ಗದಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಜಿಮ್ಸ್)ಯಲ್ಲಿ ಇಲ್ಲಿಯವರೆಗೂ ಉಚಿತ ಹಾಗೂ ಕಡಿಮೆ ದರಗಳಲ್ಲಿ ಚಿಕಿತ್ಸೆ ಸಿಗುತ್ತಿತ್ತು. ಸೆಪ್ಟಂಬರ್ 1ರಿಂದ ಒಮ್ಮಿಂದೊಮ್ಮೆಲೆ ಎಲ್ಲ ಚಿಕಿತ್ಸಾ ದರಗಳು ಮೂರು ಪಟ್ಟು ಹೆಚ್ಚಾಗಿವೆ. ಬಡವರನ್ನು ದರೋಡೆ ಮಾಡಲು ಆಸ್ಪತ್ರೆ ಮುಂದಾಗಿರುವುದು ಖಂಡನೀಯ. ಈ ಬಗ್ಗೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ದಲಿತ ಸಂಘಟನೆಗಳ ಒಕ್ಕೂಟ ಆಗ್ರಹಿಸಿದೆ.
ಈ ಬಗ್ಗೆ ಹೇಳಿಕೆ ನೀಡಿರುವ ಗದಗ ದಲಿತ ಸಂಘಟನೆಗಳ ಒಕ್ಕೂಟದ ಮುಖಂಡ ಮುತ್ತು ಬಿಳೆಯಲಿ, ಕರ್ನಾಟಕ ಸರ್ಕಾರ ಬಡವರಿಗೆ, ಕಾರ್ಮಿಕರಿಗೆ ಉಚಿತವಾಗಿ ಹಾಗೂ ಉತ್ತಮ ಚಿಕಿತ್ಸೆ ಸಿಗಬೇಕು ಎಂಬ ಆಲೋಚನೆಯಿಂದ ಪ್ರತಿ ಜಿಲ್ಲೆಯಲ್ಲಿ ಜಿಲ್ಲಾಸ್ಪತ್ರೆ, ಪ್ರತಿ ತಾಲೂಕಿಗೆ ತಾಲೂಕು ಆಸ್ಪತ್ರೆಗಳನ್ನು ಮಾಡಿದೆ. ಇನ್ನೂ ಮುಂದುವರೆದು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಮುಖಾಂತರ ಬಡವರಿಗೆ ಉಚಿತವಾಗಿ ಹಾಗೂ ಕಡಿಮೆ ದರಗಳಲ್ಲಿ ಮಲ್ಟಿ ಸ್ಪೆಷಾಲಿಟಿ ಚಿಕಿತ್ಸೆಗಳನ್ನು ಒದಗಿಸಬೇಕಾಗಿರುವುದು ಸರ್ಕಾರದ ಕರ್ತವ್ಯವಾಗಿದೆ. ಆದರೆ ಗದಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಇಲ್ಲಿಯವರೆಗೂ ಉಚಿತ ಹಾಗೂ ಕಡಿಮೆ ದರಗಳಲ್ಲಿ ಚಿಕಿತ್ಸೆ ಸಿಗುತ್ತಿತ್ತು.ಸೆಪ್ಟಂಬರ್ 1 ನೇ ತಾರೀಕಿನಿಂದ ಒಮ್ಮಿಂದೊಮ್ಮೆಲೆ ಎಲ್ಲ ಚಿಕಿತ್ಸಾ ದರಗಳು ಮೂರು ಪಟ್ಟು ಹೆಚ್ಚಾಗಿವೆ.ಇ ದಕ್ಕೆಲ್ಲ ಕಾರಣ ಅಲ್ಲಿನ ಹಿಟ್ಲರ್ ಮನಸ್ಥಿತಿಯ ಜಿಮ್ಸ್ ನ ನಿರ್ದೇಶಕ ಬಸವರಾಜ ಬೊಮ್ಮನಹಳ್ಳಿ” ಎಂದು ಕಿಡಿಕಾರಿದ್ದಾರೆ.
ಕರ್ನಾಟಕ ಸರ್ಕಾರದ ಯಾವುದೇ ಆದೇಶವಿಲ್ಲದೆ ಏಕಾಏಕಿ ಎಲ್ಲ ಚಿಕಿತ್ಸಾ ದರಗಳನ್ನು ಮೂರು ಪಟ್ಟು ಹೆಚ್ಚಿಸಿದ್ದಾರೆ. ಈ ಹಿಂದೆ ಒಬ್ಬ ಬಡ ರೋಗಿ ಎಕ್ಸರೇ ಮಾಡಿಸಿದರೆ 50 ರೂಪಾಯಿಗಳ ದರ ನಿಗದಿ ಮಾಡುತ್ತಿದ್ದರು. ಆದರೆ ಈಗ ಅದೇ ಎಕ್ಸರೇ ದರ 200 ರೂಪಾಯಿಗಳು. ಬರೀ ಎಕ್ಸರೇ ದರವೇ, ಹೀಗಾದರೆ ಎಮ್.ಆರ್.ಆಯ್ ಸ್ಕ್ಯಾನಿಂಗ್ ದರ ಬಡವರಿಗೆ ನಿಲುಕದ ಹಾಗೆ ಇದೆ. ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಯ ದರಗಳು ತುಂಬಾ ದುಬಾರಿಯಾಗಿರುತ್ತವೆ. ಅಂತ ಬಡವರು ಸರ್ಕಾರಿ ಆಸ್ಪತ್ರೆಗೆ ಬಂದರೆ ಇಲ್ಲಿಯೂ ಅಂತಹ ಸ್ಥಿತಿ ನಿರ್ಮಾಣವಾಗಿದೆ ಎಂದು ದೂರಿದ್ದಾರೆ.

