ಶೋಷಿತರ ಪರವಾಗಿ ಧ್ವನಿ ಎತ್ತಲು ಪ್ರೊ. ಬಿ. ಕೃಷ್ಣಪ್ಪ ಅವರು ಕರ್ನಾಟಕ ದಲಿತ ಚಳವಳಿಯನ್ನು ಆರಂಭ ಮಾಡಿದರು. ದಲಿತ ಸಂಘರ್ಷ ಸಮಿತಿ (ದಸಂಸ) ಹುಟ್ಟಿ ಸುಧೀರ್ಘ ಹೋರಾಟದೊಂದಿಗೆ 50 ವರ್ಷ ಪೂರೈಸಿದೆ. ಈ ಹಿನ್ನೆಲೆಯಲ್ಲಿ 50ರ ಸಂಭ್ರಮವನ್ನು ಆಚರಿಸುತ್ತಿದ್ದೇವೆ ಎಂದು ದಸಂಸ ಜಿಲ್ಲಾ ಸಂಚಾಲಕ ಶರಣು ಪೂಜಾರ್ ಹೇಳಿದರು.
ಗದಗ ಪಟ್ಟಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿರು. “ದಸಂಸ 50ರ ಸಂಭ್ರಮಾಚರಣೆ ಅಂಗವಾಗಿ ಜುಲೈ 10ರಂದು ಬೆಂಗಳೂರಿನ ಡಾ. ಅಂಬೇಡ್ಕರ್ ಭವನದಲ್ಲಿ ಸಮಾವೇಶ ನಡೆಯಲಿದೆ. ಸಮಾವೇಶಕ್ಕೆ ಗದಗ ಜಿಲ್ಲೆಯಿಂದ 500ಕ್ಕೂ ಹೆಚ್ಚು ಜನರು ಭಾಗವಹಿಸಲಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರ್ಯಕ್ರಮ ಉದ್ಘಾಟಿಸಲಿದ್ದು, ದಸಂಸ ರಾಜ್ಯ ನಾಯಕರು ಭಾಗವಹಿಸಲಿದ್ದಾರೆ” ಎಂದರು.
“ದಲಿತರಿಗೆ ಸಾಲ ಸೌಲಭ್ಯ ಹೆಚ್ಚಿಸಬೇಕು, ಹಾಸ್ಟೆಲ್ ವಿದ್ಯಾರ್ಥಿಗಳ ಮಾಸಿಕ ಭತ್ಯೆ ₹2500ದಿಂದ 3000ಕ್ಕೆ ಹೆಚ್ಚಿಸಬೇಕು. ವಸತಿ ಶಾಲೆ-ಕಾಲೇಜಿಗೆ ಅರ್ಜಿ ಹಾಕಿದ ಎಲ್ಲರಿಗೂ ಅವಕಾಶ ನೀಡಬೇಕು. ವಸತಿ ಶಾಲೆಯಲ್ಲಿನ ನೌಕರರನ್ನು ಕಾಯಂಗೊಳಿಸಬೇಕು. ಗುತ್ತಿಗೆ ಆಧಾರದ ಮೇಲೆ ಸೇವೆ ಸಲ್ಲಿಸುತ್ತಿರುವ ನೌಕರರಿಗೆ ₹24 ಸಾವಿರ ನೀಡುವುದು, ಹಲವಾರು ಪ್ರಮುಖ ಬೇಡಿಕೆಗಳ ಕುರಿತು ಸಮಾವೇಶದಲ್ಲಿ ಹಕ್ಕೊತ್ತಾಯ ಮಂಡಿಸಲಾಗುವುದು” ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಪ್ರಕಾಶ್ ಹೊಸಳ್ಳಿ, ವಿನಾಯಕ ಬಳ್ಳಾರಿ, ಶಿವಕುಮಾರ ಚೌಹಾಳ್, ದುರುಗಪ್ಪ ಹರಿಜನ, ದತ್ತು ಜೋಗಣ್ಣವರ್, ನೀಲಪ್ಪ ಗುಡಿಮನಿ, ಸಂಗಪ್ಪ ಹೊಸಮನಿ, ನೀಲಪ್ಪ ಛಲವಾದಿ, ಪ್ರಭು ನಿಲಗುಂದಿ, ಮರಿಯಪ್ಪ ಮಾಳದ, ಮಾಂತೇಶ್, ಪರಶುರಾಮ, ಹನುಮಂತ ಮುಂದಿನಮನಿ, ಸೋಮು ಹೈತಪುರ್ ಉಪಸ್ಥಿತರಿದ್ದರು.