ದೇವದಾಸಿಯರು ಹಾಗೂ ಅವರ ಕುಟುಂಬಗಳ ಸದಸ್ಯರ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘ ಹಾಗೂ ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ಮಕ್ಕಳ ಹೋರಾಟ ಸಮಿತಿಗಳು ಒಗ್ಗೂಡಿ ಗದಗ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್ ಸಿ ಮಹಾದೇವಪ್ಪ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಸಂಘದ ಜಿಲ್ಲಾಧ್ಯಕ್ಷ ಬಾಲು ರಾಠೋಡ್ ಮಾತನಾಡಿ, “ದೇವದಾಸಿಯರು ಹಾಗೂ ಅವರ ಕುಟುಂಬಗಳ ಸದಸ್ಯರ ಹಕ್ಕೊತ್ತಾಯಗಳನ್ನು ಈಡೇರಿಸುವಂತೆ ಹಲವು ಬಾರಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಮನವಿ ಸಲ್ಲಿಸಿದ್ದರೂ, ಈವರೆಗೆ ಪರಿಗಣಿಸದೇ ವಿಳಂಬ ಮಾಡುತ್ತಿರುವುದು ವಿಷಾದನೀಯ” ಎಂದರು.
“ನಿರಂತರ ಬರಗಾಲ ಹಾಗೂ ಅತಿವೃಷ್ಠಿ, ಪ್ರವಾಹ ಹಾಗೂ ಕೋವಿಡ್ ಸಂಕಷ್ಟಗಳಿಂದಾಗಿ ಈ ಕುಟುಂಬಗಳು ನಲುಗಿ ಹೋಗಿವೆ. ಪರಿಶಿಷ್ಠ ಜಾತಿ/ಪಂಗಡಗಳ ಜನಸಂಖ್ಯೆಗನುಗುಣವಾದ ಅನುದಾನವು ಪ್ರತಿ ವರ್ಷ ಸುಮಾರು ₹30,000 ಕೋಟಿಗಳಷ್ಟಿದ್ದರೂ, ನಮ್ಮ ಮಾಸಿಕ ಸಹಾಯಧನವನ್ನು ಹೆಚ್ವಳ ಮಾಡುತ್ತಿಲ್ಲ. ಅದೇ ರೀತಿ, ಗಣತಿ ಪಟ್ಟಿಯಲ್ಲಿ ಬಿಟ್ಟು ಹೋದ ಮಹಿಳೆಯರನ್ನು ಸೇರ್ಪಡೆ ಮಾಡಲು ನೆರವಾಗುತ್ತಿಲ್ಲ” ಎಂದು ಆರೋಪಿಸಿದರು.
“ಕುಟುಂಬದ ಸದಸ್ಯರನ್ನು ಗಣತಿ ಮಾಡಿ ಪುನರ್ವಸತಿ ಕಲ್ಪಿಸಲಿಲ್ಲ. ವ್ಯಾಪಕವಾಗಿ ಭೂಮಿ ಹಾಗೂ ಉದ್ಯೋಗಗಳನ್ನು ನೀಡುತ್ತಿಲ್ಲ. ಬದಲಿಗೆ ನಮ್ಮ ಸಾಲ ನೀಡಿಕೆಯ ಮೊತ್ತವನ್ನು ಕಡಿತಗೊಳಿಸಿದೆ. ಆದ್ದರಿಂದ, ನಮ್ಮ ಎಲ್ಲ ಹಕ್ಕೊತ್ತಾಯಗಳನ್ನು ಇದೇ ಬಜೆಟ್ ಅಧಿವೇಶನದಲ್ಲಿ ಪರಿಹರಿಸಲು ಒತ್ತಾಯಿಸುತ್ತೇವೆ. ಒಂದು ವೇಳೆ ನಮ್ಮಬೇಡಿಕೆಗಳು ಈಡೇರದಿದ್ದರೆ ದೊಡ್ಡ ಮಟ್ಟದಲ್ಲಿ ಪ್ರತಿಭಟಿಸಬೇಕಾಗುತ್ತದೆ” ಎಂದು ಬಾಲು ರಾಠೋಡ್ ಎಚ್ಚರಿಕೆ ನೀಡಿದರು.
