ವಿಮೆ ಹಣ ನೀಡಲು ವಿಮಾ ಕಂಪನಿಯವರು ನಿರಾಕರಿಸಿರುವುದರಿಂದ ಅವರ ನಡುವಳಿಕೆ ಗ್ರಾಹಕರ ರಕ್ಷಣಾಕಾಯ್ದೆ ಅಡಿ ಸೇವಾ ನ್ಯೂನ್ಯತೆ ಆಗುತ್ತದೆ ಎಂದಿರುವ ಗದಗ ಜಿಲ್ಲಾ ಗ್ರಾಹಕ ಆಯೋಗವು, ವಿಮಾ ಕಂಪನಿಯೊಂದಕ್ಕೆ ಎರಡು ಲಕ್ಷ ರೂ. ದಂಡ ವಿಧಿಸಿದೆ.
ಗದಗ ಜಿಲ್ಲೆಯ ನರಗುಂದದ ಸುನೀಲ ದೋಂಗಡಿ ಎನ್ನುವವರು ಬೊಲೆರೋ ಪಿಕ್‍ಅಪ್ ವಾಹನಕ್ಕೆ ಹುಬ್ಬಳ್ಳಿಯ ವಿದ್ಯಾನಗರದ ಎಚ್‌ಡಿಎಫ್‌ಸಿ ಇರ್ಗೋ ಜನರಲ್ ಇನ್ಸುರೆನ್ಸ್ ಕಂಪನಿಯಿಂದ ವಿಮೆ ಮಾಡಿಸಿದ್ದರು. ಆ ವಿಮೆ ಚಾಲ್ತಿಯಿರುವಾಗ 2019ಸೆಪ್ಟೆಂಬರ್ 27 ರಂದು ವಾಹನ ನರಗುಂದದ ಹಿರೇಹಳ್ಳ ಹತ್ತಿರ ಅಪಘಾತಕ್ಕೀಡಾಗಿ ಜಖಂಗೊಂಡಿತ್ತು. ಆ ವಾಹನದ ದುರಸ್ತಿಗಾಗಿ 2,04,967 ರೂಪಾಯಿ ತಗಲುತ್ತದೆ ಎಂದು ಅಧಿಕೃತ ಸರ್ವಿಸ್ ಸೆಂಟರ್‌ನಿಂದ ಎಸ್ಟಿಮೇಷನ್ ಪಡೆದು, ಆ ಮೊತ್ತದ ಹಣ ಪರಿಹಾರವಾಗಿ ಕೊಡುವಂತೆ ವಿಮಾ ಕಂಪನಿಯವರಿಗೆ ಎಲ್ಲ ದಾಖಲೆಗಳ ಸಮೇತ ಕೋರಿಕೊಂಡಿದ್ದರು.
ಅಪಘಾತ ಕಾಲಕ್ಕೆ ಆ ವಾಹನಕ್ಕೆ ಫಿಟ್‌ನೆಸ್ ಸರ್ಟಿಫಿಕೇಟ್ ಇಲ್ಲ ಎನ್ನುವ ಕಾರಣ ನೀಡಿ ವಿಮಾ ಕಂಪನಿಯವರು ಸುನೀಲ್ ಅವರ ಕ್ಲೇಮ್ ತಿರಸ್ಕರಿಸಿದ್ದರು. ಅಪಘಾತವಾದ ನಂತರ ಆ ವಾಹನದ ಫಿಟ್‌ನೆಸ್ ಸರ್ಟಿಫಿಕೇಟ್ನ್ನು ಸುನೀಲ್ ನವೀಕರಿಸಿ ಕ್ಲೇಮ್ ಅರ್ಜಿ ಸಲ್ಲಿಸಿದ್ದರೂ ವಿಮಾ ಕಂಪನಿಯವರು ಅವರ ಕ್ಲೇಮನ್ನು ಒಪ್ಪಲಿಲ್ಲ. ಇದರಿಂದಾಗಿ ನೊಂದ ಸುನೀಲ್ ವಿಮಾ ಕಂಪನಿಯವರ ವಿರುದ್ದ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದರು.