ದಿಢೀರ್ ದರ ಏರಿಕೆ ಬಗ್ಗೆ ಸಾರ್ವಜನಿಕರು ಜಿಮ್ಸ್‌ನ ವೈದ್ಯಕೀಯ ಅಧೀಕ್ಷಕರನ್ನು ಕೇಳಿದರೆ, ಅಧೀಕ್ಷಕರಿಗೇ ದರ ಹೆಚ್ಚಳದ ಬಗ್ಗೆ ಮಾಹಿತಿ ಇಲ್ಲ. ಇಡೀ ಆಸ್ಪತ್ರೆಯ ಆಡಳಿತ ನೋಡಿಕೊಳ್ಳುವ ಒಬ್ಬ ವೈದ್ಯಕೀಯ ಅಧೀಕ್ಷಕರಿಗೆ ಗಮನಕ್ಕೆ ತರದೆ ನಿರ್ದೇಶಕರು ಸರ್ವಾಧಿಕಾರದ ದೋರಣೆ ಹೊಂದಿದ್ದಾರೆ. ಈ ನಿರ್ದೇಶಕರ ಸರ್ವಾಧಿಕಾರಿ ಧೋರಣೆ ಇದೆ ಮೊದಲಲ್ಲ. ಒಬ್ಬ ದಲಿತ ಮಹಿಳೆ ಜಿಮ್ಸ್‌ನ ವೈದ್ಯಕೀಯ ಅಧೀಕ್ಷಕರಾಗಿದ್ದಾರೆ. ಅವರು ಅಧಿಕಾರ ವಹಿಸಿಕೊಂಡ ದಿನದಿಂದಲೂ ಅವರಿಗೆ ನಿರಂತರ ಕಿರುಕುಳ ನೀಡುತ್ತಾ, ಅವರಿಗೆ ಸರಿಯಾಗಿ ಕರ್ತವ್ಯ ನಿರ್ವಹಿಸಲು ಬಿಡುತ್ತಿಲ್ಲ ಎಂದು ಆರೋಪಿಸಿದ್ದಾರೆ.
ಈ ಹಿಂದೆ ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಜಿಮ್ಸ್‌ಗೆ ಭೇಟಿ ನೀಡಿದಾಗ ಅಲ್ಲಿನ ಡಿ ಗ್ರೂಪ್ ಸಿಬ್ಬಂದಿಗಳೆಲ್ಲರೂ ಸೇರಿ ಡಾ.ಬಾಬಾ ಸಾಹೇಬರ ಫೋಟೋವನ್ನು ನೀಡಿ ಸ್ವಾಗತ ಕೋರಲು ಮುಂದಾದಾಗ, ಅದಕ್ಕೆ ಅಡ್ಡಿಪಡಿಸಿ ಅವರನ್ನ ಅವಮಾನಿಸಿ ತೊಂದರೆ ಕೊಟ್ಟಿದ್ದಾರೆ. ಈ ವಿಷಯದ ಕುರಿತು ದಲಿತ ಸಂಘಟನೆಗಳು ಪ್ರಶ್ನೆ ಮಾಡಿದಾಗ ಕ್ಷಮೆ ಕೇಳಿದರು. ತಮ್ಮ ಪಟಾಲಂಗೆ ಅಲ್ಲಿ ಕೆಲಸ ಮಾಡುತ್ತಿರುವ ಡಿಗ್ರೂಪ್‌ನ ನೌಕರರ ಜಾತಿವಾರು ಮಾಹಿತಿಯನ್ನು ತೆಗೆದುಕೊಂಡು ಅವರಿಗೆ ನಿರಂತರವಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ದಲಿತ ಸಂಘಟನೆಗಳ ಒಕ್ಕೂಟ ದೂರಿದೆ.
ಇದನ್ನು ಓದಿದ್ದೀರಾ? ಧಾರವಾಡ | ಲಿಂಗಾಯತ ಧರ್ಮ ನಾಶಮಾಡಲು ಸಾಧ್ಯವಿಲ್ಲ, ರಾಷ್ಟ್ರೀಯತೆ ಹುಟ್ಟಿದ್ದೇ ಕನ್ನಡಿಗರಿಂದ: ಡಾ. ವಾಸು ಎಚ್ ವಿ
ಸರ್ಕಾರದ ಯಾವುದೇ ಆದೇಶವಿಲ್ಲದೆ ಚಿಕಿತ್ಸಾ ದರಗಳನ್ನು ಹೆಚ್ಚಳ ಮಾಡಿದ ಸರ್ವಾಧಿಕಾರಿಯಾದ ನಿರ್ದೇಶಕರನ್ನು ಕೂಡಲೇ ಸರ್ಕಾರ ಇವರನ್ನು ಅಮಾನತು ಮಾಡಿ, ನಿರ್ದೇಶಕ ಹುದ್ದೆಯಿಂದ ಕೆಳಗಿಳಿಸಬೇಕು. ಈ ಹಿಂದೆ ಇದ್ದ ಚಿಕಿತ್ಸಾ ದರಗಳನ್ನು ಮುಂದುವರೆಸಬೇಕು ಎಂದು ದಲಿತ ಸಂಘಟನೆಗಳ ಒಕ್ಕೂಟದ ಮುಖಂಡ ಮುತ್ತು ಬಿಳೆಯಲಿ ಆಗ್ರಹಿಸುವುದಾಗಿ ತಿಳಿಸಿದ್ದಾರೆ.
