ಪ್ರಜಾಪ್ರಭುತ್ವ ಗಟ್ಟಿಗೊಳಿಸಿದ್ದು ಅಂಬೇಡ್ಕರ್ ಬರೆದ ಸಂವಿಧಾನ. ಅಂತಹ ಸಂವಿಧಾನದಿಂದ ರಾಜಕೀಯದಲ್ಲಿ ಸಮಾನತೆ ಇದೆ. ಆದರೆ ಸಾಮಾಜಿಕವಾಗಿ ಸಮಾನತೆಯಾಗಬೇಕಿದೆ ಎಂದು ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್ ಕೆ ಪಾಟೀಲ ಹೇಳಿದರು.
ಗದಗ ನಗರದ ಬಿ ಆರ್ ಅಂಬೇಡ್ಕರ್ ಸಭಾಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ, ಗದಗ ಬೆಟಗೇರಿ ನಗರಸಭೆ ಹಾಗೂ ಜಿಲ್ಲೆಯ ವಿವಿಧ ದಲಿತ ಪರ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಸಂವಿಧಾನ ಶಿಲ್ಪಿ, ಮಹಾ ಮಾನವತಾವಾದಿ, ಭಾರತ ರತ್ನ ಡಾ. ಬಿ ಆರ್ ಅಂಬೇಡ್ಕರ್ ಅವರ 134ನೇ ಹಾಗೂ ಹಸಿರು ಕ್ರಾಂತಿಯ ಹರಿಕಾರ, ರಾಷ್ಟ್ರ ನಾಯಕ, ಭಾರತದ ಮಾಜಿ ಉಪ ಪ್ರಧಾನಿ ಡಾ. ಬಾಬು ಜಗಜೀವನರಾಂ ಅವರ 118ನೇ ಜಯಂತ್ಯೋತ್ಸವದ ವೇದಿಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
“ಸರ್ವಜನಾಂಗವನ್ನು ಸಮದೃಷ್ಟಿಯಿಂದ ನೋಡುವ ಸಂವಿಧಾನವನ್ನು ಡಾ. ಬಿ ಆರ್ ಅಂಬೇಡ್ಕರ್ ಅವರು ರಚಿಸಿ ಕೊಟ್ಟರು. ಜತೆಗೆ ನಮ್ಮ ಕರ್ತವ್ಯವನ್ನು ನಮಗೆ ಸೂಚಿಸಿದರು. ಅವರ ಆದರ್ಶಗಳ ಪಾಲನೆ ಅತ್ಯವಶ್ಯ. ಅದೇ ರೀತಿ ಬಾಬು ಜಗಜೀವನರಾಂ ಅವರು ಹೊಂದಿದ ಸಂಸ್ಕೃತ ಪಾಂಡಿತ್ಯ ಮೆಚ್ಚುವಂತದ್ದು” ಎಂದು ಹೇಳಿದರು.
“ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್ ಅವರ ಆಶಯಗಳು ಇಂದಿನ ಕಾಲದಲ್ಲಿ ಸಾಕಾರಗೊಂಡಿವೆಯಾ ಎಂದು ನಮ್ಮನ್ನು ನಾವು ಪ್ರಶ್ನಿಸಿಕೊಳ್ಳಬೇಕಿದೆ” ಎಂದರು.
“ಅಸ್ಪೃಷ್ಯತೆಯಿಂದ ಅಂಬೇಡ್ಕರ್ ನೋವು ಉಂಡಿದ್ದರು. ದೇಶದಲ್ಲಿ ಇದ್ದ ಅನಿಷ್ಟ ಪದ್ದತಿ ಹೋಗಲಾಡಿಸಲು ಸತತ ಓದು, ಅಧ್ಯಯನ ಮಾಡಿ ಸಂವಿಧಾನ ರಚಿಸಿದರು. ಸಮಬಾಳು, ಸಮಪಾಲಿನಿಂದ ಬದುಕುಲು ತಿಳಿಸಿದರು. ಆದರೆ, ಕಳೆದ 75 ವರ್ಷಗಳಿಂದ ಸಮಾನತೆ ಮೂಡಿದೆಯೇ” ಎಂದು ಪ್ರಶ್ನಿಸಿದರು.
