ಕಾಲೇಜು ವಿದ್ಯಾರ್ಥಿನಿಗೆ ಕಿರುಕುಳ ನೀಡಿದ ಆರೋಪದ ಮೇಲೆ ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ನರೇಗಲ್ ಪೊಲೀಸ್ ಠಾಣೆಯ ಪಿಎಸ್‌ಐ ಮತ್ತು ಒಬ್ಬ ಕಾನ್ಸ್‌ಟೇಬಲ್‌ನನ್ನು ಅಮಾನತು ಮಾಡಲಾಗಿದೆ.
ವಿದ್ಯಾರ್ಥಿನಿಯ ಮೊಬೈಲ್ ನಂಬರ್ ಪಡೆದು ಪಿಎಸ್‌ಐ ಮತ್ತು ಕಾನ್ಸ್‌ಟೇಬಲ್ ಕಾಲ್ ಮಾಡುವುದು, ಅಶ್ಲೀಲವಾಗಿ ಮೆಸೇಜ್ ಮಾಡುತ್ತಿದ್ದರು ಎಂದು ಆರೋಪಿಸಲಾಗಿದೆ. ಆರೋಪಿ ಪೊಲೀಸ್ ಅಧಿಕಾರಿಗಳನ್ನು ಗದಗ ಎಸ್‌ಪಿ ಬಿ.ಎಸ್.ನೇಮಗೌಡ ಅವರು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ಠಾಣೆಯ ಪಿಎಸ್‌ಐ ನಿಖಿಲ್ ಕಾಂಬ್ಳೆ ಮತ್ತು ಕಾನ್ಸ್‌ಟೇಬಲ್ ಶಂಕರ್ ನಾಲಕರ್ ಅಮಾನತುಗೊಂಡಿದ್ದಾರೆ. ಪಿಎಸ್‌ಐ ಮತ್ತು ಕಾನ್ಸ್‌ಟೇಬಲ್ ವಿರುದ್ಧ ತನಿಖೆ ನಡೆಸಲಾಗುತ್ತಿದೆ. ಆರೋಪ ಸಾಬೀತಾದರೆ, ಇಬ್ಬರ ವಿರುದ್ಧವೂ ಕ್ರಮ ಕೈಗೊಳ್ಳಲಾಗುತ್ತದೆ ಎಂಧು ಎಸ್‌ಪಿ ನೇಮಗೌಡ ತಿಳಿಸಿದ್ದಾರೆ.
ಆದರೆ, ತಾವು ವಿದ್ಯಾರ್ಥಿನಿಗೆ ಕಿರುಕುಳ ನೀಡಿಲ್ಲವೆಂದು ಪಿಎಸ್‌ಐ ವಾದಿಸಿದ್ದಾರೆ. ತಮ್ಮ ವಿರುದ್ಧದ ಆರೋಪವನ್ನು ತಳ್ಳಿಹಾಕಿದ್ದಾರೆ. “ನಾವು ವಿದ್ಯಾರ್ಥಿನಿಗೆ ಕರೆ ಮಾಡಿಲ್ಲ. ಮೆಸೇಜ್ ಮಾಡಿಲ್ಲ. ನಮ್ಮ ವಿರುದ್ಧ ಆರೋಪ ಯಾಕೆ ಮಾಡುತ್ತಿದ್ದಾರೆ ಎಂಬುದು ಗೊತ್ತಿಲ್ಲ. ವಿದ್ಯಾರ್ಥಿನಿಯ ಆರೋಪ ಸುಳ್ಳು” ಎಂದು ಪಿಎಸ್‌ಐ ನಿಖಿಲ್ ಕಾಂಬ್ಲೆ ಹೇಳಿದ್ದಾರೆ.
ನರೇಗಲ್‌ನ ವಿದ್ಯಾರ್ಥಿನಿ ಹುಬ್ಬಳ್ಳಿಯ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದು, ಆಕೆ ನರೇಗಲ್‌ನಿಂದ ಹುಬ್ಬಳ್ಳಿಗೆ ಬಸ್‌ನಲ್ಲಿ ತೆರಳುತ್ತಿದ್ದರು. ಪೊಲೀಸ್ ಠಾಣೆಯ ಬಳಿ ಇರುವ ಬಸ್ ನಿಲ್ದಾಣದಲ್ಲಿ ದಿನನಿತ್ಯ ಆಕೆ ಬಸ್ ಹತ್ತುತ್ತಿದ್ದರು. ಈ ವೇಳೆ, “ಪಿಎಸ್‌ಐ ತನ್ನನ್ನು ಚುಡಾಯಿಸುತ್ತಿದ್ದರು. ತನ್ನ ಗೆಳತಿಯಿಂದ ನನ್ನ ಮೊಬೈಲ್ ನಂಬರ್ ಪಡೆದು, ಕಾಲ್ ಮಾಡುತ್ತಿದ್ದರು. ಕಾನ್ಸ್‌ಟೇಬಲ್ ಅಶ್ಲೀಲವಾಗಿ ಮೆಸೇಜ್ ಮಾಡುತ್ತಿದ್ದರು” ಎಂದು ವಿದ್ಯಾರ್ಥಿನಿ ಆರೋಪಿಸಿದ್ದಾರೆ.