ಅಪಘಾತ ಕಾಲಕ್ಕೆ ಆ ವಾಹನಕ್ಕೆ ಅರ್ಹತಾ ಪತ್ರ ಇರಲಿಲ್ಲವಾದ್ದರಿಂದ ದೂರುದಾರ ಕ್ಲೇಮ್ ಪಡೆಯಲು ಅರ್ಹರಲ್ಲ ಎಂದು ಹೇಳಿ ಅವರ ದೂರನ್ನು ವಜಾ ಮಾಡುವಂತೆ ವಿಮಾ ಕಂಪನಿಯವರು ಆಕ್ಷೇಪಣೆ ಎತ್ತಿದ್ದರು.
ದೂರಿನ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಈಶಪ್ಪ ಭೂತೆ, ಸದಸ್ಯರಾದ ವಿಶಾಲಾಕ್ಷಿ ಬೋಳಶೆಟ್ಟಿ ಹಾಗೂ ಪ್ರಭು ಹಿರೇಮಠ ಅವರು ವಾಹನದ ಮೇಲೆ ವಿಮೆ ಚಾಲ್ತಿಯಿದೆ. ಆ ವಾಹನ ಅಪಘಾತದಲ್ಲಿ ಜಖಂಗೊಂಡು ಹುಬ್ಬಳ್ಳಿಯ ಸುತಾರಿಯಾ ಅಟೋ ಸೆಂಟರ್‌ನಲ್ಲಿ ದುರಸ್ತಿಯಾಗಿದೆ. ರಿಪೇರಿ ಮಾಡಿಸಲು ಮಾಲಿಕ ಸುನೀಲ್ 2,04,967 ರೂ ಖರ್ಚು ಮಾಡಿದ್ದಾರೆ. ಅಪಘಾತವಾದ ನಂತರ ದೂರುದಾರ ಗದಗ ಆರ್.ಟಿ.ಓ. ಕಛೇರಿಯಿಂದ ಅರ್ಹತಾ ಪತ್ರ ನವೀಕರಿಸಿರುವುದರಿಂದ ಕರ್ನಾಟಕ ಹೈ ಕೋರ್ಟ್ ತೀರ್ಪಿನನ್ವಯ ಅಪಘಾತ ಕಾಲಕ್ಕೆ ಆ ವಾಹನಕ್ಕೆ ಅರ್ಹತಾ ಪತ್ರ ಇತ್ತು ಎಂದು ಪರಿಗಣಿಸಬೇಕಾಗುತ್ತದೆ.
ಕಾರಣ ವಿಮಾ ಷರತ್ತಿನ ನಿಯಮದಂತೆ ವಾಹನ ದುರಸ್ತಿಗೆ ತಗುಲಿದ ವೆಚ್ಚವನ್ನು ಕೊಡುವುದು ವಿಮಾ ಕಂಪನಿಯವರ ಕರ್ತವ್ಯವಾಗಿದೆ. ಆ ರೀತಿ ವಿಮೆ ಹಣ ನೀಡಲು ವಿಮಾ ಕಂಪನಿಯವರು ನಿರಾಕರಿಸಿರುವುದರಿಂದ ಅವರ ನಡುವಳಿಕೆ ಗ್ರಾಹಕರ ರಕ್ಷಣಾಕಾಯ್ದೆ ಅಡಿ ಸೇವಾ ನ್ಯೂನ್ಯತೆ ಆಗುತ್ತದೆ ಎಂದು ಆಯೋಗ ಅಭಿಪ್ರಾಯಪಟ್ಟು ತೀರ್ಪು ನೀಡಿದೆ.
ವಾಹನದ ದುರಸ್ತಿ ವೆಚ್ಚ ಹಾಗೂ ಅದರ ಮೇಲೆ ಕ್ಲೇಮ್ ತಿರಸ್ಕರಿಸಿದ ದಿನಾಂಕದಿಂದ ಶೇ.8ರಂತೆ ಬಡ್ಡಿ ಹಾಕಿ ದೂರುದಾರನಿಗೆ ತೀರ್ಪು ನೀಡಿದ ಒಂದು ತಿಂಗಳ ಒಳಗಾಗಿ ಹಣ ಸಂದಾಯ ಮಾಡುವಂತೆ ಕಂಪನಿಗೆ ಆದೇಶಿಸಿದೆ. ದೂರುದಾರರಿಗೆ ಆಗಿರುವ ಅನಾನುಕೂಲ ಹಾಗೂ ಮಾನಸಿಕ ತೊಂದರೆಗಾಗಿ 25,000 ರೂ. ಪರಿಹಾರ, ಪ್ರಕರಣದ ಖರ್ಚು ವೆಚ್ಚ 10ಸಾವಿರ ರೂ. ನೀಡುವಂತೆ ವಿಮಾ ಕಂಪನಿಗೆ ಆಯೋಗ ನಿರ್ದೇಶಿಸಿದೆ.
