿ ವ್ಯಾಪಾರ, ಸಂಸ್ಕೃತಿ ಮತ್ತು ವಸ್ತು ಪ್ರದರ್ಶನ ಪ್ರಾಧಿಕಾರದ ಉದ್ಘಾಟನೆ ಹಾಗೂ 34 ಎಕರೆ ಪ್ರದೇಶದ ಪ್ರಾಧಿಕಾರದ ಪರಿಕಲ್ಪನೆ ಅನಾವರಣ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ಮಾರುತಿ ಮಾನಪಡೆ 70ನೇ ಜನ್ಮದಿನ : ನೋಟ್‌ಬುಕ್, ಪೆನ್ ವಿತರಣೆ
ಲಕ್ಕುಂಡಿ ಗ್ರಾಮಸ್ಥರಿಂದ ಅಗತ್ಯ ಸಹಕಾರ : “ಗ್ರಾಮಸ್ಥರು ಲಕ್ಕುಂಡಿ ಬಗ್ಗೆ ಅಭಿಮಾನ ಹೊಂದಿದ್ದು, ತ್ಯಾಗ ಮಾಡಲು ಕೂಡ ಸಿದ್ಧವಾಗಿದ್ದಾರೆ. ವಿಶೇಷವಾದ ಸಹಕಾರವಿದ್ದು, 27 ಮನೆಯ ಕುಟುಂಬಸ್ಥರು ಸ್ಥಳಾಂತರಗೊಂಡರೆ 5 ದೇವಸ್ಥಾನಗಳ ವೀಕ್ಷಣೆಗೆ ಸುಲಭವಾಗುತ್ತಿರುವುದರಿಂದ 27 ಮನೆಗಳಿಗೆ ಸರಕಾರದಿಂದ ಮನೆ ನಿರ್ಮಾಣ ಮಾಡಿಕೊಡಲು ಸಿದ್ಧವಿರುವುದರಿಂದ 27 ಮನೆಯವರು ಕೂಡ ಮನೆ ಬಿಟ್ಟುಕೊಡಲು ಮುಂದಾಗಿದ್ದಾರೆ” ಎಂದರು.