ನದಿಯಲ್ಲಿ ಅಕ್ರಮವಾಗಿ ಮರಳುಗಾರಿಕೆ ನಡೆಸುತ್ತಿದ್ದುದ್ದನ್ನು ಪ್ರಶ್ನಿಸಿದ್ದಕ್ಕೆ ರೈತನ ಮೇಲೆ ದಂಧೆಕೋರರು ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನಲ್ಲಿ ನಡೆದಿದೆ.
ತಾಲೂಕಿನ ಶೀರನಹಳ್ಳಿಯಲ್ಲಿ ಘಟನೆ ನಡೆದಿದೆ. ಗ್ರಾಮದ ಸಮೀಪ ತುಂಗಭದ್ರಾ ನದಿಯಲ್ಲಿ ಮರಳು ದಂಧೆಕೋರರು ಅಕ್ರಮ ಮರಳು ಗಣಿಗಾರಿಕೆ ನಡೆಸುತ್ತಿದ್ದರು. ಲಾರಿ, ಟ್ರ್ಯಾಕ್ಟರ್‌ಗಳಲ್ಲಿ ಮರಳು ಸಾಗಿಸುತ್ತಿದ್ದ ದಂಧೆಕೋರರು ನದಿ ದಡದ ಜಮೀನುಗಳನ್ನು ಹಾಳು ಮಾಡುತ್ತಿದ್ದರು. ಅಕ್ರಮ ಮರಳುಗಾರಿಕೆ ನಡೆಸಿ ನದಿಯನ್ನೂ, ತಮ್ಮ ಜಮೀನನ್ನೂ ಹಾಳುಮಾಡುತ್ತಿದ್ದುದ್ದನ್ನು ಗ್ರಾಮದ ರೈತ ಕೋಟೆಪ್ಪ ಮಲ್ಲಾಪುರ ಪ್ರಶ್ನಿಸಿದ್ದಾರೆ. ಆ ಕಾರಣಕ್ಕೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂದು ವರದಿಯಾಗಿದೆ.
ಶೀರನಹಳ್ಳಿ ಗ್ರಾಮದವರೇ ಆದ ಡ್ಡದಯ್ಯ ಮಜ್ಜಗಿ ಎಂಬಾತ ಮತ್ತು ಆತನ ಸಂಗಡಿಗರು ರೈತ ಕೋಟೆಪ್ಪ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ತೀವ್ರವಾಗಿ ಗಾಯಗೊಂಡಿದ್ದ ಕೋಟೆಪ್ಪ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿಗಳು ಪರಾರಿಯಾಗಿದ್ದಾರೆ ಎಂದು ಹೇಳಲಾಗಿದೆ.