ಸರ್ಕಾರಿ ನೌಕರರು ತಮ್ಮ ದೈನಂದಿನ ಕರ್ತವ್ಯದಲ್ಲಿ ಪ್ರಾಮಾಣಿಕತೆ, ಸೇವಾ ಮನೋಭಾವನೆಯನ್ನು ಮೈಗೂಡಿಸಿಕೊಳ್ಳಬೇಕು. ನೌಕರರು ಸೇವಾ ಕರ್ತವ್ಯದಲ್ಲಿ ಶ್ರೇಷ್ಠ ಸಾಧನೆ ಮಾಡಬೇಕು ಎಂದು ಅಧಿಕಾರಿಗಳಿಗೆ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್ ಪಾಟೀಲ ಸೂಚನೆ ನೀಡಿದರು.
ಗದಗ ಜಿಲ್ಲಾ ಪಂಚಾಯತಿ ಕಚೇರಿಯಲ್ಲಿ ಶುಕ್ರವಾರ ನಡೆದ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.”ಸರ್ಕಾರಿ ನೌಕರಿಗೆ ಸೇರುವಾಗ ಅಪಾರ ಶ್ರಮಪಟ್ಟು ವಿದ್ಯಾಭ್ಯಾಸ ನೀಡಿ ನೌಕರಿ ಪಡೆದಿರುತ್ತೀರಿ. ಸೇರಿದ ತಕ್ಷಣ ಎಲ್ಲರಂತೆ ಸರ್ಕಾರಿ ಸೇವೆಯನ್ನು ನಿರಾಸಕ್ತಿಯಿಂದ ನಿರ್ವಹಿಸುವುದು, ಬೇಜವಾಬ್ದಾರಿ ಹಾಗೂ ಅಕ್ರಮ ವ್ಯವಹಾರದಲ್ಲಿ ತೊಡಗಿಕೊಳ್ಳುವುದನ್ನು ಬಿಟ್ಟು ಹೆತ್ತವರ ಆಶೋತ್ತರಗಳಿಗೆ ಬೆಲೆ ನೀಡಿ ಕರ್ತವ್ಯದಲ್ಲಿ ಸೇವಾ ಮನೋಭಾವನೆಯನ್ನು ಹಾಗೂ ಪ್ರಾಮಾಣಿಕತೆಯನ್ನು ನಿರಂತರವಾಗಿ ಪಾಲಿಸಬೇಕು” ಎಂದರು.
“ಸರ್ಕಾರಿ ನೌಕರಿಯನ್ನು ಪ್ರಾಮಾಣಿಕತೆಯಿಂದ ನಿರ್ವಹಿಸದೇ ಇದ್ದಲ್ಲಿ, ಭೃಷ್ಟಾಚಾರದಲ್ಲಿ ಪಾಲ್ಗೊಂಡರೆ, ಸಾರ್ವಜನಿಕರಿಗೆ ಕಿರುಕುಳ ನೀಡಿದರೆ, ಲಂಚ ಪಡೆದರೆ ಅಥವಾ ಲಂಚಕ್ಕೆ ಸರಿಸಮಾನವಾಗಿ ಬೇರೆ ಸಹಾಯ ಪಡೆದರೆ ನಿಮ್ಮ ಮೇಲೆ ದೂರುಗಳು ಖಂಡಿತವಾಗಿಯೂ ಬರುತ್ತವೆ. ಆಗ ನಿಮ್ಮನ್ನು ತನಿಖೆಗೆ ಒಳಪಡಿಸಬೇಕಾಗುತ್ತದೆ. ತನಿಖೆಯಲ್ಲಿ ತಪ್ಪಿತಸ್ಥರಾದರೆ ಅಥವಾ ಆರೋಪ ಸಾಬೀತಾದರೆ ಸರ್ಕಾರಿ ನೌಕರಿಗೆ ತೊಂದರೆಯಾಗುತ್ತದೆ ಅಲ್ಲದೇ ಸಮಾಜದಲ್ಲಿ ನಿಮ್ಮ ಗೌರವಕ್ಕೆ ನೀವೇ ಧಕ್ಕೆ ತಂದುಕೊಳ್ಳುತ್ತೀರಿ. ಆದಷ್ಟು ಕರ್ತವ್ಯದಲ್ಲಿ ಶ್ರದ್ಧೆ, ಪ್ರಾಮಾಣಿಕತೆ, ಸಹಾಯ ಮಾಡುವ ಮನೋಭಾವ ರೂಢಿಸಿಕೊಳ್ಳಬೇಕು. ಜೊತೆಗೆ ನಿಮ್ಮನ್ನು ನೀವು ಸಂಪೂರ್ಣವಾಗಿ ಸೇವೆಗೆ ಅರ್ಪಿಸಿಕೊಳ್ಳಬೇಕು” ಎಂದು ಅಧಿಕಾರಿಗಳಿಗೆ ಸೂಚಿಸಿದರು.
