ಪ್ರತಿಯೊಬ್ಬರಿಗೂ ಸಂವಿಧಾನದ ಪೀಠಿಕೆಯ ಕುರಿತು ತಿಳುವಳಿಕೆ ಇರುವುದು ಅಗತ್ಯವಾಗಿದೆ ಎಂದು ಕೇರಳದ ಲೋಕಲ್ ಸೆಲ್ಫ್ ಗವರ್ನಮೆಂಟ್‍ನ ಜಂಟಿ ನಿರ್ದೇಶಕ ಸುದೇಶ್ ಅವರು ತಿಳಿಸಿದರು.
ಗದಗ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ ಸಹಯೋಗದಲ್ಲಿ ನಗರದ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ಸಂವಿಧಾನ ಪೀಠಿಕೆ ಹಾಗೂ ಆಶಯದ ಕುರಿತು ಹಮ್ಮಿಕೊಂಡಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
“ಕೇರಳ ರಾಜ್ಯದ ಕೊಲ್ಲಂ ಜಿಲ್ಲೆ ಪ್ರತಿ ಮನೆಗಳಿಗೆ ಸಂವಿಧಾನವನ್ನು ತಿಳಿಸಿ ಸಂವಿಧಾನದ ಸಾಕ್ಷರತೆ ಸಾಧಿಸಿದ ಏಕೈಕ ಜಿಲ್ಲೆಯಾಗಿದೆ. ನಮ್ಮ ದೇಶದಲ್ಲಿ ಗದಗ ಜಿಲ್ಲೆಯಲ್ಲಿ ಸಂವಿಧಾನದ ಸಾಕ್ಷರತೆಯನ್ನು ಸಾಧಿಸಿ ಕರ್ನಾಟಕದಲ್ಲಿ ಪ್ರಥಮ ಸ್ಥಾನದಲ್ಲಿರಬೇಕು. ಇಡೀ ಭಾರತ ದೇಶಕ್ಕೆ ಸ್ಪೂರ್ತಿ ಕೊಡುವಂತಹದ್ದಾಗಬೇಕು. 10 ವರ್ಷದ ಮಕ್ಕಳಿಂದ ಎಲ್ಲ ವಯಸ್ಸಿನವರಿಗೂ ಸಂವಿಧಾನದ ಪೀಠಿಕೆಯ ಬಗ್ಗೆ ತಿಳಿದಿರಬೇಕು” ಎಂದರು.
“ಸಂವಿಧಾನ ಜಾರಿಯಾದ ಬಳಿಕ ಎಲ್ಲರಿಗೂ ಘನತೆ ಹಾಗೂ ವ್ಯಕ್ತಿತ್ವ ತಂದುಕೊಟ್ಟಿತು. ಅದಕ್ಕಾಗಿ ಸಂವಿಧಾನವು ನಮ್ಮದು ಎನ್ನುವ ಮನೋಭಾವವನ್ನು ನಾವೆಲ್ಲರೂ ಹೊಂದಬೇಕು. ಇದರ ವೈಶಿಷ್ಟ್ಯಗಳು ನಮಗೆಲ್ಲ ಗೌರವ ತಂದುಕ್ಕೊಟ್ಟಿದಕ್ಕಾಗಿ ಈ ಸಂವಿಧಾನದ ಪ್ರಣಾಳಿಕೆಯನ್ನು ಭಾರತದ ಪ್ರತಿಯೊಬ್ಬರೂ ಅರಿತುಕೊಳ್ಳಬೇಕು” ಎಂದರು.
“ಸಂವಿಧಾನವನ್ನು ಸಾಮಾಜಿಕವಾಗಿ ಮತ್ತು ಸಾರ್ವಜನಿಕ ಸಂಘ ಸಂಸ್ಥೆಗಳಲ್ಲಿ ಆಚರಿಸಬೇಕು. ಸರ್ಕಾರಿ ಶಾಲೆ, ಕಚೇರಿ ಹಾಗೂ ಸಂಸ್ಥೆಗಳಲ್ಲಿ, ಮನೆ ಮನೆಗಳಲ್ಲಿ ಸಂವಿಧಾನದ ಪೀಠಿಕೆಯ ಕಿರು ಪುಸ್ತಕವನ್ನು ಇಡಬೇಕು” ಎಂದು ಸೂಚಿಸಿದರು.
