ದೀಪಾವಳಿ, ಗೌರಿ ಹಬ್ಬ ಸೇರಿದಂತೆ ಹಲವಾರು ಹಬ್ಬಗಳ ಸಂದರ್ಭದಲ್ಲಿ ಕೆಲವು ಜುಜೂಕೋರರು ಬಹಿರಂಗವಾಗಿ ಸಾರ್ವಜನಿಕ ಸ್ಥಳಗಳಲ್ಲಿ ಜೂಜಾಟದಲ್ಲಿ ತೊಡಗುತ್ತಿದ್ದಾರೆ. ಅಂತಹ ಜೂಜುಕೋರರ ವಿರುದ್ಧ ಕ್ರಮ ಕೈಕೊಳ್ಳದೆ ಗದಗ ಜಿಲ್ಲೆಯಲ್ಲಿ ಪೋಲಿಸ್ ಇಲಾಖೆ ಕುರುಡು ಜಾಣತನ ತೋರಿಸುತ್ತಿದೆ. ಇದರಿಂದ ಜಿಲ್ಲೆಯಲ್ಲಿ ಹೆಚ್ಚಿನ ಯುವಕರು ದಾರಿ ತಪ್ಪುತ್ತಿದ್ದಾರೆ. ಜೂಜುಕೋರರ ವಿರುದ್ಧ ಕ್ರಮ ಕೈಕೊಳ್ಳಬೇಕು. ಯುವಕರನ್ನು ಜೂಜಾಟದಿಂದ ಹೊರಗುಳಿಯುವಂತೆ ಮಾಡಬೇಕು ಎಂದು ದಲಿತ ಮುಖಂಡ ಶಿವಾನಂದ ತಮ್ಮಣ್ಣವರ ಒತ್ತಾಯಿಸಿದ್ದಾರೆ.
ಗದಗ ಜಿಲ್ಲಾಧಿಕಾರಿಗೆ ಅಂಬೇಡ್ಕರ್ ದಲಿತ ಸಂಘರ್ಷ ಸಮಿತಿಯ ಕಾರ್ಯಕರ್ತರು ಹಕ್ಕೊತ್ತಾಯ ಪತ್ರ ಸಲ್ಲಿಸಿದ್ದಾರೆ. ಈ ವೇಳೆ ಮಾತನಾಡಿದ ಶಿವಾನಂದ ತಮ್ಮಣ್ಣವರ, “ದೀಪಾವಳಿ ಹಬ್ಬ ಸಮೀಪಿಸುತ್ತಿದೆ. ಹಬ್ಬದ ನೆಪದಲ್ಲಿ ಜೂಜುಕೋರರು ಇಸ್ಪೀಟ್ ಜೂಜು ಆಡಲು ಆರಂಭಿಸುತ್ತಿದ್ದಾರೆ. ಜೂಜಾಟಕ್ಕೆ ಕಡಿವಾಣ ಹಾಕಲು ಸೂಕ್ತ ಕ್ರಮ ಕೈಗೊಳ್ಳಬೇಕು. ಜೂಜುಕೋರರ ವಿರುದ್ಧ ಕ್ರಮ ಕೈಗೊಳ್ಳಲು ಪೋಲಿಸ್ ಇಲಾಖೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯತಿ, ಗ್ರಾಮ ಪಂಚಾಯತಿಗಳಿಗೆ ನಿರ್ದೇಶನ ನೀಡಬೇಕು” ಎಂದು ಒತ್ತಾಯಿಸಿದ್ದಾರೆ.
“ಜೂಜಾಟ ಕಾನೂನು ಪ್ರಕಾರ ಅಪರಾಧವೆಂದು ಗೊತ್ತಿದ್ದರೂ, ಕೆಲವರು ಈ ಆಟವನ್ನು ನಿರಂತರವಾಗಿ ಆಡುತ್ತಿದ್ದಾರೆ. ಪೋಲಿಸ್ ಇಲಾಖೆ ಕಾಟಾಚಾರಕ್ಕೆ ಆಗೊಮ್ಮೆ ಈಗೊಮ್ಮೆ ಕೆಲವರನ್ನು ಬಂಧಿಸಿ, ಅದನ್ನೇ ಪ್ರಚಾರ ಪಡಿಸುತ್ತಾರೆ. ಆದರೆ, ಕೆಲವು ಕಡೆ ನಿರಂತರವಾಗಿ ಜೂಜಾಟ ನಡೆಯುತ್ತಿರುವುದು ಕೆಲವು ಪೋಲಿಸ್ ಸಿಬ್ಬಂದಿಗಳಿಗೆ ಗೊತ್ತಿದ್ದರೂ, ಜೂಜುಖೋರರ ಜೊತೆ ಹೊಂದಾಣಿಕೆ ಮಾಡಿಕೊಂಡು ಆಟವಾಡಲು ಅನುಕೂಲ ಮಾಡಿಕೊಡುತ್ತಿದ್ದಾರೆ” ಎಂದು ಆರೋಪಿಸಿದ್ದಾರೆ.
ಹಕ್ಕೊತ್ತಾಯ ಸಲ್ಲಿಸುವ ವೇಳೆ ಸಂಘಟನೆಯ ನೀತಿಶ್ ಘಟ್ಟೆಣವರ, ಮಂಜುನಾಥ ಸಿತಾರಹಳ್ಳಿ, ರಮೇಶ ಚಲವಾದಿ ಇನ್ನೂ ಮುಂತಾದವರು ಉಪಸ್ಥಿತರಿದ್ದರು.