ಕೊಣ್ಣೂರು : ಜಾನುವಾರುಗಳಿಗೆ ಮೇವು ಕೊರತೆ ನೀಗಿಸಲು ತಾಲೂಕು ಆಡಳಿತದಿಂದ ಮೇವು ಬ್ಯಾಂಕ್ ಆರಂಭ ಪ್ರತೀ ಕೆ.ಜಿ ಮೇವಿಗೆ ೨ ರೂ ಅಂತೆ ರೈತರ ಜಾನುವಾರುಗಳಿಗೆ ವಿತರಣೆ- ತಹಶೀಲ್ದಾರ ಹೇಳಿಕೆ
ಬರಗಾಲದಿಂದಾಗಿ ಜಾನುವಾರುಗಳಿಗೆ ಎದುರಾಗಿರುವ ಮೇವಿನ ಕೊರತೆ ನೀಗಿಸಲು ತಾಲೂಕು ಆಡಳಿತದಿಂದ ಮೇವಿನ ಬ್ಯಾಂಕ್ ಆರಂಭ ಮಾಡಲಾಗಿದೆ. ಪ್ರತಿ ಕೆ.ಜಿ. ಮೇವಿಗೆ ಎರಡು ರೂ.ನಂತೆ ರೈತರಿಗೆ ಕೈಗೆಟುಕುವ ದರದಲ್ಲಿ ತಾಲೂಕು ಆಡಳಿತದಿಂದ ಮೇವನ್ನು ಮಾರಾಟ ಮಾಡಲಾಗುತ್ತದೆ. ಇದರ ಸದೂಪಯೋಗವನ್ನು ಕೊಣ್ಣೂರು ಹೋಬಳಿ ಮಟ್ಟದ ಎಲ್ಲ ರೈತರು ಪಡೆದುಕೊಳ್ಳಬೇಕೆಂದು ನರಗುಂದ ತಹಸೀಲ್ದಾರ ಶ್ರೀಶೈಲ್ ತಳವಾರ ಹೇಳಿದರು.
ಗದಗ ಜಿಲ್ಲೆಯ ನರಗುಂದ ತಾಲೂಕಿನ ಕೊಣ್ಣೂರಿನ ಎಪಿಎಂಸಿ ಆವರಣದಲ್ಲಿ ಜಿಲ್ಲಾ ಪಂಚಾಯತ ಮತ್ತು ತಾಲೂಕು ಆಡಳಿತ ವತಿಯಿಂದ 2024-25ನೇ ಸಾಲಿನ ಬರಗಾಲ ಯೋಜನೆಯ ಅಡಿಯಲ್ಲಿ ರೈತರಿಗೆ ರಿಯಾಯತಿ ದರದಲ್ಲಿ ಮೇವು ಪೂರೈಸುವ ಮೇವು ಬ್ಯಾಂಕ್ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ತಾಲೂಕಿನಲ್ಲಿ ಬರಗಾಲದಿಂದಾಗಿ ಕುಡಿಯುವ ನೀರು, ಜಾನುವಾರಗಳಿಗೆ ಮೇವಿನ ಕೊರತೆ ನೀಗಿಸಲು ತಾಲೂಕು ಆಡಳಿತ ಯುದ್ದೋಪಾದಿಯಲ್ಲಿ ಕ್ರಮಗಳನ್ನು ಕೈಗೊಳ್ಳುತ್ತಿದೆ. ಜಾನುವಾರುಗಳಿಗೆ ಎದುರಾಗಿರುವ ಮೇವಿನ ಕೊರತೆ ನೀಗಿಸಲು ಸದ್ಯ ಕೊಣ್ಣೂರು ಹೋಬಳಿ ಮಟ್ಟದಲ್ಲಿ ಸುಮಾರು ಎರಡೂವರೆ ಸಾವಿರ ಜಾನುವಾರಗಳಿಗೆ ಮೇವಿನ ಕೊರತೆ ತಪ್ಪಿಸಲು ಮೇವಿನ ಬ್ಯಾಂಕ್ ಇಂದು ಉದ್ಘಾಟನೆ ಮಾಡಲಾಗಿದೆ ಎಂದರು.
ಇದರ ಸದೂಪಯೋಗವನ್ನು ಕೊಣ್ಣೂರು ಹೋಬಳಿ ವ್ಯಾಪ್ತಿಗೆ ಬರುವ ವಾಸನ, ಶೀರೋಳ, ಕೊಣ್ಣೂರು, ರೆಡ್ಡರ ನಾಗನೂರು, ಹದಲಿ, ಸುರಕೋಡ ಮತ್ತು ಬೈರನಹಟ್ಟಿ ಗ್ರಾಮ ಪಂಚಾಯತ ವ್ಯಾಪ್ತಿಯ ರೈತರು ಪಡೆದುಕೊಳ್ಳಬೇಕೆಂದು ತಿಳಿಸಿದರು.