“ರಾಜಕೀಯದಲ್ಲಿ ಅಸ್ಪೃಶ್ಯತೆ ಹೋಗಲಾಡಿಸಲಾಗಿದೆ. ಆದರೆ ಸಾಮಾಜಿಕ ಅಸ್ಪೃಶ್ಯತೆ ಇನ್ನೂ ಬೇರೂರಿದೆ. ಗ್ರಾಮಗಳಲ್ಲಿ ಈ ಪರಿಸ್ಥಿತಿ ಇನ್ನೂ ಇದೆ. ಸಾಮಾಜಿಕ ತೀವ್ರ ಸುಧಾರಣೆ ಪ್ರಸ್ತುತ ಅತ್ಯಂತ ಅವಶ್ಯವಿದೆ. ಸುಧಾರಣೆಗೆ ಹೋರಾಟದ ಅವಶ್ಯವಿದೆ. ಆರ್ಥಿಕ ಸುಧಾರಣೆಗೂ ಪ್ರಾಮುಖ್ಯತೆ ನೀಡಬೇಕು” ಎಂದರು.
“ಭಾರತ ದೇಶದ ಸುತ್ತಮುತ್ತಲಿನ ದೇಶಗಳಲ್ಲಿ ಅಭದ್ರತೆ ಮೂಡಿದೆ. ಎಲ್ಲ ದೇಶಗಳು ಸಾಮಾಜಿಕ, ಆರ್ಥಿಕವಾಗಿ ದಿವಾಳಿಯಾಗಿ ಹೋಗಿವೆ. ಆದರೆ ಭಾರತದಲ್ಲಿ ಡಾ. ಅಂಬೇಡ್ಕರ್ ರಚಿಸಿದ ಸಂವಿಧಾನ ಇರುವ ಕಾರಣ ದೇಶ ಸುಭದ್ರವಾಗಿದೆ. ಇಂಧಿರಾ ಗಾಂಧಿ ಅವರ ಹತ್ಯೆ ನಂತರವೂ ಅಧಿಕಾರ ಹಸ್ತಾಂತರದಲ್ಲಿ ತೊಂದರೆಯಾಗಲಿಲ್ಲ. ಅದಕ್ಕೆ ಗಟ್ಟಿ ಪ್ರಜಾಪ್ರಭುತ್ವವೇ ಕಾರಣ” ಎಂದು ಹೇಳಿದರು.
“ಸಂವಿಧಾನ ಪರಿಪೂರ್ಣ, ಸಕಾರಾತ್ಮಕ ಬಳಕೆಯಾಗದಿದ್ದರೂ ಉದ್ದೇಶ ಈಡೇರುವುದಿಲ್ಲ. ಸಂವಿಧಾನ ಉತ್ತಮ್ಮರ ಕೈಯಲ್ಲಿರಬೇಕು. ಅಧಮರ ಕೈಗೆ ಸಿಕ್ಕರೆ ದೇಶ ನಾಶವಾಗುತ್ತದೆ” ಎಂದು ಸಚಿವರು ಹೇಳಿದರು.
ವಿಧಾನ ಪರಿಷತ್ ಶಾಸಕ ಎಸ್ ವಿ ಸಂಕನೂರು ಮಾತನಾಡಿ, “ಅಂಬೇಡ್ಕರ್ ಮತ್ತು ಬಾಬು ಜಗಜೀವನರಾಂ ಅವರು ತಮ್ಮ ವೈಯಕ್ತಿಕ ಅಭಿವೃದ್ಧಿಗೆ ಬದುಕದೇ ಸಾಮಾಜಿಕ ಅಭಿವೃದ್ಧಿಗೆ ಬದುಕಿದವರು. ಈ ಇಬ್ಬರು ಮಹನೀಯರು ಲಕ್ಷ್ಮೀ ಪುತ್ರರಲ್ಲ. ಸರಸ್ವತಿ ಪುತ್ರರಾಗಿದ್ದರು” ಎಂದರು.
