ಗದಗ ಜಿಲ್ಲೆಯ ರೋಣ ತಾಲೂಕಿನ ಇಟಗಿ ಬಸ್ ನಿಲ್ದಾಣವು ಅಧಿಕಾರಿಗಳ ನಿರ್ಲಕ್ಷದಿಂದ ಸ್ವಚ್ಛತೆಯಿಲ್ಲದೇ ಹಾಳಾಗಿತ್ತು. ಅನೈತಿಕ ಚಟುವಟಿಕೆಗಳು ಹಾಗೂ ಬಸ್ ನಿಲ್ದಾಣ ಉಳ್ಳಾಗಡ್ಡಿ ಕಣವಾಗಿ ಮಾರ್ಪಟ್ಟಿತ್ತು. ಇದನ್ನು ಗಮನಿಸಿದ ಈ ದಿನ ಡಾಟ್ ಕಾಮ್ “ಅಧಿಕಾರಿಗಳ ನಿರ್ಲಕ್ಷ : ಉಳ್ಳಾಗಡ್ಡಿ ಕಣವಾಗಿ ಮಾರ್ಪಟ್ಟ ಇಟಗಿ ಬಸ್ ನಿಲ್ದಾಣ” ಎಂಬ ಶೀರ್ಷಿಕೆಯಡಿಯಲ್ಲಿ ವಿಶೇಷ ವರದಿಯನ್ನು ಡಿಸೆಂಬರ್ 11ರಂದು ಪ್ರಕಟಿಸಿತ್ತು.
ವರದಿ ಪ್ರಕಟವಾದ ಬೆನ್ನಲ್ಲೇ ಅಧಿಕಾರಿಗಳು ಎಚ್ಚೆತ್ತ ವಾಯವ್ಯ ರಸ್ತೆ ಸಾರಿಗೆ ಸಂಸ್ಥೆಯ ಗದಗ ವಿಭಾಗದ ಅಧಿಕಾರಿಗಳು, 24 ಗಂಟೆಯೊಳಗೆ ಸ್ವಚ್ಛ ಮಾಡಿಸಿದ್ದಲ್ಲದೇ, ಇಟಗಿ ಬಸ್ ನಿಲ್ದಾಣವನ್ನು ಸಾರ್ವಜನಿಕರ ಅನುಕೂಲವಾಗುವಂತೆ ವ್ಯವಸ್ಥೆ ಮಾಡಿದ್ದಾರೆ.
ಸರ್ಕಾರ ಪ್ರಯಾಣಿಕರ ಅನುಕೂಲಕ್ಕಾಗಿ ಲಕ್ಷಾಂತರ ಹಣ ಖರ್ಚು ಮಾಡಿ ಬಸ್ ನಿಲ್ದಾಣಗಳನ್ನು ನಿರ್ಮಿಸುತ್ತದೆ. ಸಂಬಂಧಪಟ್ಟ ಅಧಿಕಾರಿಗಳು ನಿರ್ವಹಣೆ ಮಾಡಲು ನಿರಾಸಕ್ತಿ ತೋರುತ್ತಿರುವುದರಿಂದ ಅನೈತಿಕ ಚಟುವಟಿಕೆಗಳ ತಾಣವಾಗಿಯೂ ಮಾರ್ಪಡುತ್ತಿದೆ. ಸಾರ್ವಜನಿಕರ ಉಪಯೋಗಕ್ಕೆಂದು ಬಸ್ ನಿಲ್ದಾಣ ನಿರ್ಮಿಸಿದರೆ, ಅದು ಉಪಯೋಗಕ್ಕೆ ಬಾರದ ಸ್ಥಿತಿಗೆ ತಲುಪಿತ್ತು. ಬಸ್ ನಿಲ್ದಾಣ ಅವ್ಯವಸ್ಥೆ ಆಗಿರುವುದರಿಂದ ಬೇರೆ ಕಡೆ ಬಸ್ಸುಗಳು ನಿಲ್ಲುತ್ತಿದ್ದವು. ಬಸ್ ನಿಲ್ದಾಣದ ಆವರಣದಲ್ಲಿ ಎಲ್ಲೆಂದರಲ್ಲಿ ಕಸ ಕಡ್ಡಿ ಬೆಳೆದು ನಿಂತಿದ್ದವು. ಬಸ್ ನಿಲ್ದಾಣ ಉಪಯೋಗಕ್ಕೆ ಬಾರದೆ ಇರುವುದರಿಂದ ರೈತರು ಉಳ್ಳಾಗಡ್ಡಿ ಹಾಕಿದ್ದಾರೆ. ದನಕರುಗಳು ಬಿಡು ಬಿಟ್ಟಿರುತ್ತವೆ. ದುರ್ವಾಸನೆ ಬಿರುತ್ತಿತ್ತು. ಇದರಿಂದ ಬಸ್ ನಿಲ್ದಾಣ ಹಾಳು ಕೊಂಪೆಯಾಗಿತ್ತು.

ಸರಿಯಾದ ನಿರ್ವಹಣೆ ಇಲ್ಲದೇ ಇರುವುದರಿಂದ ಈ ಬಸ್ ನಿಲ್ದಾಣ ಕುಡುಕರ ತಾಣವಾಗಿತ್ತು. ರಾತ್ರಿಯಾದರೆ ಕುಡುಕರು ಬಸ್ ನಿಲ್ದಾಣಕ್ಕೆ ಬಂದು ಕುಡಿಯುತ್ತಾರೆ. ಇದರಿಂದ ಎಲ್ಲೆಂದರಲ್ಲಿ ಸಾರಾಯಿ ಪಾಕೇಟುಗಳು, ಬಾಟಲಿಗಳು, ಪೌಚುಗಳು ಕಾಣುತ್ತಿದವು.