ಮೇವು ಬ್ಯಾಂಕ್ ನಿಂದ ಒಂದು ಜಾನುವಾರಿಗೆ ಪ್ರತಿನಿತ್ಯ 6 ಕೆ.ಜಿ ಮೇವನ್ನು ಕೊಡಲಾಗುವುದು. ಪ್ರತಿ ರೈತರಿಗೆ 50ಕೆ.ಜಿವರೆಗೂ ಮೇವನ್ನು ವಿತರಿಸಲಾಗುವುದು. ರೈತರು ಒಂದು ಕೆ.ಜಿ ಮೇವನ್ನು 2 ರೂ.ಕೊಟ್ಟು ಖರೀದಿ ಮಾಡಬಹುದು. ಇದರಿಂದ ಬರಗಾಲದಲ್ಲಿ ರೈತರ ಜಾನುವಾರುಗಳಿಗೆ ಎದುರಾಗಿರುವ ಮೇವಿನ ಕೊರತೆಯನ್ನು ನೀಗಿಸಲು ಸಹಕಾರಿಯಾಗುತ್ತದೆ ಎಂದರು.
ಮೇವಿನ ಬ್ಯಾಂಕ್‌ನಲ್ಲಿ ಸದ್ಯ 4 ಟನ್ ಮೇವು ದಾಸ್ತಾನು ಮಾಡಲಾಗಿದೆ. ಇದರಿಂದ ಮುಂದಿನ ಎರಡ್ಮೂರು ತಿಂಗಳಿಗೆ ಸಾಕಾಗುವಷ್ಟು ಮೇವನ್ನು ಸಂಗ್ರಹ ಮಾಡಿಕೊಳ್ಳಲಾಗಿದೆ. ಈಗಾಗಲೇ ಮೇವು ಪೂರೈಕೆ ಮತ್ತು ಸರಬರಾಜಿಗೆ ಟೆಂಡರ್ ಕರೆದು ಟೆಂಡರದಾರರನ್ನು ಗುರ್ತಿಸಲಾಗಿದೆ. ಮೇವು ಬ್ಯಾಂಕ್‌ನಲ್ಲಿ ಮೇವು ಖಾಲಿಯಾದ ಕೂಡಲೇ ಟೆಂಡರ್‌ದಾರರ ಮೂಲಕ ಮೇವು ದಾಸ್ತಾನು ಕೆಲಸ ಮಾಡಲಾಗುವುದು. ಮೇವು ಬ್ಯಾಂಕ್ ಪ್ರತಿನಿತ್ಯ ಬೆಳಿಗ್ಗೆ 10 ಗಂಟೆಯಿಂದ ಸಾಯಂಕಾಲ 5.30ರವರೆಗೆ ತೆರೆದಿರುತ್ತದೆ. ಇದರ ಸದೂಪಯೋಗವನ್ನು ರೈತರು ಪಡೆದುಕೊಳ್ಳಬೇಕು ಎಂದು ನರಗುಂದ ಪಶುಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ವೆಂಕಟೇಶ ಹೇಳಿದರು.
ಕೊಣ್ಣೂರು ಗ್ರಾಮದ ರೈತರಾದ ಸಿದ್ದಪ್ಪ ಡಂಬಳ ಮತ್ತು ಅಲ್ಲಿಸಾಬ್ ಸುರಕೋಡ ಅವರಿಗೆ ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳಾದ ಸೋಮಶೇಖರ್ ಬಿರಾದರ್ ಅವರು ಮೇವಿನ ಗಂಟನ್ನು ವಿತರಿಸುವ ಮೂಲಕ ಮೇವಿನ ಬ್ಯಾಂಕನ್ನು ಉದ್ಘಾಟನೆಗೊಳಿಸಿದರು.
ಈ ಸಂದರ್ಭದಲ್ಲಿ ಕೊಣ್ಣೂರು ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ಮಂಜುನಾಥ ಗಣಿ, ಟಿ.ಆರ್. ಪಾಟೀಲ್ ಗ್ರಾಮ ಆಡಳಿತ ಅಧಿಕಾರಿಗಳು, ಜಿ.ಎ. ನಿರಾಣಿ ಪಶು ಪಾಲನಾ ಇಲಾಖೆ, ಐ.ವಾಯ್. ಕಳಸಣ್ಣವರ ಕಂದಾಯ ನಿರೀಕ್ಷಕರು ಮತ್ತು ಗ್ರಾಮ ಪಂಚಾಯತ ಸಿಬ್ಬಂದಿ ಹಾಜರಿದ್ದರು.