“ಎಲ್ಲ ದೇವದಾಸಿಯರಿಗೆ ನೀಡಲಾಗುವ ಮಾಸಿಕ ಸಹಾಯಧನವನ್ನು ₹5,000ಕ್ಕೆ ಹೆಚ್ಚಿಸಬೇಕು. ದೇವದಾಸಿಯರ ಪರಿತ್ಯಕ್ತ ಹೆಣ್ಣು ಮಕ್ಕಳಿಗೂ ಅದನ್ನು ವಿಸ್ತರಿಸಬೇಕು. ಗಣತಿಯಲ್ಲಿ ಬಿಟ್ಟು ಹೋದ ದೇವದಾಸಿಯರನ್ನು ಗಣತಿ ಪಟ್ಟಿಯಲ್ಲಿ ಸೇರ್ಪಡೆ ಮಾಡಿ ಎಲ್ಲ ರೀತಿಯ ನೆರವನ್ನು ಒದಗಿಸಬೇಕು. ದೇವದಾಸಿಯರ ಮಕ್ಕಳ ಮತ್ತು ಕುಟುಂಬದ ಸದಸ್ಯರನ್ನು ತಕ್ಷಣವೇ ಗಣತಿ ಮಾಡಿ ಅವರಿಗೂ ಪುನರ್ವಸತಿ ಕಲ್ಪಿಸಬೇಕು” ಎಂದು ಆಗ್ರಹಿಸಿದರು.
“ಎಲ್ಲ ದೇವದಾಸಿಯರ ಮಕ್ಕಳು ಅಂತರ್ಜಾತಿ, ಸಜಾತಿ ಅಥವಾ ದೇವದಾಸಿಯರ ಕುಟುಂಬಗಳ ಸದಸ್ಯರ ನಡುವೆಯಾಗಲೀ ಮದುವೆಯಾದಲ್ಲಿ 5 ಲಕ್ಷ ರೂ. ಪ್ರೋತ್ಸಾಹ ಧನ ನೀಡಬೇಕು. ಇವರ ಮದುವೆಯ ವಿಚಾರದಲ್ಲಿ ಷರತ್ತುಗಳಿರಬಾರದು. ಕೇಂದ್ರ ಸರ್ಕಾರ ಕೂಡಲೇ ಪರಿಶಿಷ್ಟ ಜಾತಿ/ಪಂಗಡಗಳ ಜನ ಸಂಖ್ಯೆಗನುಗುಣವಾಗಿ ಅನುದಾನ ಬಿಡುಗಡೆ ಮಾಡಬೇಕು. ಅದೇ ರೀತಿ, ಎಸ್‌ಸಿ/ಎಸ್‌ಟಿ, ಟಿಎಸ್‌ಪಿ ಕಾಯ್ದೆಯನ್ನು ಜಾರಿಗೊಳಿಸಬೇಕು” ಎಂದು ಒತ್ತಾಯಿಸಿದರು.