“ಸಂವಿಧಾನ ನಮಗೆ ಗೌರವ, ಘನತೆ, ಸ್ಥಾನಮಾನ, ಅಧಿಕಾರವನ್ನು ಕೊಟ್ಟಿದೆ. ಈ ಸಂವಿಧಾನದಿಂದ ಅನೇಕ ಜನ ತಮ್ಮ ಅಮೂಲ್ಯವಾದ ಜೀವನವನ್ನು ಜೈಲಿನಲ್ಲಿ ಕಳೆದಿದ್ದಾರೆ. ಜನ ಬ್ರಿಟೀಷರ ಲಾಠಿ ಏಟು ಹಾಗೂ ಗುಂಡೇಟುಗಳಿಗೆ ತಮ್ಮ ಪ್ರಾಣವನ್ನು ತ್ಯಾಗಮಾಡಿದ್ದಾರೆ. ತ್ಯಾಗದ ಪ್ರತಿಫಲವಾಗಿ ಇಂದು ಭಾರತೀಯ ಸಂವಿಧಾನ ಪೀಠಿಕೆಯನ್ನು ಹೊಂದಲು ಸಾಧ್ಯವಾಯಿತು” ಎಂದರು.
“ಮೂಲ ತತ್ವಗಳಾದ ಸಮಾನತೆ, ಸ್ವಾತಂತ್ರ್ಯ ಮತ್ತು ಅನುಕಂಪ ಇವುಗಳು ಪೀಠಿಕೆಯಲ್ಲಿವೆ. ಈ ಮೂರೂ ತತ್ವಗಳು ನಮ್ಮ ಬದುಕನ್ನು ರೂಪಿಸಿಕೊಟ್ಟಿವೆ. ಸಂವಿಧಾನ ರಚನೆಗೂ ಮುನ್ನ ಜಗತ್ತಿನ ಶ್ರೇಷ್ಠ ಸಂವಿಧಾನಗಳ ಅಧ್ಯಯನ ಮಾಡಿ ನಮ್ಮ ಸಂವಿಧಾನವನ್ನು ರಚಿಸಲಾಗಿದೆ. ನಾವು ದೇವರ ಕೋಣೆಯಲ್ಲಿ ಹೇಗೆ ದೇವರ ಫೋಟೋವನ್ನು ಪೂಜಿಸುತ್ತೇವೆಯೋ ಹಾಗೆಯೇ ಸಂವಿಧಾನ ಪುಸ್ತಕವನ್ನು ಪೂಜಿಸಬೇಕು. ಈ ಪೂಜೆಯನ್ನು ನಮ್ಮ ಕೇರಳ ರಾಜ್ಯದ ಕೋಳಂ ಎಂಬ ಊರಿನಲ್ಲಿ ಈಗಲೂ ಕಾಣಬಹುದಾಗಿದೆ” ಎಂದು ಹೇಳಿದರು.