“ಅಂಬೇಡ್ಕರ್ ಅವರ ಸಾಧನೆ ಪರಿಗಣಿಸಿ ಅಂದಿನ ಪ್ರಧಾನಿ ವಾಜಪೇಯಿಯವರು ಮರಣೋತ್ತರ ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸಿದರು. ಅದೇ ರೀತಿ ಅಂಬೇಡ್ಕರ್ ಅವರಿಗೆ ಸಂಬಂಧಿಸಿದ 5 ಕ್ಷೇತ್ರಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರು ಪಂಚತೀರ್ಥ ಸ್ಥಳಗಳನ್ನಾಗಿ ಅಭಿವೃದ್ಧಿಪಡಿಸಿದರು” ಎಂದು ವಿವರಿಸಿದರು.
ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಅವರ ಕವಿತೆಗಳ ಕವನ ಸಂಕಲನವನ್ನು ಬಿಡುಗಡೆ ಮಾಡಲಾಯಿತು. ಅಂಬೇಡ್ಕರ್ ಕವಿತೆ ಕವನ ಸಂಪಾದಕ ಮಂಡಳಿಯ ಸದಸ್ಯರನ್ನು ಸನ್ಮಾನಿಸಲಾಯಿತು.
ಈ ಸುದ್ದಿ ಓದಿದ್ದೀರಾ? 2A ಪ್ರವರ್ಗದಲ್ಲಿ ಸಿಂಹಪಾಲು ಬೆಣ್ಣೆ ನುಂಗಿದ ಭೂಪರು ಯಾರು ಹೇಳಿ ಸಿದ್ದರಾಮಯ್ಯನವರೇ: ಎಚ್‌ಡಿಕೆ ಪ್ರಶ್ನೆ
ಬಾಬಾ ಅಂಬೇಡ್ಕರ್ ಭಾರತದ ಬಾಸ್ಕರ ಎಂಬ ಗೀತೆಯನ್ನು ಸೃಷ್ಟಿ ಜನಪದ ಕಲಾತಂಡದ ರಮೇಶ ಕಾಳೆ ಹಾಗೂ ದಲಿತ ಕಲಾ ಮಂಡಳಿಯ ಶರೀಫ್ ಬಿಳಿಯಲಿ ಹಾಗೂ ಸಂಗಡಿಗರು ಹಾಡಿದರು. ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಮಹೇಶ ಪೋತದಾರ ಅವರು ಭಾರತದ ದಿವ್ಯ ಚೇತನ ಸಕಲರಿಗೂ ಸ್ಪೂರ್ತಿ ಸಿಂಚನ ಎಂಬ ಭೀಮ ಗೀತೆ ಹಾಡುವ ಮೂಲಕ ಜಾಗೃತಿಗೊಳಿಸಿದರು.
ಗದಗ ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ ಬಬರ್ಜಿ, ಜಿಲಗಲಾ ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ಬಿ ಬಿ ಅಸೂಟಿ, ಎಸ್ ಎನ್ ಬಳ್ಳಾರಿ, ಕೃಷ್ಣ ಪರಾಪೂರ, ಬಸವರಾಜ ಕಡೇಮನಿ, ದುರ್ಗೇಶ್ ವಿಭೂತಿ, ಮಾರ್ತಾಂಡಪ್ಪ, ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್, ಜಿಲ್ಲಾ ಪೊಲೀಸ ವರಿಷ್ಟಾಧಿಕಾರಿ ಬಿ.ಎಸ್.ನೇಮಗೌಡ, ಗದಗ ಬೆಟಗೇರಿ ನಗರಸಭೆ ಪೌರಾಯುಕ್ತರಾದ ರಾಜಾರಾಮ ಎಸ್ ಪವಾರ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಡಾ. ರವಿ ಗುಂಜೀಕರ, ಉಪವಿಭಾಗಾಧಿಕಾರಿ ಗಂಗಪ್ಪ ಸೇರಿದಂತೆ ಇತರರು ಇದ್ದರು.