“ಬರಗಾಲ ಹಾಗೂ ಅತಿವೃಷ್ಠಿ ಮತ್ತು ಪ್ರವಾಹದ ಹಿನ್ನೆಲೆಯಲ್ಲಿ ಎಲ್ಲ ದೇವದಾಸಿಯರ ಮತ್ತು ಅವರ ಮಕ್ಕಳ ಹಾಗೂ ಸ್ತ್ರೀಶಕ್ತಿ ಹಾಗೂ ಸ್ವಸಹಾಯ ಸಂಘಗಳ ಸಾಲ ಮನ್ನಾ ಮಾಡಬೇಕು. ದಲಿತ ಮಹಿಳೆಯರ ಸ್ತ್ರೀಶಕ್ತಿ ಹಾಗೂ ಸ್ವಸಹಾಯ ಗುಂಪುಗಳ ಸುತ್ತು ನಿಧಿಯನ್ನು 2 ಲಕ್ಷ ರೂ.ಗಳಿಗೆ ಮತ್ತು ಶೇ.75ರಷ್ಟು ಸಹಾಯಧನದ ಮತ್ತು ಉಳಿದ ಸಾಲಕ್ಕೆ ಬಡ್ಡಿ ಇರದ ಸಾಲವನ್ನು ಕನಿಷ್ಠ 50 ಲಕ್ಷ ರೂ.ಗೆ ಹೆಚ್ಚಿಸಬೇಕು” ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ದ.ಕ 1995ರ ದೌರ್ಜನ್ಯ ಪ್ರಕರಣ: ತಲೆಮರೆಸಿಕೊಂಡಿದ್ದ ಆರ್‌ಎಸ್‌ಎಸ್ ಕಾರ್ಯಕರ್ತನ ಬಂಧನದ ರೋಚಕ ಕಥೆ
“ವ್ಯವಸಾಯದಲ್ಲಿ ತೊಡಗಲು ಇಚ್ಛಿಸುವ ಎಲ್ಲ ದೇವದಾಸಿಯರು ಮತ್ತು ಅವರ ಮಕ್ಕಳಿಗೆ ತಲಾ 5 ಎಕರೆ ನೀರಾವರಿ ಜಮೀನುಗಳನ್ನು ಉಚಿತವಾಗಿ ಒದಗಿಸಬೇಕು. ಸದರಿ ಜಮೀನು ನೀಡುವ ಯೋಜನೆಯಲ್ಲಿ ಪ್ರತಿವರ್ಷ ಪ್ರತಿ ತಾಲೂಕಿಗೆ ಕನಿಷ್ಠ 500 ಎಕರೆ ಒದಗಿಸಲು ಅಗತ್ಯ ಕ್ರಮವಹಿಸಬೇಕು. ಭೂಮಿ ಖರೀದಿಸಲು ಪ್ರತಿವರ್ಷ ಕನಿಷ್ಠ ₹5,000 ಕೋಟಿ ಒದಗಿಸಬೇಕು. ರಾಜ್ಯಾದ್ಯಂತ ನಿರುಪಯೋಗಿಯಾಗಿರುವ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಡಿಯ ಕೃಷಿ ಮತ್ತಿತರ ಫಾರಂಗಳ ಜಮೀನುಗಳನ್ನು ದೇವದಾಸಿಯರ ಸಹಕಾರಿ ಬೇಸಾಯಕ್ಕೆ ಒದಗಿಸುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸಬೇಕು” ಎಂದು ಮನವಿ ಮಾಡಿದರು.
ಪ್ರತಿಭಟನೆಯಲ್ಲಿ ಸಂಘಟನೆಯ ಜಿಲ್ಲಾಧ್ಯಕ್ಷ ದೇವಮ್ಮ ಜೋಗಣ್ಣವರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯಮನವ್ವ ವಡಗೇರಿ, ರಾಜ್ಯ ಕಾರ್ಯದರ್ಶಿ ಹುಲಿಗೆಮ್ಮ ಮತೀನ, ಫಕೀರಮ್ಮ ಪೂಜಾರ, ಮಹಾದೇವಿ ಬೆಟಗೇರಿ, ಮರಿಯಮ್ಮ ಹುಲಕೋಟಿ, ಮೈಲಾರಪ್ಪ ಮಾದರ ಹಾಗೂ ಸಂಘಟನೆಯ ಮಹಿಳಾ ಕಾರ್ಯಕರ್ತರು, ದೇವದಾಸಿಯರು ಇದ್ದರು.