ತಾಯಿ ಮಡಿಲಿನಲ್ಲಿದ್ದ ಆರು ದಿನದ ಗಂಡು ಮಗುವನ್ನು ತಂದೆಯೇ ಬೇರ್ಪಡಿಸಿದ ಘಟನೆ ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದಲ್ಲಿ ನಡೆದಿದೆ. ಮಗುವಿನ ಜೊತೆ ಓಡಾಡುತ್ತಿರುವ ವ್ಯಕ್ತಿಯನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು.
ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಗದಗನಲ್ಲಿ ಮಗುವಿನ ಜೊತೆ ಬಾಣಂತಿ ಹಾಗೂ ಪತಿ ವಾಸವಿದ್ದರು. ಕುಡಿದ ಮತ್ತಿನಲ್ಲಿ ತಾಯಿಯ ಮಡಿಲಲ್ಲಿದ್ದ ಆರು ದಿನದ ಕಂದಮ್ಮನನ್ನು ತಂದೆ ಹೊತ್ತೊಯ್ದಿದ್ದ.
ಹಸುಗೂಸಿನ ಜೊತೆ ವ್ಯಕ್ತಿಯ ಅನುಮಾನಾಸ್ಪದ ಓಡಾಟ ಕಂಡ ಸ್ಥಳಿಯರು, ಕೂಡಲೇ ಲಕ್ಷ್ಮೇಶ್ವರ ಠಾಣಾ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಮತ್ತು ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಮಗುವನ್ನು ರಕ್ಷಣೆ ಮಾಡಿದ್ದು, ಆಸ್ಪತ್ರೆಗೆ ದಾಖಲಿಸಿ ಸೂಕ್ತ ಚಿಕಿತ್ಸೆ ಕೊಡಿಸಿದ್ದಾರೆ. ಸದ್ಯ ಮಗುವನ್ನು ಮಕ್ಕಳ ದತ್ತು ಸ್ವೀಕಾರ ಕೇಂದ್ರದಲ್ಲಿ ಆರೈಕೆ ಮಾಡಲಾಗಿದೆ.
ಘಟನೆ ಬಳಿಕ ಮಗುವಿನ ತಂದೆ ಸ್ಥಳದಿಂದ ಪರಾರಿಯಾಗಿದ್ದ. ಮರುದಿನ ಮಗು ಹುಡುಕಿಕೊಂಡು ಪೋಷಕರು ಬಂದಿದ್ದಾರೆ. ಈ ವೇಳೆ ಮಗು ಹಸ್ತಾಂತರಿಸಲು ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಹಿಂದೇಟು ಹಾಕಿದ್ದು, ಸೂಕ್ತ ತನಿಖೆ ನಡೆಸಿದ ಬಳಿಕ ಪೋಷಕರಿಗೆ ಮಗು ನೀಡಲು ನಿರ್ಧರಿಸಿದ್ದಾರೆ.