ಈ ದಿನ ಡಾಟ್ ಕಾಮ್ ಇಟಗಿ ಬಸ್ ನಿಲ್ದಾಣ ಅವ್ಯವಸ್ಥೆ ಕುರಿತು ವಿಸ್ತ್ರತ ವರದಿ ಪ್ರಕಟಿಸಿದ ಬೆನ್ನಲ್ಲೆ, ಸಂಬಂಧಪಟ್ಟ ವಾಯವ್ಯ ರಸ್ತೆ ಸಾರಿಗೆ ಸಂಸ್ಥೆಯ ಗದಗ ವಿಭಾಗದ ಅಧಿಕಾರಿಗಳ ಗಮನಕ್ಕೂ ತಂದಿತ್ತು. ಇದಕ್ಕೆ ಸ್ಪಂದಿಸಿರುವ ಅಧಿಕಾರಿಗಳು, ಡಿ.12ರಂದು ಬಸ್ ನಿಲ್ದಾಣವನ್ನು ಸ್ವಚ್ಛಗೊಳಿಸಿದ್ದಾರೆ. ಹೊರಗಡೆಯೇ ನಿಲ್ಲುತ್ತಿದ್ದ ಪ್ರತಿಯೊಂದು ಬಸ್ಸುಗಳು ಈಗ ಬಸ್ ನಿಲ್ದಾಣದೊಳಗೆ ಬಂದು ಹೋಗುತ್ತಿವೆ. ಬಸ್ ನಿಲ್ದಾಣ ಸ್ವಚ್ಛಗೊಳಿಸಿರುವ ಫೋಟೋಗಳನ್ನು ಕೂಡ ಈ ದಿನ ಡಾಟ್ ಕಾಮ್ ಕಚೇರಿಗೂ ಕಳುಹಿಸಿದ್ದಾರೆ.
ಇದನ್ನು ಓದಿದ್ದೀರಾ? ಬೆಳಗಾವಿ ಅಧಿವೇಶನ | ಚರ್ಚೆಗೆ ಬಾರದ ಗಡಿ ವಿವಾದ: ಎಂಇಎಸ್ ತಕರಾರಿಗೆ ಪರಿಹಾರ ಯಾವಾಗ?
ಈ ಬಗ್ಗೆ ಈ ದಿನ ಡಾಟ್ ಕಾಮ್‌ನೊಂದಿಗೆ ಗ್ರಾಮ ಪಂಚಾಯತ್ ಸದಸ್ಯ ಸಿದ್ದಪ್ಪ ಮಾತನಾಡಿ, “ಈ ಹಿಂದೆ ಬಸ್ಸುಗಳು ಬಸ್ ನಿಲ್ದಾಣದ ಒಳಗಡೆಯೇ ಹಾದು ಹೋಗುತ್ತಿದ್ದವು. ಸರಿಯಾದ ನಿರ್ವಹಣೆ ಇಲ್ಲದೆ ಕಸ ಕಂಟಿ, ಬೆಳೆದು ಕುಡುಕರ ಅಡ್ಡವಾಗಿ ಮಾರ್ಪಟ್ಟಿತ್ತು. ಈ ದಿನ ಡಾಟ್ ಕಾಮ್ ವರದಿ ಬೆನ್ನಲೇ ಅಧಿಕಾರಿಗಳು ಎಚ್ಚೆತ್ತು ಇಡೀ ಬಸ್ ನಿಲ್ದಾಣವನ್ನು ಸ್ವಚ್ಛತೆಗೊಳಿಸಿ ಮೊದಲಿನಂತೆಯೇ ಆಗಿದೆ. ವರದಿ ಮಾಡುವ ಮೂಲಕ ಅಧಿಕಾರಿಗಳ ಗಮನಕ್ಕೆ ತಂದಿದ್ದಕ್ಕೆ ಈ ದಿನ ಡಾಟ್ ಕಾಮ್‌ಗೆ ಗ್ರಾಮಸ್ಥರ ಪರವಾಗಿ ಧನ್ಯವಾದಗಳನ್ನು ತಿಳಿಸುತ್ತೇನೆ” ಎಂದು ಸಂತಸ ವ್ಯಕ್ತಪಡಿಸಿದ್ದಾರೆ.




ಶರಣಪ್ಪ ಎಚ್ ಸಂಗನಾಳ
ಗದಗ ಜಿಲ್ಲೆಯ ರೋಣ ತಾಲೂಕಿನ ಸವಡಿ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ. ಧ್ವನಿ ಶೈಕ್ಷಣಿಕ ಸಂಪನ್ಮೂಲ ಕೇಂದ್ರದಲ್ಲಿ ಒಂದಷ್ಟು ಕಾಲ ಕೆಲಸ. ಸದ್ಯ 'ಈ ದಿನ.ಕಾಮ್'ನಲ್ಲಿ ಮೀಡಿಯಾ ಕೋಆರ್ಡಿನೇಟರ್. ಓದು, ಪಕ್ಷಿ ವೀಕ್ಷಣೆ, ಕೃಷಿಯಲ್ಲಿ ಆಸಕ್ತಿ.
ಶಭಾಷ್.