ಪ್ರತಿ ವಾರ ಬಡ್ಡಿ ಪಾವತಿಸುವಂತೆ ಮತ್ತು ಸಾಲ ಮರುಪಾವತಿಸುವಂತೆ ಮೈಕ್ರೋಫೈನಾನ್ಸ್ ಕಂಪನಿ ನೀಡುತ್ತಿದ್ದ ನಿರಂತರ ಕಿರುಕುಳದಿಂದಾಗಿ ಹೋಟೆಲ್ ಮಾಲೀಕರೊಬ್ಬರು ಕುಟುಂಬ ಸಮೇತ ಮನೆ ತೊರೆದು ನಾಪತ್ತೆಯಾಗಿರುವ ಘಟನೆ ಗದಗ ನಗರದಲ್ಲಿ ನಡೆದಿದೆ.
ಗದಗ ನಗರದ ಎಪಿಎಂಸಿ ಬಳಿ ಹೋಟೆಲ್ ನಡೆಸುತ್ತಿದ್ದ ಪರಶುರಾಮ್ ಅವರು ತಮ್ಮ ಹೋಟೆಲ್‌ಗೆ ಬೀಗ ಹಾಕಿ, ಕುಟುಂಬ ಸಮೇತ ನಗರ ತೊರೆದಿದ್ದಾರೆ ಎಂದು ವರದಿಯಾಗಿದೆ. ಇತ್ತೀಚೆಗೆ ಅವರು ತಮ್ಮ ಸ್ನೇಹಿತರಿಗೆ ಕರೆ ಮಾಡಿ ಫೈನಾನ್ಸ್ ಕಂಪನಿಯ ಕಿರುಕುಳದಿಂದಾಗಿ ನಗರದ ತೊರೆದಿರುವುದಾಗಿ ತಿಳಿಸಿದ್ದಾರೆ. ಅಲ್ಲದೆ, ಆತ್ಮಹತ್ಯೆ ಮಾಡಿಕೊಳ್ಳಲು ಯೋಜಿಸಿದ್ದೇವೆಂದು ಹೇಳಿಕೊಂಡಿರುವುದಾಗಿ ವರದಿಯಾಗಿದೆ.
ಫೈನಾನ್ಸ್ ಕಂಪನಿಯಲ್ಲಿ ಸಾಲ ಪಡೆದುಕೊಂಡು, ಪ್ರತಿ ವಾರ ಬಡ್ಡಿ ಪಾವತಿ ಮಾಡುತ್ತಲೇ ಬಂದಿದ್ದರೂ 60 ಲಕ್ಷ ರೂ.ವರೆಗೆ ಫೈನಾನ್ಸ್ ಕಂಪನಿ ಬಾಕಿ ಇದೆ ಎಂದು ಹೇಳುತ್ತಿದೆ. ಹಣವನ್ನು ಪಾವತಿಸುವಂತೆ ಮಹಿಳಾ ಪೇದೆಯೊಬ್ಬರ ಪತಿ ನಿರಂತರವಾಗಿ ಒತ್ತಡ ಹಾಕುತ್ತಿದ್ದಾರೆ. ಪಾವತಿಸದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಪರಶುರಾಮ್ ತನ್ನ ಸ್ನೇಹಿತರ ಬಳಿ ಹೇಳಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ರಾಜ್ಯದಲ್ಲಿ ಮೈಕ್ರೋಫೈನಾನ್ಸ್ ಕಂಪನಿಗಳ ಕಿರುಕುಳ ಹೆಚ್ಚುತ್ತಲೇ ಇದೆ. ಹಾವೇರಿ, ಮೈಸೂರು, ಉಡುಪಿ, ಚಿಕ್ಕಮಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮೈಕ್ರೋ ಫೈನಾನ್ಸ್ ಕಿರುಕುಳ ಸಹಿಸಲಾರದೆ ಹಲವರು ಊರು ಬಿಡುತ್ತಿದ್ದಾರೆ. ಕೆಲವರು ಆತ್ಮಹತ್ಯೆಯನ್ನೂ ಮಾಡಿಕೊಂಡಿದ್ದಾರೆ. ಹೀಗಾಗಿ, ಮೈಕ್ರೋಫೈನಾನ್ಸ್ ಕಿರುಕುಳವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಶನಿವಾರ ಗೃಹ ಕಚೇರಿ ಕೃಷ್ಣದಲ್ಲಿ ಸಭೆ ಕರೆಯಲಾಗಿದ್ದು, ಮೈಕ್ರೋಫೈನಾನ್ಸ್ ಹಾವಳಿಗೆ ಕಡಿವಾಣ ಹಾಕಲು ಚರ್ಚೆಗಳು ನಡೆಯಲಿವೆ ಎಂದು ತಿಳಿದುಬಂದಿದೆ.