“ಮೂಲಭೂತ ಹಕ್ಕುಗಳಂತೆ ಮೂಲಭೂತ ಕರ್ತವ್ಯಗಳ ಪಾಲನೆ ಮಾಡಬೇಕು. ಸರ್ಕಾರಿ ನೌಕರಿ ಕಾರ್ಯ ವ್ಯಾಪ್ತಿಯಲ್ಲಿ ಶ್ರೇಷ್ಠತೆ ಕಾಯ್ದುಕೊಳ್ಳಬೇಕು. ಜೊತೆಗೆ ನಮ್ಮ ಸಹೋದ್ಯೋಗಿಗಳಿಗೂ ಈ ಕುರಿತು ತಿಳುವಳಿಕೆ ನೀಡಬೇಕು. ಅಡಿಕೆ ಕದ್ದರೂ ಕಳ್ಳ ಆನೆ ಕದ್ದರೂ ಕಳ್ಳ ಎಂಬುದನ್ನು ಅರಿತು ಕರ್ತವ್ಯ ನಿರ್ವಹಣೆ ಮಾಡಬೇಕು” ಎಂದರು.
“ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ತಮ್ಮ ಕಾರ್ಯವ್ಯಾಪ್ತಿಯಲ್ಲಿ ಬರುವ ಪ್ರತಿ ಹಳ್ಳಿ, ಮನೆ ಮನೆಗಳಲ್ಲಿಯೂ ಶೌಚಾಲಯ ನಿರ್ಮಾಣದ ಗುರಿಯನ್ನು ಸಾಧಿಸಬೇಕು. ಜೊತೆಗೆ ಸಾರ್ವಜನಿಕರಿಗೆ ಇರುವ ಅನುದಾನದಲ್ಲಿಯೇ ಉತ್ತಮ ಸೇವೆಗಳನ್ನು ಮೂಲ ಸೌಕರ್ಯಗಳನ್ನು ಒದಗಿಸಬೇಕು. ಶೌಚಾಲಯ ಇಲ್ಲದಿದ್ದರೆ ಏನಾಗುತ್ತದೆ ಎಂಬುದನ್ನು ಸರಿಯಾಗಿ ಜನಸಾಮಾನ್ಯರಿಗೆ ಅರ್ಥವಾಗುವ ಭಾಷೆಯಲ್ಲಿ ತಿಳುವಳಿಕೆ ಹೇಳಿ ಶೌಚಾಲಯ ನಿರ್ಮಿಸಿಕೊಂಡು ಅದನ್ನು ಬಳಸುವ ಕುರಿತು ಮನವರಿಕೆ ಮಾಡಿಕೊಡಬೇಕು” ಎಂದರು.
ತಹಶೀಲ್ದಾರರು ತಮ್ಮ ಕಾರ್ಯವ್ಯಾಪ್ತಿಯಲ್ಲಿರುವ ಪ್ರಕರಣಗಳನ್ನು ಆದ್ಯತೆ ಮೇರೆಗೆ ಪೂರ್ಣಗೊಳಿಸಬೇಕು. ರೈತರಿಗೆ ವಿನಾಕಾರಣ ಕಚೇರಿಗೆ ಅಲೆದಾಡಿಸುವುದನ್ನು ತಪ್ಪಿಸಿ, ಸಾಧ್ಯವಾದಲ್ಲಿ ತಾವುಗಳೇ ರೈತರ ಮನೆಗಳಿಗೆ ತೆರಳಿ ಸೇವೆ ನೀಡಬೇಕು. ಶಾಲೆಗಳಲ್ಲಿ ಶುದ್ಧ ಬೆಳಕು, ಗಾಳಿ, ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸಿ ನೈತಿಕ ಶಿಕ್ಷಣ ನೀಡಬೇಕು. ಜಿಲ್ಲಾಸ್ಪತ್ರೆ ಸೇರಿದಂತೆ ಜಿಲ್ಲೆಯ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಸ್ವಚ್ಛತೆಗೆ ಗಮನ ಕೊಡಬೇಕು. ಸಮಾಜದ ಎಲ್ಲ ವರ್ಗದ ಜನರಿಗೂ ಉತ್ತಮ ಆರೋಗ್ಯ ಸೇವೆಗಳು ತಲುಪಬೇಕು” ಎಂದು ತಿಳಿಸಿದರು.
ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಸುಶೀಲಾ ಬಿ, ಜಿಲ್ಲಾ ಪೊಲೀಸ ಅಧೀಕ್ಷಕ ಬಿ.ಎಸ್. ನೇಮಗೌಡ ಅವರು ಜಿಲ್ಲೆಯ ಕಾರ್ಯವ್ಯಾಪ್ತಿ ಹಾಗೂ ಪ್ರಮುಖ ವಿಷಯಗಳ ಕುರಿತು ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ ಅವರಿಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಲೋಕಾಯುಕ್ತ ಅಧೀಕ್ಷಕ ಸತೀಶ ಎಸ್ ಚಿಟಗುಬ್ಬಿ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕೆ. ಗುರುಪ್ರಸಾದ ಸೇರಿದಂತೆ ಜಿಲ್ಲಾ ಮಟ್ಟದ ಎಲ್ಲ ಅಧಿಕಾರಿಗಳು ಹಾಜರಿದ್ದರು.