ಭಾರತದ ಘನತೆ ಗೌರವ ಹೆಚ್ಚಿಸಿದ ಮಹಿಳಾ ಕುಸ್ತಿಪಟುಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆಯುತ್ತಿದ್ದರೂ ಕ್ರಮ ಕೈಗೊಳ್ಳದಿರುವುದು ದುರಂತ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಶರಣು ಪೂಜಾರ ಹೇಳಿದರು.
ಮಹಿಳಾ ಕುಸ್ತಿಪಟುಗಳ ಮೇಲೆ ಲೈಂಗಿಕ ಕಿರುಕುಳ ನೀಡುತ್ತಿರುವುದನ್ನು ಖಂಡಿಸಿ, ಕೂಡಲೇ ಕ್ರಮ ಕೈಗೊಳ್ಳುವಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದ ತಹಶಶೀಲ್ದಾರರಿಗೆ ಮನವಿ ಸಲ್ಲಿಸಿ ಮಾತನಾಡಿದರು.
“ದೇಶದ ಘನತೆಯನ್ನು ಎತ್ತಿಹಿಡಿದ ಮಹಿಳಾ ಕುಸ್ತಿಪಟುಗಳ ಮೇಲೆ ಭಾರತೀಯ ಕುಸ್ತಿ ಪಡರೇಷನ್ ಅಧ್ಯಕ್ಷ ಬ್ರೀಜ್ ಭೂಷಣ್ ಸಿಂಗ್ ಲೈಂಗಿಕ ಕಿರುಕುಳ ನೀಡುತ್ತಿರುವುದು ಅಕ್ಷಮ್ಯ ಅಪರಾಧ” ಎಂದರು.
“ದೇಶಕ್ಕೆ ಹೆಮ್ಮೆ ತಂದುಕೊಟ್ಟ ಕ್ರೀಡಾಪಟುಗಳಿಗೆ ಕೊಡುವ ಗೌರವ ಇದೇನಾ ಎನ್ನುವ ಪ್ರಶ್ನೆ ಎಲ್ಲರಲ್ಲೂ ಮೂಡುವಂತೆ ಪ್ರಧಾನಮಂತ್ರಿಗಳು ಮಾಡುತ್ತಿದ್ದಾರೆ. ಕ್ರೀಡಾಪಟುಗಳು ಅನ್ಯಾಯದ ವಿರುದ್ಧ ಧ್ವನಿ ಎತ್ತಿ ಸಂಸತ್ತು ಭವನಕ್ಕೆ ಮುತ್ತಿಗೆ ಹಾಕಲು ಹೊರಟಾಗ ನಡು ರಸ್ತೆಯಲ್ಲಿ ಬಂಧಿಸಿರುವ ಘಟನೆ ಇಡೀ ದೇಶದ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಕಿರುಕುಳ ನೀಡಿದವರನ್ನು ರಕ್ಷಣೆ ಮಾಡುತ್ತಿರುವ ಕೇಂದ್ರ ಸರ್ಕಾರಕ್ಕೆ ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸುತ್ತೇವೆ” ಎಂದು ಶರಣು ಪೂಜಾರ ಕಿಡಿಕಾರಿದರು.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಕುಸ್ತಿ ಫೆಡರೇಶನ್ ಅಧ್ಯಕ್ಷ ಬ್ರಿಜ್ ಭೂಷಣ್ ಬಂಧನಕ್ಕೆ ರೈತ ಸಂಘ ಆಗ್ರಹ
ಡಿಎಸ್ಎಸ್ ಮುಖಂಡ ಹನಮಂತ ಪೂಜಾರ್ ಮಾತನಾಡಿ, “ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮೌನ ಮುರಿದು ಆರೋಪಿಗಳನ್ನು ಕೂಡಲೇ ಬಂಧಿಸಬೇಕು. ಇಲ್ಲದಿದ್ದಲ್ಲಿ ದೇಶವ್ಯಾಪಿ ಹೋರಾಟಕ್ಕೆ ಕರೆ ನೀಡಬೇಕಾಗುತ್ತದೆ” ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಪ್ರಗತಿಪರ ಚಿಂತಕ ರವೀಂದ್ರ ಹೊನವಾಡ, ಡಿಎಸ್ಎಸ್ ಮುಖಂಡರು ಪ್ರಭು ನಿಡಗುಂದಿ, ಸಿದ್ದಪ್ಪ ಪೂಜಾರ್, ಮಂಜುನಾಥ ಹೂಗಾರ, ನೀಲಪ್ಪ ಗುಡಿಮನಿ, ಕೂಮಾರ ರಾಠೋಡ್, ಶಿವು ಚವ್ಹಾಣ, ಹನಮಂತ ಮಾದರ, ಮುತ್ತು ರಾಠೋಡ್, ಮಂಜು ರಾಠೋಡ್ ಸೇರಿದಂತೆ ಇತರರು ಇದ್ದರು.