“ಬಗರ್‌ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ನೀಡಬೇಕು ಎಂದು ಒತ್ತಾಯಿಸಿ ರೈತರು ನಾಲ್ಕು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ, ಆಡಳಿತ ಈವರೆಗೆ ಸ್ಪಂದಿಸಿಲ್ಲ” ಎಂದು ಜೆಡಿಎಸ್ ರಾಜ್ಯ ವಕ್ತಾರ ವೆಂಕನಗೌಡ ಗೋವಿಂದಗೌಡ್ರ ಕಿಡಿಕಾರಿದರು.
ಗದಗ ಜಿಲ್ಲಾಡಳಿತ ಕಚೇರಿ ಎದುರು ಉತ್ತರ ಕರ್ನಾಟಕ ಮಹಾಸಭಾ ವತಿಯಿಂದ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ಬಗರ್ ಹುಕುಂ ಸಾಗುವಳಿದಾರರ ಅಹೋರಾತ್ರಿ ಧರಣಿಗೆ ಶುಕ್ರವಾರ ಬೆಂಬಲ ನೀಡಿ ಮಾತನಾಡಿದರು.
“ಜೆಡಿಎಸ್ ಪಕ್ಷ ಮಾತ್ರ ರೈತರ ಹಿತ ಕಾಯುತ್ತ ಬಂದಿದೆ. ಮುಂದೆಯೂ ಕಾಯುತ್ತದೆ. ರೈತರನ್ನು ಸಂತೈಸಲು ಕೇವಲ ಭಾಷಣ ಮಾಡಿ ಹೋದರೆ ಆಗುವುದಿಲ್ಲ. ರೈತರ ಬಗ್ಗೆ ಕಾಳಜಿ ಇದ್ದರೆ ಅವರ ಸಮಸ್ಯೆಗಳಿಗೆ ಸ್ಪಂದಿಸಿ, ಪರಿಹಾರ ನೀಡಬೇಕು. ಚುನಾವಣೆಗೆ ಮುಂಚೆ ಜಿಲ್ಲಾ ಉಸ್ತುವಾರಿ ಸಚಿವರು ನೀಡಿದ ಭರವಸೆಯನ್ನು ಈಡೇರಿಸಬೇಕ” ಎಂದು ಆಗ್ರಹಿಸಿದರು.
“ಜಗತ್ತಿನಲ್ಲಿ ಯಾವುದೇ ಸಮಸ್ಯೆ ಎದುರಾದರೂ ಅದು ಮೊದಲು ತಟ್ಟುವುದೇ ರೈತರಿಗೆ. ರೈತ ಎಲ್ಲವನ್ನು ನುಂಗಿಕೊಂಡು ಯಾವುದೇ ಜಾತಿ, ಮತ, ಭೇದವಿಲ್ಲದೆ ತನ್ನ ಕಾಯಕದ ಮೂಲಕ ಜನರ ಹೊಟ್ಟೆ ತುಂಬಿಸುತ್ತಿದ್ದಾನೆ. ರೈತರ ಸಮಸ್ಯೆ ಕುರಿತಾಗಿ ಪಕ್ಷದ ವರಿಷ್ಠರೊಂದಿಗೆ ಚರ್ಚಿಸಿ ಈ ಹೋರಾಟಕ್ಕೆ ಜಯ ಸಿಗಲು ನೆರವಾಗುತ್ತೇವೆ” ಎಂದು ಭರವಸೆ ನೀಡಿದರು.
ಜೆಡಿಎಸ್ ಪಕ್ಷದ ಕಾನೂನು ಘಟಕದ ಜಿಲ್ಲಾ ಅಧ್ಯಕ್ಷ ಜೋಸೆಫ್ ಉದೋಜಿ ಮಾತನಾಡಿ, “ರೈತರು ಯಾವುದೇ ಕಾರಣಕ್ಕೂ ಎದೆಗುಂದದೆ ಮುನ್ನುಗ್ಗಬೇಕು. ರೈತರ ಬೇಡಿಕೆಗಳು ನ್ಯಾಯಸಮ್ಮತವಾಗಿದ್ದು, ಸರ್ಕಾರ ಸ್ಪಂದಿಸಬೇಕು. ಯಾವುದೇ ರೀತಿಯ ಕಾನೂನು ಹೋರಾಟಕ್ಕೆ ಕಾನೂನಿನ ನೆರವು ನೀಡಲು ಜೆಡಿಎಸ್ ಪಕ್ಷ ಸದಾ ರೈತರೊಂದಿಗೆ ಇರುತ್ತದೆ” ಎಂದು ಭರವಸೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಹಾವೇರಿ | ನಿರಂತರ ಮಳೆಯಿಂದ ಬೆಳ್ಳುಳ್ಳಿ ಬೆಳೆ ಹಾನಿ: ಸರ್ಕಾರದ ನೆರವಿನ ನಿರೀಕ್ಷೆಯಲ್ಲಿ ಸಂತ್ರಸ್ತ ರೈತರು
ಜೆಡಿಎಸ್ ಮುಖಂಡರಾದ ಬಸವರಾಜ ಅಪ್ಪಣ್ಣವರ, ರಮೇಶ್ ಹುಣಸಿಮರದ, ಸಂತೋಷ್ ಪಾಟೀಲ, ಪ್ರಫುಲ್ ಪುಣೇಕರ, ಜಿ.ಕೆ. ಕೊಳ್ಳಿಮಠ, ಶರಣಪ್ಪ ಹೂಗಾರ, ಸಿದ್ದಯ್ಯ ಹೊಂಬಾಳಿಮಠ, ಮಂಜುಳಾ ಮೇಟಿ, ರಾಜೇಶ್ವರಿ ಹೂಗಾರ, ಶರಣಪ್ಪ ತೂಲಿ, ಅಭಿಷೇಕ್ ದೇಸಾಯಿ, ಲಲಿತಾ ಕಲ್ಲಪ್ಪನವರ, ಅಭಿಷೇಕ್ ಕಂಬಳಿ, ಜಯರಾಜ ವಾಲಿ, ರೈತ ಮುಖಂಡರಾದ ಬಸವಣೇಪ್ಪ ಚಿಂಚಲಿ, ಎನ್.ಟಿ. ಪೂಜಾರ ಸೇರಿದಂತೆ ಜಿಲ್ಲೆಯ ಹಲವು ರೈತ ಸಂಘಟನೆಯ ಮುಖಂಡರು ಮತ್ತು ರೈತರು ಇದ್ದರು.