ಜಿಲ್ಲಾಧಿಕಾರಿ ವೈಶಾಲಿ ಎಂ ಎಲ್ ಕಾರ್ಯಕ್ರಮದ ಅದ್ಯಕ್ಷತೆ ವಹಿಸಿ ಮಾತನಾಡಿ, “ಸಂವಿಧಾನವೇ ನಮ್ಮ ಉಸಿರು. ಇದು ಎಲ್ಲರಿಗೂ ಸ್ವತಂತ್ರವಾಗಿ ಬದುಕಲು ಅವಕಾಶವನ್ನು ಕಲ್ಪಿಸಿಕೊಟ್ಟಿದೆ. ನಮ್ಮ ದೇಶದಲ್ಲಿ ವಿದ್ಯಾಭ್ಯಾಸ, ಸರ್ಕಾರಿ ಕೆಲಸ, ರಾಜಕೀಯ ಮತ್ತು ವಿಶೇಷವಾಗಿ ಮಹಿಳೆಯರಿಗೆ ಹೆಚ್ಚಿನ ಪ್ರಮಾಣದಲ್ಲಿ ಆಧ್ಯತೆ ನೀಡಿರುವುದು ನಮ್ಮ ಸಂವಿಧಾನದಿಂದಲೇ. ಕೇರಳ ರಾಜ್ಯದ ಕೊಲ್ಲಂ ಜಿಲ್ಲೆಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ನಮ್ಮ ಗದಗ ಜಿಲ್ಲೆಯಲ್ಲಿ ಪ್ರತಿಯೊಂದು ಮನೆ ಮನೆಯಲ್ಲಿ ಸಂವಿಧಾನ ಪೀಠಿಕೆಯ ಕಿರು ಪುಸ್ತಕವನ್ನು ಪ್ರತಿದಿನ ಜಿಲ್ಲೆಯ ಜನರು ಹೆಚ್ಚಿನ ಪ್ರಮಾಣದಲ್ಲಿ ಓದುವುದರಿಂದ ನಮ್ಮ ಜಿಲ್ಲೆ ರಾಜ್ಯಕ್ಕೆ ಪ್ರಥಮಸ್ಥಾನ ಪಡೆಯುವ ಹಾಗೆ ಆಗಬೇಕು” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಉಪನ್ಯಾಸ ಕಾರ್ಯಕ್ರಮದ ಉದ್ಘಾಟನೆ ನಂತರ ಸಂವಿಧಾನದ ಪೀಠಿಕೆಯ ಕುರಿತು ಪ್ರತಿಜ್ಞಾ ವಿಧಿ ಬೋಧಿಸಿದರು. ಹುಲಕೋಟಿಯ ಸಹಕಾರ ರೇಡಿಯೋ ನಿರ್ದೇಶಕ ಜೆ ಕೆ ಜಮಾದರ ಅವರು ಸಂವಿಧಾನದ ಉಪನ್ಯಾಸವನ್ನು ಕನ್ನಡ ಭಾಷೆಗೆ ಅನುವಾದ ಮಾಡಿದರು.
ಈ ಸುದ್ದಿ ಓದಿದ್ದೀರಾ? ಬೆಳಗಾವಿ | ಹಿಂಡಲಗಾ ಜೈಲು ಸ್ಫೋಟಿಸುವ ಬೆದರಿಕೆ; ಆರೋಪಿಯ ಗುರುತು ಪತ್ತೆ ಹಚ್ಚಿದ ಪೊಲೀಸರು
ಕಾರ್ಯಕ್ರಮದಲ್ಲಿ ಗದಗ ಬೆಟಗೇರಿ ನಗರ ಸಭೆ ಅದ್ಯಕ್ಷೆ ಉಷಾ ದಾಸರ, ಉಪಾಧ್ಯಕ್ಷೆ ಸುನಂದಾ ಬಾಕಳೆ, ಮಾಜಿ ಶಾಸಕ ಡಿ ಆರ್ ಪಾಟೀಲ, ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ ಎಂ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಸಿ ಆರ್ ಮುಂಡರಗಿ, ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ತಾರಾಮಣಿ, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ ರವಿ ಗುಂಜೀಕರ, ಕನ್ನಡ ಮತ್ತು ಸಂಸ್ಕೃತ ಇಲಾಖೆಯ ಸಹಾಯಕ ನಿರ್ದೇಶಕ ವೀರಯ್ಯಸ್ವಾಮಿ ಬಿ, ಜಿಲ್ಲಾ ಅಂಗವಿಕಲ ಹಾಗೂ ಹಿರಿಯ ನಾಗರಿಕರ ಇಲಾಖೆಯ ಸಹಾಯಕ ನಿರ್ದೇಶಕ ಮಹಾಂತೇಶ ಕೆ, ನಗರಸಭೆ, ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು ಸೇರಿದಂತೆ ಹಲವು ಇಲಾಖೆಯ ಅಧಿಕಾರಿಗಳು ಇದ್ದರು.