ಬಾಗಲಕೋಟೆ: ಚಿಕಿತ್ಸೆ ಪಡೆದಿದ್ದ ವೈದ್ಯಕೀಯ ವೆಚ್ಚ ಪಾವತಿಸಲು ನಿರಾಕರಿಸಿದ ಆದಿತ್ಯ ಬಿರ್ಲಾ ಹೆಲ್ತ್ ಇನ್ಸೂರೆನ್ಸ್ ಕಂಪನಿಗೆ ಬಡ್ಡಿ ಸಮೇತ 8.16ಲಕ್ಷ ರೂ. ವೆಚ್ಚ ಪಾವತಿಸುವಂತೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ಆದೇಶಿಸಿದೆ.
ಬಾಗಲಕೋಟೆ ನಿವಾಸಿ ಬಸವನಗೌಡ ಅಮರೇಶ್, ಹುಬ್ಬಳ್ಳಿಯ ಆದಿತ್ಯ ಬಿರ್ಲಾ ಹೆಲ್ತ್ ಇನ್ಸೂರೆನ್ಸ್ ಕಂಪನಿಯಲ್ಲಿ ವೈದ್ಯಕೀಯ ವಿಮೆ ಪಾಲಿಸಿ ಪಡೆದು 4,367 ವಿಮೆ ಹಣದ ಕಂತು ತುಂಬಿದ್ದರು. ಅವರಿಗೆ ಕಿಡ್ನಿ ಸಮಸ್ಯೆಯಿಂದ ಬೆಂಗಳೂರಿನ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಈ ವೇಳೆ 8.16ಲಕ್ಷ ರೂ. ವೈದ್ಯಕೀಯ ವೆಚ್ಚ ಪಾವತಿಸಿದ್ದರು.
ವೈದ್ಯಕೀಯ ದಾಖಲೆಗಳೊಂದಿಗೆ ವೆಚ್ಚ ಪಾವತಿಗೆ ವಿಮಾ ಕಂಪನಿಗೆ ಸಲ್ಲಿಸಿದ್ದರು. ಪಾಲಿಸಿ ಪಡೆಯುವಾಗ ಕಿಡ್ನಿ ಸಮಸ್ಯೆ ಇರುವ ಬಗೆ ತಿಳಿಸದೆ ಪಾಲಿಸಿ ಮಾಡಿದ್ದಾರೆ ಎಂದು ಕಂಪನಿ ಪರಿಹಾರ ಕೊಡುವುದನ್ನು ನಿರಾಕರಿಸಿತ್ತು.
ಬಸನಗೌಡ ಅವರು ಕಂಪನಿ ವಿರುದ್ಧ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರು ಸಲ್ಲಿಸಿದರು. ದೂರು ದಾಖಲಿಸಿಕೊಂಡ ಆಯೋಗ ಸುದೀರ್ಘ ವಿಚಾರಣೆ ನಡೆಸಿ ಆಸ್ಪತ್ರೆಗೆ ದಾಖಲಾದ ಮೇಲೆ ಕಿಡ್ನಿ ಸಮಸ್ಯೆ ವಿಷಯ ತಿಳಿದಿದೆ. ಆದ್ದರಿಂದ ವೈದ್ಯಕೀಯ ವೆಚ್ಚ ನೀಡಲು ನಿರಾಕರಿಸಿದ ದಿನದಿಂದ ಶೇ. 9ರ ಬಡ್ಡಿ ದರದೊಂದಿಗೆ 8.16 ಲಕ್ಷ ರೂ. ಮೊತ್ತ ಮತ್ತು ವಿಶೇಷ ಪರಿಹಾರವಾಗಿ 15,000, ಪ್ರಕರಣದ ವೆಚ್ಚ ಖರ್ಚು 5000ನೀಡುವಂತೆ ಆಯೋಗದ ಅಧ್ಯಕ್ಷ ಡಿ.ವೈ. ಬಸಾಪುರ, ಸದಸ್ಯೆ ಸಿ.ಎಚ್. ಸಮಿಉನ್ನಿಸಾ ಹಾಗೂ ಕಮಲಕಿಶೋರ್ ಜೋಷಿಯವರಿದ್ದ ಪೀಠ ತೀರ್ಪು ನೀಡಿದೆ.