ಡಾ.ಬಿ.ಆರ್. ಅಂಬೇಡ್ಕರ್ ಅವರ ಆಶಯದಂತೆ ಗದಗ ಜಿಲ್ಲೆಯ ಸುಮಾರು 160 ಜನ ನಾಗಪುರದಲ್ಲಿ ಬೌದ್ಧ ಧರ್ಮ ಸ್ವೀಕರಿಸಿದ್ದಾರೆ.
ಡಾ.ಬಾಬಾ ಸಾಹೇಬ್ ಅಂಬೇಡ್ಕರ ಅವರು ತಮ್ಮ ಇಡೀ ಜೀವಿತಾವಧಿಯಲ್ಲಿ ಹಿಂದೂ ಧರ್ಮದಲ್ಲಿನ ಜಾತೀಯತೆ, ಮೇಲು ಕೀಳು, ವರ್ಣಾಶ್ರಮ ವ್ಯವಸ್ಥೆಯನ್ನು ಕಟುವಾಗಿ ಖಂಡಿಸಿ, ಕೊನೆಗೆ “ಹಿಂದೂವಾಗಿ ಹುಟ್ಟಿದ್ದೇನೆ. ಆದರೆ, ಹಿಂದೂವಾಗಿ ಸಾಯಲಾರೆ” ಎಂದು ಆಡಿದ ಮಾತಿನಂತೆ 1956 ಅಕ್ಟೋಬರ್ 14 ರ ವಿಜಯ ದಶಮಿಯದಿನ ತಮ್ಮ ಐದು ಲಕ್ಷ ಅನುಯಾಯಿಗಳೊಂದಿಗೆ ನಾಗಪುರದಲ್ಲಿ ಬೌದ್ಧ ಧರ್ಮವನ್ನು ಸ್ವೀಕರಿಸಿದ್ದರು.
1956 ಅಕ್ಟೋಬರ್ 14 ರ ನಂತರ ಪ್ರತಿ ವರ್ಷ ವಿಜಯ ದಶಮಿಯದಿನ ನಾಗಪುರದಲ್ಲಿ ಸುಮಾರು ಒಂದು ಕೋಟಿಗೂ ಹೆಚ್ಚಿನ ಸಂಖ್ಯೆಯಲ್ಲಿ ದೇಶ, ವಿದೇಶಗಳಿಂದ ಅಂಬೇಡ್ಕರ್ ಅವರ ಅನುಯಾಯಿಗಳು ಆವತ್ತಿನ ದಿನ ನಾಗಪುರದಲ್ಲಿ ಸೇರುತ್ತಾರೆ.
ಪ್ರತಿ ವರ್ಷವೂ ಗದಗ ಜಿಲ್ಲೆಯಿಂದ ನೂರಾರು ಜನ ನಾಗಪುರದ ಧಮ್ಮ ದೀಕ್ಷಾ ಭೂಮಿಗೆ ಭೇಟಿ ನೀಡುತ್ತಾರೆ. ಈ ಬಾರಿ 58ನೇ ವರ್ಷದ ಧಮ್ಮ ಪರಿವರ್ತನಾ ದಿನಾಚರಣೆಗೆ ಗದಗ ಜಿಲ್ಲೆಯಿಂದ ಸುಮಾರು 160 ಜನ ನಾಲ್ಕು ಬಸ್ ಗಳ ಮೂಲಕ ಭಾಗವಹಿಸಿ, ಬೌದ್ಧ ಧರ್ಮ ಸ್ವೀಕರಿಸಿದ್ದಾರೆ.

58 ನೇ ವರ್ಷದ ಧಮ್ಮ ಪರಿವರ್ತನಾ ದಿನದಂದು ಡಾ.ಬಾಬಾ ಸಾಹೇಬರ ಆಶಯದಂತೆ ಗದಗ ಜಿಲ್ಲೆಯ ದಲಿತ ಮುಖಂಡರಾದ ಶರೀಫ್ ಬಿಳೆಯಲಿ, ಡಾ.ರಾಮಚಂದ್ರ ಹಂಸನೂರ ಅವರ ಕುಟುಂಬ ಮುಂಡರಗಿ ತಾಲೂಕಿನ ಡೋಣಿ ಗ್ರಾಮ ಪಂಚಾಯಿತಿ ಸದಸ್ಯರಾದ ಮಲ್ಲೇಶ್ ಹೊಸಮನಿ, ಬಾಲೆಹೊಸೂರಿನ ಕೇಶವ ಕಟ್ಟಿಮನಿ, ಮಂಜುನಾಥ ಛಲವಾದಿ, ಸಂಜಯ್ ಅಂಬೇಡ್ಕರ್ ಅವರು ದೇಶದ ವಿವಿಧ ಬೌದ್ಧ ಭಿಕ್ಕುಗಳ ಸಮ್ಮುಖದಲ್ಲಿ ಬೌದ್ಧ ಧಮ್ಮವನ್ನು ಸ್ವೀಕಾರ ಮಾಡಿದರು.
ಈ ಧಮ್ಮ ದೀಕ್ಷಾ ಸ್ವೀಕಾರ ಸಮಾರಂಭಕ್ಕೆ ಡಾ.ಬಾಬಾ ಸಾಹೇಬ ಅಂಬೇಡ್ಕರ್ ಅವರ ಮೊಮ್ಮಗ ಭೀಮರಾವ್ ಯಶವಂತರಾವ್ ಅಂಬೇಡ್ಕರ್ ಅವರು ಉಪಸ್ಥಿತರಿದ್ದರು. ಅವರು ಧಮ್ಮ ದೀಕ್ಷಾ ಸ್ವೀಕರಿಸಿದ ಗದಗ ಜಿಲ್ಲೆಯವರಿಗೆ ಧಮ್ಮ ದೀಕ್ಷಾ ಪ್ರಮಾಣ ಪತ್ರವನ್ನು ನೀಡಿದರು.
ಈ ಸಂದರ್ಭದಲ್ಲಿ ಗದಗ ಜಿಲ್ಲೆಯ ದಲಿತ ಮುಖಂಡರಾದ ಆನಂದ ಶಿಂಗಾಡಿ, ಮುತ್ತು ಬಿಳೆಯಲಿ, ಯಲ್ಲಪ್ಪ ರಾಮಗಿರಿ, ಮಂಜುನಾಥ ಗೊಂದಿಯವರ, ಅನಂತ ಕಟ್ಟಿಮನಿ, ರಮೇಶ್ ಕೋಳೂರು, ಬಸವರಾಜ ಛಲವಾದಿ, ಹುಚ್ಚಪ್ಪ ಛಲವಾದಿ, ಸತ್ಯಪ್ಪ ಛಲವಾದಿ ಸೇರಿದಂತೆ ಗದಗ ಜಿಲ್ಲೆಯ ಹಲವಾರು ಮಂದಿ ಉಪಸ್ಥಿತರಿದ್ದರು.
