ಮತದಾನ ಎಂಬುದು ಪ್ರತಿ ಭಾರತೀಯನ ಹಕ್ಕು ಆಗಿದೆ. ಅದನ್ನು ಸ್ವಯಂ ಪ್ರೇರಿತವಾಗಿ ಚಲಾವಣೆ ಮಾಡುವಂತಾಗಬೇಕು, ಮತದಾನದ ದಿನವಾದ ಮೇ-07 ರಂದು ಕಡ್ಡಾಯವಾಗಿ ತಪ್ಪದೇ ಮತ ಚಲಾಯಿಸಬೇಕೆಂದು, ನರಗುಂದ-68 ಸಹಾಯಕ ಚುನಾವಣಾಧಿಕಾರಿ ಡಾ. ಹಂಪಣ್ಣ ಸಜ್ಜನ್ ಅವರು ತಿಳಿಸಿದರು.
ಲೋಕಸಭಾ ಚುನಾವಣೆ-2024ರ ಅಂಗವಾಗಿ ಭಾರತ ಚುನಾವಣಾ ಆಯೋಗದ ನಿರ್ದೇಶನದ ಮೇರೆಗೆ ಗದಗ ಜಿಲ್ಲೆಯ ನರಗುಂದ ತಾ.ಪಂ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿ ಹಾಗೂ ಆರೋಗ್ಯ ಇಲಾಖೆ ಇವರ ಸಹಯೋಗದಲ್ಲಿ ನರಗುಂದ ತಾಲೂಕಿನ ಶಿರೋಳ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚುನಾವಣಾ ಜಾಗೃತ ಜಾಥಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ಚುನಾವಣಾ ಜಾಗೃತಿ ಕುರಿತು ಚುನಾವಣಾ ಆಯೋಗದಿಂದ 2 ನಿಮಿಷಗಳ ವಿಡಿಯೋ ಚಿತ್ರಣ ಕೂಡಾ ಪ್ರಚುರ ಪಡಿಸಲಾಯಿತು. ತಾ,ಪಂ ಕಾರ್ಯನಿರ್ವಾಹಕ ಅಧಿಕಾರಿ ಸೋಮಶೇಖರ ಬಿರಾದರ, ಶಿಶು ಅಭಿವೃದ್ದಿ ಯೋಜನಾಧಿಕಾರಿ ಪ್ರದೀಪ ನಾಡಗೇರ, ವ್ಯದ್ಯಾಧಿಕಾರಿ ಡಾ .ಪಂಕಜಾ ಮೈತ್ರಿ, ಪಿಡಿಒ ವಾಯ್.ಬಿ.ಸಂಕನಗೌಡ್ರ, ಮೇಲ್ವಿಚಾರಕಿಯರು, ಅಂಗನವಾಡಿ ಕಾರ್ಯಕರ್ತೆಯರು, ಆರೋಗ್ಯ ಇಲಾಖೆ ಸಿಬ್ಬಂದಿ, ಪಂಚಾಯತ ಸಿಬ್ಬಂದಿ ಹಾಜರಿದ್ದರು.
