ಕೊಳವೆ ಬಾವಿಗಳನ್ನು ನಂಬಿಕೊಂಡು ಶೇಂಗಾ ಬಿತ್ತಿದ್ದ ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ರೈತರು ಅಂತರ್ಜಲ ಕುಸಿತದಿಂದ ಬೆಳೆಗೆ ನೀರು ಸಾಲದೆ ಹೊಲಗಳನ್ನು ಉಳುಮೆ ಮಾಡಿ, ನೆಲಸಮ ಮಾಡುತ್ತಿದ್ದಾರೆ.
ಕೊಳವೆ ಬಾವಿ ಸೌಲಭ್ಯ ಇರುವ ರೈತರು ನೂರಾರು ಹೆಕ್ಟೇರ್‌ನಲ್ಲಿ ಬೇಸಿಗೆ ಶೇಂಗಾ ಬಿತ್ತಿದ್ದರು. ಲಕ್ಷ್ಮೆಶ್ವರದ ರೈತ ಸಂಪರ್ಕ ಕೇಂದ್ರದಿಂದ ಈ ವರ್ಷ 550 ಕ್ವಿಂಟಲ್ ಶೇಂಗಾ ಬೀಜ ಮಾರಾಟ ಮಾಡಲಾಗಿತ್ತು. ಅದರಂತೆ ರೈತರು ಕಷ್ಟಪಟ್ಟು ಶೇಂಗಾ ಬಿತ್ತನೆ ಕೂಡ ಮಾಡಿದ್ದರು. ಆದರೆ, ಈಗ ಕೊಳವೆಬಾವಿಗಳು ಬತ್ತುವ ಹಂತಕ್ಕೆ ಬಂದಿದ್ದು ಶೇಂಗಾ ಬೆಳೆಗೆ ನೀರು ಸಾಲದಾಗಿದೆ.
ಹೀಗಾಗಿ ಬಿತ್ತಿದ್ದ ಬೆಳೆಯನ್ನು ರೈತರು ಉಳುಮೆ ಮಾಡಿ, ನೆಲಸಮ ಗೊಳಿಸಿದ್ದಾರೆ. ತಾಲೂಕಿನಾದ್ಯಂತ ಒಟ್ಟು 4,592 ಕೊಳವೆ ಬಾವಿಗಳು ಇವೆ. ಲಕ್ಷ್ಮೇಶ್ವರ ಸಮೀಪದ ಉಂಡೇನಹಳ್ಳಿ ಗ್ರಾಮದಲ್ಲಿ ರೈತರು ಬರೋಬ್ಬರಿ 450ಕ್ಕೂ ಕೊಳವೆ ಬಾವಿಗಳನ್ನು ಕೊರೆಸಿದ್ದಾರೆ. ಈ ಬಾರಿಯ ಮುಂಗಾರು ಮತ್ತು ಹಿಂಗಾರು ಮಳೆಗಳು ಸರಿಯಾಗಿ ಆಗದ ಕಾರಣ ಅಂತರ್ಜಲಮಟ್ಟ ದಿನದಿಂದ ದಿನಕ್ಕೆ ಪಾತಾಳಕ್ಕೆ ಕುಸಿಯುತ್ತಿದೆ.
ಕೊಳವೆ ಬಾವಿಗಳನ್ನೇ ನೆಚ್ಚಿದ್ದ ರೈತರ ಭಲವೇ ಕುಸಿದಂತಾಗಿದೆ. ಶೇಂಗಾ ಬಿತ್ತನೆಗೆ ರೈತರು ಸಾವಿರಾರು ರೂಪಾಯಿ ಖರ್ಚು ಮಾಡಿದ್ದಾರೆ. ಈಗ ನೀರಿಲ್ಲದೆ ರೈತರಲ್ಲಿ ಆತಂಕ ಮನೆಮಾಡಿದೆ. ಬೋರ್‌ವೆಲ್‌ಗಳನ್ನು ನಂಬಿ ಸಾಲಸೋಲ ಮಾಡಿ ಬೀಜ ತಂದು ಶೇಂಗಾ ಬಿತ್ತಿದ್ದೇವು ಈಗ ಬೆಳೆಕೈಗೆ ಬರದೆ ಸಂಕಷ್ಟಕ್ಕೆ ಸಿಲುಕಿದ್ದೇವೆ ಎನ್ನುತ್ತಿದ್ದಾರೆ ತಾಲೂಕಿನ ರೈತರು.